ಅಕ್ರಮ ರಿವಾಲ್ವರ್‌: ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ದೋಷಿ ಎಂದಿದ್ದ ವಿಶೇಷ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್‌ ತಡೆ

ಸೋಮಶೇಖರ ರೆಡ್ಡಿ ಅವರು ಪರವಾನಗಿ ನವೀಕರಿಸಿಕೊಳ್ಳದೆ ಹಾಗೂ ಸಂಬಂಧಿತ ಠಾಣೆಗೆ ಹಿಂದಿರುಗಿಸದೆ 2010ರ ಜನವರಿ 1ರಿಂದ 2011ರ ನವೆಂಬರ್‌ 9ರವರೆಗೆ ಅಕ್ರಮವಾಗಿ ರಿವಾಲ್ವರ್ ಇರಿಸಿಕೊಂಡಿದ್ದರು.
BJP MLA G Somashekara Reddy
BJP MLA G Somashekara ReddyFacebook

ಪರವಾನಗಿ ನವೀಕರಿಸದೆ ಅಕ್ರಮವಾಗಿ ರಿವಾಲ್ವರ್ ಇಟ್ಟುಕೊಂಡ ಅಪರಾಧ ಪ್ರಕರಣದಲ್ಲಿ ಬಳ್ಳಾರಿಯ ಬಿಜೆಪಿ ಶಾಸಕ ಜಿ ಸೋಮಶೇಖರ್ ರೆಡ್ಡಿಯನ್ನು ದೋಷಿಯಾಗಿ ಪರಿಗಣಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ವಿಚಾರಣಾಧೀನ ನ್ಯಾಯಾಲಯದ ಆದೇಶ ರದ್ದು ಕೋರಿ ಶಾಸಕ ಸೋಮಶೇಖ ರೆಡ್ಡಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು. ಮೇಲ್ಮನವಿ ಕುರಿತ ಮುಂದಿನ ಆದೇಶದವರೆಗೆ ವಿಚಾರಣಾಧೀನ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಸೋಮಶೇಖರ ರೆಡ್ಡಿ ಅವರು 2006ರಲ್ಲಿ ಪರವಾನಗಿ ಪಡೆದು ರಿವಾಲ್ವರ್ ಖರೀದಿಸಿದ್ದರು. 2009ರ ಡಿಸೆಂಬ್‌ 31ಕ್ಕೆ ಪರವಾನಗಿ ಅವಧಿ ಮುಗಿದಿತ್ತು. ಪರವಾನಗಿ ನವೀಕರಿಸಿಕೊಳ್ಳದೆ ಹಾಗೂ ಸಂಬಂಧಿತ ಠಾಣೆಗೆ ಹಿಂದಿರುಗಿಸದೆ 2010ರ ಜನವರಿ 1ರಿಂದ 2011ರ ನವೆಂಬರ್‌ 9ರವರೆಗೆ ಅಕ್ರಮವಾಗಿ ರಿವಾಲ್ವರ್ ಇರಿಸಿಕೊಂಡಿದ್ದರು. 2011ರ ನವೆಂಬರ್‌ 10ರಂದು ರಿವಾಲ್ವಾರ್ ಅನ್ನು ಠಾಣೆಗೆ ತಲುಪಿಸಿದ್ದರು. 2011ರ ನವೆಂಬರ್‌ 16ರಂದು ಪರವಾನಗಿ ನವೀಕರಣಕ್ಕೆ ಅರ್ಜಿ ಹಾಕಿದ್ದರು. ಸಂಬಂಧಿತ ಪ್ರಾಧಿಕಾರವು 360 ರೂಪಾಯಿ ದಂಡ ಸಂಗ್ರಹಿಸಿ ಪರವಾನಗಿ ನವೀಕರಿಸಿತ್ತು.

ಆದರೆ, 2010ರ ಜನವರಿ 1ರಿಂದ 2011ರ ನವೆಂಬರ್‌ 9ರವರೆಗೆ ಅಕ್ರಮವಾಗಿ ರಿವಾಲ್ವರ್ ಇರಿಸಿಕೊಳ್ಳುವ ಮೂಲಕ ಸೋಮಶೇಖರ ರೆಡ್ಡಿ ಅಪರಾಧ ಎಸಗಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿ 2013ರಲ್ಲಿ ದೂರು ನೀಡಿದ್ದರು. ಅದನ್ನು ಆಧರಿಸಿ 2013ರ ಆಗಸ್ಟ್‌ 3ರಂದು ಬಳ್ಳಾರಿಯ ಬ್ರೂಸ್‌ಪೇಟೆ ಠಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ತನಿಖೆ ಪೂರ್ಣಗೊಳಿಸಿ, ಪೊಲೀಸರು ಜನಪ್ರತಿನಿಧಿ ವಿಶೇಷ ನ್ಯಾಯಾಲಯಕ್ಕೆ ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್ 21(1) 25(ಎಚ್) ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯವು ಸೋಮಶೇಖರ ರೆಡ್ಡಿ ಅವರನ್ನು ಭಾರತೀಯ ಶಸ್ತ್ರಾಸ್ತ್ರ ಕಾಯಿದೆ-1959ರ ಸೆಕ್ಷನ್ 25(1-ಬಿ)(ಎಚ್) ಅಡಿಯಲ್ಲಿ ಅಪರಾಧಿ ಎಂಬುದಾಗಿ ಘೋಷಿಸಿ 2022ರ ಅಕ್ಟೋಬರ್‌ 18ರಂದು ಆದೇಶಿಸಿತ್ತು.

Also Read
ಅಕ್ರಮ ರಿವಾಲ್ವರ್‌ ಪ್ರಕರಣ: ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ದೋಷಿ ಎಂದ ವಿಶೇಷ ನ್ಯಾಯಾಲಯ; ಸನ್ನಡತೆಯ ಮೇಲೆ ಬಿಡುಗಡೆ

ಈ ಆದೇಶ ಪ್ರಶ್ನಿಸಿ ಸೋಮಶೇಖ ರೆಡ್ಡಿ ಅವರು ಬೆಂಗಳೂರಿನ 82ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ (ವಿಶೇಷ ನ್ಯಾಯಾಲಯ) ಮೇಲ್ಮನವಿ ಸಲ್ಲಿಸಿದ್ದರು. ಆ ನ್ಯಾಯಾಲಯವೂ ಸಹ ರೆಡ್ಡಿ ಅವರನ್ನು ದೋಷಿಯಾಗಿ ತೀರ್ಮಾನಿಸಿ 2023ರ ಫೆಬ್ರವರಿ 28ರಂದು ಆದೇಶಿಸಿತ್ತು. ಆದರೆ, ಸನ್ನಡತೆ ಪರಿಗಣಿಸಿ ಯಾವುದೇ ಶಿಕ್ಷೆ ವಿಧಿಸದ ಕೋರ್ಟ್, 50 ಸಾವಿರ ರೂಪಾಯಿ ದಂಡ ವಿಧಿಸಿತ್ತು. ಅಷ್ಟು ಮೊತ್ತಕ್ಕೆ ವೈಯಕ್ತಿಕ ಬಾಂಡ್ ಹಾಗೂ ಒಬ್ಬರ ಭದ್ರತಾ ಖಾತರಿ ಒದಗಿಸಬೇಕು. ಉತ್ತಮ ನಡತೆ ಮುಂದುವರಿಸಬೇಕು. ಅಪರಾಧ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಾರದು ಎಂಬ ಷರತ್ತು ವಿಧಿಸಿತ್ತು.

ಇದರಿಂದ ದೋಷಿಯಾಗಿ ತೀರ್ಮಾನಿಸಿದ ವಿಚಾರಣಾಧೀನ ನ್ಯಾಯಾಲಯಗಳ ಆದೇಶ ರದ್ದು ಕೋರಿ ಸೋಮಶೇಖರ ರೆಡ್ಡಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

Related Stories

No stories found.
Kannada Bar & Bench
kannada.barandbench.com