Baba Ramdev (L), Acharya Balkrishna (R), Supreme Court
Baba Ramdev (L), Acharya Balkrishna (R), Supreme Court

ನೀವು ಅಮಾಯಕರೇನೂ ಅಲ್ಲ: ಬಾಬಾ ರಾಮದೇವ್, ಆಚಾರ್ಯ ಬಾಲಕೃಷ್ಣಗೆ ಸುಪ್ರೀಂ ಕೋರ್ಟ್‌ ಮತ್ತೆ ತಪರಾಕಿ

“ನಿಮ್ಮನ್ನು ಕ್ಷಮಿಸಿದ್ದೇವೆ ಎಂದು ಹೇಳುತ್ತಿಲ್ಲ. ನಿಮ್ಮ ಹಿಂದಿನ ಇತಿಹಾಸದ ಬಗ್ಗೆ ನಾವು ಕುರುಡಾಗಿರಲು ಸಾಧ್ಯವಿಲ್ಲ. ನಿಮ್ಮ ಕ್ಷಮೆ ಯಾಚನೆ ಬಗ್ಗೆ ನಾವು ಆಲೋಚಿಸುತ್ತೇವೆ” ಎಂದು ಪೀಠ ನುಡಿಯಿತು.

ಆಧುನಿಕ ವೈದ್ಯ ಪದ್ದತಿಯನ್ನು ಅವಹೇಳನ ಮಾಡಿ ದಾರಿ ತಪ್ಪಿಸುವಂತಹ ಜಾಹೀರಾತು ಪ್ರಸಾರ ಮಾಡಿದ್ದಕ್ಕಾಗಿ ಪತಂಜಲಿ ಆಯುರ್ವೇದ ಪ್ರವರ್ತಕರಾದ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಯಾಚಿಸಿರುವ ಕ್ಷಮೆಯ ನೈಜತೆಯನ್ನು ಅರಿಯುವುದಕ್ಕಾಗಿ ಸುಪ್ರೀಂ ಕೋರ್ಟ್‌ ಮಂಗಳವಾರ ಈ ಇಬ್ಬರೊಂದಿಗೆ ವೈಯಕ್ತಿಕ ಸಂವಹನ ನಡೆಸಿತು [ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ}.

ಈ ಹಂತದಲ್ಲಿ ಅವರಿಬ್ಬರೂ ಕ್ಷಮೆ ಯಾಚಿಸಿದರಾದರೂ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಇಬ್ಬರೂ ತೂಗುಗತ್ತಿಯ ಅಡಿಯಲ್ಲೇ ಇದ್ದೀರಿ ಎಂದು ಎಚ್ಚರಿಸಿತು.

 “ನಿಮ್ಮನ್ನು ಕ್ಷಮಿಸಿದ್ದೇವೆ ಎಂದು ನಾವು ಹೇಳುತ್ತಿಲ್ಲ. ನಿಮ್ಮ ಹಿಂದಿನ ಇತಿಹಾಸದ ಬಗ್ಗೆ ನಾವು ಕುರುಡಾಗಿರಲು ಸಾಧ್ಯವಿಲ್ಲ. ನಿಮ್ಮ ಕ್ಷಮೆ ಯಾಚನೆ ಬಗ್ಗೆ ನಾವು ಆಲೋಚಿಸುತ್ತೇವೆ. ನ್ಯಾಯಾಲಯದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯದಷ್ಟು ನೀವು ಅಮಾಯಕರೇನೂ ಅಲ್ಲ. ಇದೀಗ ನಿಮ್ಮನ್ನು ಕುಣಿಕೆಯಿಂದ ಬಿಡಿಸಲಾಗಿದೆ ಎಂದೇನೂ ಹೇಳುತ್ತಿಲ್ಲ” ಎಂಬುದಾಗಿ ನ್ಯಾಯಾಲಯ ಹೇಳಿತು.

ಪತಂಜಲಿ ಮತ್ತದರ ಪ್ರತಿನಿಧಿಗಳು ತಮ್ಮನ್ನು ತಾವು ಸುಧಾರಿಸಿಕೊಳ್ಳುವುದಾಗಿ ಸದುದ್ದೇಶದಿಂದ ನಡೆದುಕೊಳ್ಳುವುದಾಗಿ ನೀಡಿದ ಹೇಳಿಕೆಗಳನ್ನು ದಾಖಲಿಸಿಕೊಂಡ ಬಳಿಕ ನ್ಯಾಯಾಲಯ ಪ್ರಕರಣವನ್ನು ಏಪ್ರಿಲ್ 23 ಕ್ಕೆ ಮುಂದೂಡಿತು.

ಪತಂಜಲಿ, ಬಾಬಾ ರಾಮದೇವ್‌ ಹಾಗೂ ಆಚಾರ್ಯ ಬಾಲಕೃಷ್ಣ ಅವರ ಪರವಾಗಿ ಹಿರಿಯ ವಕೀಲರಾದ ಮುಕುಲ್‌ ರೋಹಟಗಿ, ವಿಪಿನ್‌ ಸಾಂಘಿ ಹಾಗೂ ಬಲಬೀರ್‌ ಸಿಂಗ್‌ ಅವರು ವಾದ ಮಂಡಿಸಿದರು.

ಕೋವಿಡ್‌ ಲಸಿಕೆ ಮತ್ತು ಆಧುನಿಕ ಔಷಧದ ವಿರುದ್ಧ ಅವಹೇಳನಕಾರಿ ಅಭಿಯಾನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಪತಂಜಲಿ ವಿರುದ್ಧ ಅರ್ಜಿ ಸಲ್ಲಿಸಿತ್ತು. ಪ್ರಕರಣದ ಸಂಬಂಧ ಪತಂಜಲಿಯ ಬಾಬಾ ರಾಮದೇವ್‌ ಹಾಗೂ ಆಚಾರ್ಯ ಬಾಲಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್‌ ಈ ಹಿಂದೆಯೂ ಛೀಮಾರಿ ಹಾಕಿತ್ತು. ಅಷ್ಟೇ ಅಲ್ಲದೆ, ತಾತ್ಸಾರದಿಂದ ಕೂಡಿದ ಕ್ಷಮಾಪಣಾ ಅರ್ಜಿ ಸಲ್ಲಿಸಲಾಗಿದೆ ಎಂದು ಪತಂಜಲಿಯ ವಿರುದ್ಧ ನ್ಯಾಯಾಲಯ ಗುಡುಗಿತ್ತು.

ತಾವು  ಬೇಷರತ್‌ ಕ್ಷಮೆ ಯಾಚಿಸುತ್ತಿರುವುದಾಗಿ ಮತ್ತೆ ಈ ಇಬ್ಬರೂ ಅಫಿಡವಿಟ್‌ ಸಲ್ಲಿಸಿದ್ದರು. ಆದರೆ, ಈ ವಿಚಾರವಾಗಿ ರಾಮ್‌ದೇವ್ ಮತ್ತು ಬಾಲಕೃಷ್ಣ ಅವರನ್ನು ಉದ್ದೇಶಿಸಿ ನೇರವಾಗಿ ಮತನಾಡಲು ಬಯಸುವುದಾಗಿ ನ್ಯಾಯಾಲಯ ತಿಳಿಸಿತು.

ನಿಮ್ಮ ಹೇಳಿಕೆಗಳನ್ನು ನಾವು ಓದಿದ್ದೇವೆ. ನೀವು ಏನು ಹೇಳುತ್ತೀರಿ? ಎಂದು ನ್ಯಾ. ಹಿಮಾ ಅವರು ಪ್ರಶ್ನಿಸಿದಾಗ ʼಬೇಷರತ್‌ ಕ್ಷಮೆ ಯಾಚಿಸಿದ್ದೇವೆʼ ಎಂದು ರಾಮದೇವ್‌ ಉತ್ತರಿಸಿದರು. ಆಗ ನ್ಯಾ. ಅಮಾನುಲ್ಲಾ ಅವರು “ಕಾನೂನು ಎಲ್ಲರಿಗೂ ಒಂದೇ!” ಎಂದರು.

ಭವಿಷ್ಯದಲ್ಲಿ ನಾನು ಅದರ ಬಗ್ಗೆ ಜಾಗೃತನಾಗಿರುತ್ತೇನೆ. ಇದೆಲ್ಲವೂ ಕಾರ್ಯೋತ್ಸಾಹದಲ್ಲಿ ನಡೆದಿದೆ. ಭವಿಷ್ಯದಲ್ಲಿ ಹೀಗಾಗುವುದಿಲ್ಲ ಎಂದು ರಾಮದೇವ್‌ ಪ್ರತಿಕ್ರಿಯಿಸಿದರು.

ಕಂಪನಿ ತನ್ನ ಜಾಹೀರಾತುಗಳಲ್ಲಿ ನಿರ್ದಿಷ್ಟ ರೋಗಗಳನ್ನು ಗುಣಪಡಿಸುವುದಾಗಿ ಹೇಳಿಕೊಳ್ಳುವಂತಿಲ್ಲ ಮತ್ತು ಹಾಗೆ ಜಾಹೀರಾತು ನೀಡುವುದು ಕಾನೂನುಬಾಹಿರವಾಗಿದೆ ಎಂದು ನ್ಯಾಯಾಲಯ ಈ ಹಂತದಲ್ಲಿ ನುಡಿಯಿತು.

ಪತಂಜಲಿಯ ವ್ಯವಸ್ಥಾಪಕ ನಿರ್ದೇಶಕ ಬಾಲಕೃಷ್ಣ ಆಚಾರ್ಯ ಇದೇ ವೇಳೆ ತಮ್ಮ ನಡವಳಿಕೆ ಉದ್ದೇಶಪೂರ್ವಕವಾದುದಾಗಿರಲಿಲ್ಲ. ಇದೆಲ್ಲವೂ ಅಜ್ಞಾನದಿಂದ ಸಂಭವಿಸಿದೆ. ಅದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದರು.

ಪತಂಜಲಿ ಉತ್ಪನ್ನಗಳನ್ನು ಪ್ರಚಾರ ಮಾಡುವ ನೆಪದಲ್ಲಿ ಅಲೋಪತಿಯನ್ನು ಕೀಳಾಗಿ ಕಾಣುವಂತಿಲ್ಲ. ನೀವು ಅಲೋಪತಿಯನ್ನು ಅಪಹಾಸ್ಯ ಮಾಡಿರುವುದು ತುಂಬಾ ತಪ್ಪು ಎಂದು ನ್ಯಾಯಮೂರ್ತಿ ಅಮಾನುಲ್ಲಾ ಹೇಳಿದರು.

"ಅಲೋಪತಿಯನ್ನು ಹುಸಿ ವಿಜ್ಞಾನ ಎಂದು ಕರೆಯಲಾಗುತ್ತದೆ ಮತ್ತು ಈ ಎರಡು ವೈದ್ಯಕೀಯ ಪದ್ದತಿಗಳ ನಡುವೆ ಯಾವಾಗಲೂ ವಿವಾದವಿದೆ. ವಿಕಿಪೀಡಿಯಾದಲ್ಲಿಯೂ ಇದರ ಉಲ್ಲೇಖವಿದೆ" ಎಂದು ರಾಮದೇವ್ ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಅಮಾನುಲ್ಲಾ, ಪತಂಜಲಿಯ ಸ್ವಂತ ಕೆಲಸದ ಮೇಲೆ ಗಮನವನ್ನಷ್ಟೇ ಹರಿಸಬೇಕು, ಹಾಗೆ ಮಾಡುವಾಗ ಉಳಿದದ್ದನ್ನು ಅಪಮಾನಿಸುವಂತಿಲ್ಲ ಎಂದು ನ್ಯಾ. ಅಮಾನುಲ್ಲಾ ತಾಕೀತು ಮಾಡಿದರು.

Related Stories

No stories found.
Kannada Bar & Bench
kannada.barandbench.com