ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ: ಅನುರಾಧಾ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಹೈಕೋರ್ಟ್‌ ಆದೇಶ

“ದಾಳಿಯಲ್ಲಿ ಅನುರಾಧ ಅವರ ಪಾತ್ರವಿಲ್ಲ. ಅನುಮಾನಗಳ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಆರು ತಿಂಗಳ ಹಿಂದೆಯೇ ಆಸ್ತಿ ವಿವಾದ ಬಗೆಹರಿದಿದೆ. ಸಂಧಾನ ಡಿಕ್ರಿಯೂ ಆಗಿದೆ. ಅದಾಗ್ಯೂ, ಮಾಧ್ಯಮಗಳಲ್ಲಿ ಕಲ್ಪಿತ ಸುದ್ದಿಗಳು ಪ್ರಕಟವಾಗಿವೆ” ಎಂದ ಅರಬಟ್ಟಿ.
Muthappa Rai & Karnataka HC
Muthappa Rai & Karnataka HC
Published on

ಭೂಗತ ಲೋಕದ ಮಾಜಿ ಡಾನ್‌ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಎರಡನೇ ಪತ್ನಿ ಅನುರಾಧ ರೈ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಮತ್ತು ಪ್ರಕರಣದ ಸಂಬಂಧ ಆತುರದ ನಿರ್ಧಾರಕ್ಕೆ ಮುಂದಾಗದಂತೆ ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ತನ್ನ ವಿರುದ್ಧದ ಎಫ್‌ಐಆರ್‌ಗೆ ತಡೆ ಕೋರಿ ದಿವಂಗತ ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧ ರೈ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಾದ ಆಲಿಸಿದ ಪೀಠವು ಅನುರಾಧ ರೈ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಮತ್ತು ಪ್ರಕರಣದ ಸಂಬಂಧ ಆತುರದ ನಿರ್ಧಾರ ಕೈಗೊಳ್ಳಬಾರದು ಎಂದು ಆದೇಶಿಸಿ, ವಿಚಾರಣೆ ಮುಂದೂಡಿತು.

ಅನುರಾಧ ರೈ ಪರ ವಕೀಲ ವೆಂಕಟೇಶ್‌ ಅರಬಟ್ಟಿ ಅವರು “ದಾಳಿಯಲ್ಲಿ ಅನುರಾಧ ಅವರ ಪಾತ್ರವಿಲ್ಲ. ಅನುಮಾನಗಳ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಆರು ತಿಂಗಳ ಹಿಂದೆಯೇ ಆಸ್ತಿ ವಿವಾದ ಬಗೆಹರಿದಿದೆ. ಸಂಧಾನ ಡಿಕ್ರಿಯೂ ಆಗಿದೆ. ಅದಾಗ್ಯೂ, ಮಾಧ್ಯಮಗಳಲ್ಲಿ ಕಲ್ಪಿತ ಸುದ್ದಿಗಳು ಪ್ರಕಟವಾಗಿವೆ” ಎಂದರು.

“ಘಟನೆಗೂ ತನಗೂ ಯಾವುದೇ ಸಂಬಂಧವಿಲ್ಲ. ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕರಿಸಲು ಸಿದ್ಧವಿದ್ದೇನೆ. ಒಂದು ವೇಳೆ ಎಫ್‌ಐಆರ್‌ಗೆ ತಡೆ ನೀಡದಿದ್ದರೆ ತನಿಖೆಯ ನೆಪದಲ್ಲಿ ಕಿರುಕುಳ ಅನುಭವಿಸುವ ಸಾಧ್ಯತೆ ಇದೆ. ಹೀಗಾಗಿ, ಘಟನೆಗೆ ಸಂಬಂಧಿಸಿದಂತೆ ದಾಖಲಿಸಿರುವ ಎಫ್‌ಐಆರ್‌ ಹಾಗೂ ಈ ಕುರಿತಂತೆ ರಾಮನಗರ ವಿಚಾರಣಾ ನ್ಯಾಯಾಲಯದ ಮುಂದಿರುವ ಪ್ರಕರಣದ ವಿಚಾರಣೆಗೆ ತಡೆ ನೀಡಬೇಕು” ಎಂದು ಕೋರಿದರು.

Also Read
ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ: ಎಫ್‌ಐಆರ್‌ಗೆ ತಡೆ ಕೋರಿ ಹೈಕೋರ್ಟ್‌ಗೆ ಅನುರಾಧಾ ಅರ್ಜಿ 

ರಿಕ್ಕಿ ರೈ ಕಾರು ಚಾಲಕ ಬಸವರಾಜು ಅವರು ಬಿಡದಿಯ ಮನೆಯಿಂದ ಹೊರಡುವಾಗ ಮಧ್ಯರಾತ್ರಿ 1.30ರ ವೇಳೆಗೆ ಗುಂಡಿನ ದಾಳಿ ನಡೆದಿದೆ. ಇದರಲ್ಲಿ ರಿಕ್ಕಿ ಅವರ ಮೂಗು ಮತ್ತು ತೋಳಿಗೆ ಗುಂಡು ತಗುಲಿ ತೀವ್ರರೀತಿಯ ಗಾಯಗಳಾಗಿವೆ ಎಂದು ದೂರು ನೀಡಿದ್ದರು. ರಿಕ್ಕಿ ರೈ ಅವರು ರಾಕೇಶ್‌ ಮಲ್ಲಿ, ಅನುರಾಧಾ, ನಿತೇಶ್‌ ಶೆಟ್ಟಿ, ವೈದ್ಯನಾಥನ್‌ ವಿರುದ್ಧ ಶಂಕೆ ವ್ಯಕ್ತಪಡಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಬಿಡದಿ ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ 109, 3(5) ಮತ್ತು ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್‌ 25ರ ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Kannada Bar & Bench
kannada.barandbench.com