ಪ್ರಾದೇಶಿಕ ಭಾಷೆಗಳಲ್ಲಿ ಸಿಎಲ್ಎಟಿ- 2024 ನಡೆಸಲು ಸಾಧ್ಯವಿಲ್ಲ: ದೆಹಲಿ ಹೈಕೋರ್ಟ್‌ಗೆ ತಿಳಿಸಿದ ಎನ್ಎಲ್‌ಯುಗಳ ಒಕ್ಕೂಟ

ಇಂಗ್ಲಿಷ್ ನ್ಯಾಯಾಲಯದ ಭಾಷೆಯಾಗಿದ್ದು ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್ ಮಾಡಲೆಂದು ಆ ಭಾಷೆಯಲ್ಲಿ ಪ್ರಾವೀಣ್ಯತೆ ಗಳಿಸುವುದಕ್ಕಾಗಿ ವಿದ್ಯಾರ್ಥಿಗಳನ್ನು ಕಾನೂನು ವಿವಿಗಳು ಅಣಿಗೊಳಿಸುತ್ತಿರುತ್ತವೆ ಎಂದು ಒಕ್ಕೂಟ ತಿಳಿಸಿದೆ.
CLAT, Delhi High Court
CLAT, Delhi High Court
Published on

ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್‌ಎಟಿ)- 2024 ಅನ್ನು ಹಿಂದಿ ಮತ್ತಿತರ ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವುದು ಅಸಾಧ್ಯ ಎಂದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯಗಳ ಒಕ್ಕೂಟ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ  [ಸುಧಾಂಶು ಪಾಠಕ್ ಮತ್ತು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟದ ಕಾರ್ಯದರ್ಶಿ ಇನ್ನಿತರರ ನಡುವಣ ಪ್ರಕರಣ].

ಡಿಸೆಂಬರ್ 2023 ರಲ್ಲಿ ನಡೆಯಲಿರುವ ಸಿಎಲ್‌ಎಟಿ- 2024  ಪರೀಕ್ಷಾ ಮಾದರಿ ಮತ್ತು ಅದರಲ್ಲಿ ಬಳಸುವ ಭಾಷಾ ವಿಧಾನವನ್ನು ಈಗಾಗಲೇ ಘೋಷಿಸಲಾಗಿದ್ದು ಅನೇಕ ಆಕಾಂಕ್ಷಿಗಳು ಅದಕ್ಕಾಗಿ ತಯಾರಿ ಆರಂಭಿಸಿದ್ದಾರೆ ಎಂದು ಒಕ್ಕೂಟ ಹೇಳಿದೆ.

ಪ್ರಶ್ನೆಪತ್ರಿಕೆಗಳು, ಮಾದರಿ ಉತ್ತರಗಳನ್ನು ಸಿದ್ಧಪಡಿಸುವ ಪೂರ್ವಸಿದ್ಧತಾ ಕಾರ್ಯ ಪೂರ್ಣಗೊಂಡಿದ್ದು ಒಎಂಆರ್‌ಗಳನ್ನು ತಯಾರಿಸುವ ಸಾಫ್ಟ್‌ವೇರ್‌ ತಾಂತ್ರಿಕ ಬೆಂಬಲಕ್ಕೆ ಸಂಬಂಧಿಸಿದ ಅಗತ್ಯ ಒಪ್ಪಂದಗಳು ಪೂರ್ಣಗೊಂಡಿವೆ. ಆದ್ದರಿಂದ ಬೇರೆ ಭಾಷೆ ಆಯ್ಕೆಗೆ ಅವಕಾಶ ನೀಡುವುದು ಸಿಎಲ್‌ಎಟಿ- 2024ಕ್ಕೆ ಸಂಬಂಧಿಸಿದಂತೆ ಅಸಾಧ್ಯವಾದುದಾಗಿದೆ ಎಂದು ಒಕ್ಕೂಟ ಸಲ್ಲಿಸಿರುವ ಅಫಿಡವಿಟ್‌ ತಿಳಿಸಿದೆ.

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳಲ್ಲಿ ಇಂಗ್ಲಿಷ್‌ ನ್ಯಾಯಾಲಯದ ಭಾಷೆಯಾಗಿದ್ದು ಇಲ್ಲಿ ಪ್ರಾಕ್ಟೀಸ್‌ ಮಾಡಲೆಂದು ಆ ಭಾಷೆಯಲ್ಲಿ ಪ್ರಾವೀಣ್ಯತೆ ಗಳಿಸುವುದಕ್ಕಾಗಿ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಅಣಿಗೊಳಿಸುತ್ತಿರುತ್ತವೆ ಎಂದು ಎನ್‌ಎಲ್‌ಯುಗಳ ಒಕ್ಕೂಟ ತಿಳಿಸಿದೆ.

ಸಿಎಲ್‌ಎಟಿ ಪರೀಕ್ಷೆಯನ್ನು ಯುಪಿಎಸ್‌ಸಿ, ಐಐಟಿ- ಜೆಇಇ ಮತ್ತು ನೀಟ್‌ ರೀತಿಯ ಇತರ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗಳೊಂದಿಗೆ ಹೋಲಿಸಲಾಗದು ಎಂದು ಕೂಡ ವಾದಿಸಲಾಗಿದೆ. ಏಕೆಂದರೆ ಈ ಪರೀಕ್ಷೆಗಳು ಹೆಚ್ಚು ದೊಡ್ಡ ಪ್ರಮಾಣದಲ್ಲಿರುತ್ತವೆ. ಹಾಗಿದ್ದರೂ ಕೂಡ ಸಂವಿಧಾನದ ಎಂಟನೇ ಪರಿಚ್ಛೇದದಡಿ ನಮೂದಿಸಲಾದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಈ ಪರೀಕ್ಷೆಗಳನ್ನು ನಡೆಸುತ್ತಿಲ್ಲ ಎಂದು ಅದು ವಿವರಿಸಿದೆ.

ಸಿಎಲ್‌ಎಟಿ ಪರೀಕ್ಷೆಯನ್ನು ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ನಡೆಸಬೇಕೆಂದು ಒತ್ತಾಯಿಸಿ ಸುಧಾಂಶು ಪಾಠಕ್ ಎಂಬ ಕಾನೂನು ವಿದ್ಯಾರ್ಥಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ (ಪಿಐಎಲ್‌) ಪ್ರತಿಕ್ರಿಯೆಯಾಗಿ ಒಕ್ಕೂಟ ಈ ಅಫಿಡವಿಟ್ ಸಲ್ಲಿಸಿದೆ.

Kannada Bar & Bench
kannada.barandbench.com