ಕರ್ನಾಟಕದ ನೆಲ-ಜಲ ಪಡೆದು ಕನ್ನಡಿಗರಿಗೇ ಉದ್ಯೋಗ ನೀಡುತ್ತಿಲ್ಲ: ಹೈಕೋರ್ಟ್‌ ಆಕ್ರೋಶ

ವಾಣಿಜ್ಯೋದ್ಯಮ ಆರಂಭಕ್ಕಾಗಿ ಸರ್ಕಾರದಿಂದ ಕೋಟ್ಯಂತರ ಹಣ ಬೆಲೆಬಾಳು ಜಮೀನು ಪಡೆದರೂ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಲು ಖಾಸಗಿ ಕಂಪನಿ ಅಸಡ್ಡೆ ತೋರುತ್ತಿದೆ ಎಂದು ಆಕ್ಷೇಪಿಸಿದ ನ್ಯಾಯಾಲಯ.
Kannada and Karnataka High Court
Kannada and Karnataka High Court
Published on

ಕನ್ನಡಿಗರ ನೆಲ-ಜಲ ಪಡೆದು ಅವರಿಗೇ ಉದ್ಯೋಗ ನೀಡುತ್ತಿಲ್ಲ. ಅಧಿಕಾರಿಗಳ ಹುದ್ದೆಗಳಿಗೆ ಕನ್ನಡಿಗರನ್ನು ನೇಮಿಸುವುದಿಲ್ಲ. ಕೇವಲ ಸಿ ಹಾಗೂ ಡಿ ವೃಂದದ ಉದ್ಯೊಗಗಳನ್ನು ಕನ್ನಡಿಗರಿಗೆ ನೀಡುವುದನ್ನು ಒಪ್ಪಲು ಸಾಧ್ಯವಿಲ್ಲ. ಎಲ್ಲಾ ಹಂತದ ಹುದ್ದೆಗಳಲ್ಲೂ ಕನ್ನಡಿಗರಿಗೆ ಅವಕಾಶ ಕಲ್ಪಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಮೌಖಿಕವಾಗಿ ಕಿಡಿಕಾರಿದೆ.

ವಾಣಿಜ್ಯೋದ್ಯಮ ಆರಂಭಕ್ಕಾಗಿ ಸರ್ಕಾರದಿಂದ ಕೋಟ್ಯಂತರ ಹಣ ಬೆಲೆಬಾಳುವ ಜಮೀನು ಪಡೆದರೂ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಲು ಖಾಸಗಿ ಕಂಪನಿ ಅಸಡ್ಡೆ ತೋರುತ್ತಿದೆ. ಕಾಲ್ ಸೆಂಟರ್‌ ಸೇರಿದಂತೆ ವಿವಿಧ ಕೇಂದ್ರಗಳ ನಿರ್ಮಾಣಕ್ಕೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಹಾರ್ಡ್‌ವೇರ್ ಪಾರ್ಕ್‌ನಲ್ಲಿ ನಾಲ್ಕು ಎಕರೆ ಜಮೀನು ಹಂಚಿಕೆ ಮಾಡಿ ಹೊರಡಿಸಿದ್ದ ಆದೇಶ ರದ್ದುಪಡಿಸಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕ್ರಮ ಪ್ರಶ್ನಿಸಿ ಐಡಿಬಿಐ ಬ್ಯಾಂಕ್‌ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಕನ್ನಡಿಗರಿಗೆ ಉದ್ಯೋಗ ನೀಡಲು ಬ್ಯಾಂಕ್‌ ಹಿಂದೇಟು ಹಾಕಿರುವ ಅಂಶ ಗಮನಿಸಿ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಪೀಠವು ಕನ್ನಡಿಗರ ನೆಲ-ಜಲ ಪಡೆದು ಅವರಿಗೆ ಉದ್ಯೋಗ ನೀಡದಿದ್ದರೆ ಹೇಗೆ? ಉದ್ಯೋಗ ನೀಡದಿದ್ದರೆ ಕನ್ನಡಿಗರ ಆತ್ಮಸಾಕ್ಷಿಗೆ ಚುಚ್ಚಿದಂತಾಗಲಿದೆ. ಜವಾನ-ಜಾಡಮಾಲಿ ಅಂತಹ ಉದ್ಯೋಗಗಳಿಗೆ ಮಾತ್ರ ಕನ್ನಡಿಗರನ್ನು ನೇಮಕ ಮಾಡುವುದಲ್ಲ. ಎಲ್ಲಾ ಹಂತದ ಹುದ್ದೆಗಳಿಗೂ ಕನ್ನಡಿಗರಿಗೆ ಅವಕಾಶ ಕಲ್ಪಿಸಬೇಕು. ಸಂಸ್ಥೆಯಲ್ಲಿ ಕನ್ನಡಿಗರಿಗೆ ಶೇ.80ರಷ್ಟು ಉದ್ಯೋಗ ನೀಡುವುದಾಗಿ ಪ್ರಮಾಣಪತ್ರ ಸಲ್ಲಿಸುವಂತೆ ಐಡಿಬಿಐ ಬ್ಯಾಂಕ್ ಗೆ ಸೂಚಿಸಿದೆ.

ಕಾದಂಬರಿಕಾರ ಗಳಗನಾಥ ಅವರ ಮಾತುಗಳನ್ನು ಪ್ರಸ್ತಾಪಿಸಿದ ನ್ಯಾ. ದೀಕ್ಷಿತ್‌ ಅವರು, ಕನ್ನಡಿಗರಿಗೆ ಕನ್ನಡಿಗರಿಂದ ಆದಷ್ಟು ಅನ್ಯಾಯ ಬೇರೆಯವರಿಂದ ಆಗಿಲ್ಲ. ಇಂತಹ ಅನ್ಯಾಯ ಬೇರೆಲ್ಲೂ ಆಗಿಲ್ಲ. ಬ್ರಿಟಿಷ್‌ ಅಧಿಕಾರಿ ರಾಬರ್ಟ್ ಕ್ಲೈವ್ ಸ್ಥಳೀಯರನ್ನು ಗ್ರೂಪ್ ಸಿ ಹುದ್ದೆಗೆ ನೇಮಿಸುತ್ತಿದ್ದರು. ಅದೇ ರೀತಿ ನೀವು ಸಹ ವರ್ತಿಸಬಾರದು ಎಂದು ಬ್ಯಾಂಕ್‌ ಪರ ವಕೀಲರಿಗೆ ಕಟುವಾಗಿ ತಾಕೀತು ಮಾಡಿತು.

ಅಂತಿಮವಾಗಿ ಪ್ರಕರಣದಲ್ಲಿ ಭೂಮಿ ಹಂಚಿಕೆ ಮಾಡಿ ನೀಡಲಾಗಿದ್ದ ಮಂಜೂರಾತಿ ಪತ್ರ ರದ್ದುಪಡಿಸಿರುವ ವಿಚಾರ ಸಂಬಂಧ ಯಥಾಸ್ಥಿತಿ ಕಾಯ್ದಕೊಳ್ಳುವಂತೆ ಕೆಐಎಡಿಬಿ ಮತ್ತು ಐಡಿಬಿಐ ಬ್ಯಾಂಕಿಗೆ ಸೂಚಿಸಿ ವಿಚಾರಣೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಕೆಐಡಿಬಿ ಅಭಿವೃದ್ಧಿಪಡಿಸಿರುವ ‘ಬೆಂಗಳೂರು ಹಾರ್ಡ್‌ವೇರ್ ಪಾಕ್‌ರ್ನಲ್ಲಿ 4.5 ಎಕರೆಯನ್ನು ಐಡಿಬಿಐ ಬ್ಯಾಂಕಿಗೆ 2013ರ ಫೆಬ್ರವರಿ 15ರಂದು ಹಂಚಿಕೆ ಮಾಡಿತ್ತು. ಬ್ಯಾಂಕಿನ ರೀಜನಲ್‌ ಪ್ರೊಸೆಸಿಂಗ್‌ ಯೂನಿಟ್‌, ಕರೆನ್ಸಿ ಚೆಸ್ಟ್‌ ಸೆಂಟರ್‌, ಕಾಲ್‌ ಸೆಂಟರ್‌, ಸಿಬ್ಬಂದಿ ವಸತಿ ನಿಲಯ ಸೇರಿದಂತೆ ಇನ್ನಿತರ ಕಟ್ಟಡ ನಿರ್ಮಾಣಕ್ಕೆ ಈ ಜಮೀನು ಹಂಚಿಕೆ ಮಾಡಿತ್ತು. ಎರಡು ವರ್ಷದಲ್ಲಿ ಯೋಜನೆ ಜಾರಿಗೆ ತರಬೇಕು. ಸಿಬ್ಬಂದಿ ನೇಮಕಾತಿ ಅಧಿಕಾರಿ ಹುದ್ದೆಗೆ ಕನ್ನಡಿಗರನ್ನು ನೇಮಿಸಬೇಕು ಎಂಬುದು ಭೂಮಿ ಹಂಚಿಕೆಗೆ ಕೆಐಎಡಿಬಿ ಷರತ್ತು ವಿಧಿಸಿತ್ತು. ಹತ್ತು ವರ್ಷವಾದರೂ ಯೋಜನೆ ಜಾರಿ ಮಾಡದ ಹಿನ್ನೆಲೆಯಲ್ಲಿ ಭೂಮಿ ಹಂಚಿಕೆ ಪತ್ರ ರದ್ದುಪಡಿಸಿ 2023ರ ಜುಲೈ 14ರಂದು ಕೆಐಎಡಿಬಿ ಆದೇಶಿಸಿತ್ತು.

ಭೂಮಿ ಹಂಚಿಕೆ ಪತ್ರ ರದ್ದುಪಡಿಸಿದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಬ್ಯಾಂಕ್‌ ತಕರಾರು ಅರ್ಜಿ ಸಲ್ಲಿಸಿತ್ತು. ಅ ಅರ್ಜಿ ವಜಾಗೊಳಿಸಿ 2024ರ ಮಾರ್ಚ್‌ 6ರಂದು ಏಕ ಸದಸ್ಯ ನ್ಯಾಯಪೀಠ ಆದೇಶಿಸಿತ್ತು. ಅಲ್ಲದೆ, ಇಡೀ ಯೋಜನೆಯಲ್ಲಿ ಸಿಬ್ಬಂದಿ ನೇಮಕಾತಿ ಅಧಿಕಾರಿ ಹುದ್ದೆಯೊಂದಕ್ಕೆ ಕನ್ನಡಿಗರನ್ನು ನೇಮಕ ಮಾಡಬೇಕು ಎಂಬ ಷರತ್ತು ಪಾಲಿಸದ್ದಕ್ಕೆ ಏಕಸದಸ್ಯ ಪೀಠ ಗಂಭೀರ ಆಕ್ಷೇಪ ಎತ್ತಿತ್ತು. ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಬ್ಯಾಂಕ್‌ ಮೇಲ್ಮನವಿ ಸಲ್ಲಿಸಿದೆ.

Kannada Bar & Bench
kannada.barandbench.com