ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರಾಗಲು ಶ್ರೀರಾಮುಲುಗೆ ಸೂಚನೆ; ತಪ್ಪಿದರೆ ಬಂಧನ ವಾರೆಂಟ್‌ ಎಚ್ಚರಿಕೆ ನೀಡಿದ ಹೈಕೋರ್ಟ್‌

ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಎಂದರೆ‌ ನಿಮಗೆ ಅಷ್ಟೊಂದು ಸದರವೆ? ಮ್ಯಾಜಿಸ್ಟ್ರೇಟ್ ಮುಂದೆ ನಿಂತುಕೊಳ್ಳಲು ಅರ್ಜಿದಾರರಿಗೆ ಯಾವ ಅಂತಸ್ತು ಅಡ್ಡಿಯಾಗಿದೆ? ಎಂದು ರಾಮುಲು ವಿರುದ್ಧ ಕಿಡಿಕಾರಿದ ಪೀಠ.
Karnataka HC and ex minister B Sriramulu
Karnataka HC and ex minister B Sriramulu

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಸಂಬಂಧ ನಾಲ್ಕು ಬಾರಿ ಸಮನ್ಸ್‌ ನೀಡಿದ್ದರೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರಾಗದ ಮಾಜಿ ಸಚಿವ ಬಿ ಶ್ರೀರಾಮುಲು ಅವರನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್‌, ಮುಂದಿನ ವಿಚಾರಣೆಗೆ ಹಾಜರಾಗದಿದ್ದರೆ ಬಂಧನದ ಆದೇಶದ ಹೊರಡಿಸಲಾಗುವುದು ಎಂದು ಮೌಖಿಕವಾಗಿ ಕಠಿಣ ಎಚ್ಚರಿಕೆ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಖಾಸಗಿ ದೂರು ಮತ್ತು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಕೋರಿ ಬಿ ಶ್ರೀರಾಮುಲು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರ ಶ್ರೀರಾಮುಲು ಪರ ವಕೀಲ ಗೌತಮ್‌ ಪ್ರಕರಣದ ಮಾಹಿತಿಯನ್ನು ಪೀಠಕ್ಕೆ ವಿವರಿಸಲು ಮುಂದಾದಾಗ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಅರ್ಜಿದಾರರು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮುಂದೆ ಹಾಜರಾಗಿದ್ದಾರೆಯೇ? ಎಂದು ಪ್ರಶ್ನಿಸಿದರು.

ವಕೀಲ ಗೌತಮ್‌ ಅವರು, ‘ಇಲ್ಲ’ ಎಂದು ಉತ್ತರಿಸಿದರು. ಆಗ ನ್ಯಾಯಮೂರ್ತಿಗಳು, ವಿಚಾರಣಾಧೀನ ನ್ಯಾಯಾಲಯ ನೋಟಿಸ್ ಅಥವಾ ಸಮನ್ಸ್ ಜಾರಿಗೊಳಿಸಲು ಆದೇಶಿಸಿಲ್ಲವೇ ಎಂದು ಮರು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಗೌತಮ್‌, ಹೌದು ಸ್ವಾಮಿ, ಜಾರಿಗೊಳಿಸಿದೆ. ಆದರೆ, ನಮಗೆ ತಲುಪಿಲ್ಲ ಎಂದರು.

ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರನ್ನು ಉದ್ದೇಶಿಸಿ, ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅರ್ಜಿದಾರರ ವಿರುದ್ಧ ಎಷ್ಟು ಬಾರಿ ಸಮನ್ಸ್ ಹೊರಡಿಸಿದೆ ಎಂದು ನ್ಯಾಯಮೂರ್ತಿಗಳು ಕೇಳಿದರು.

ಇದರಿಂದ ದಾಖಲೆಗಳನ್ನು ಪರಿಶೀಲಿಸಿದ ಜಗದೀಶ್ ಅವರು, ನಾಲ್ಕು ಬಾರಿ ಸಮನ್ಸ್‌ ನೀಡಲಾಗಿದೆ ಎಂದು ಉತ್ತರಿಸಿದರು.

ಅದನ್ನು ಕೇಳಿ ತೀವ್ರ ಆಕ್ರೋಶಗೊಂಡ ನ್ಯಾಯಮೂರ್ತಿಗಳು, "ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಎಂದರೆ‌ ನಿಮಗೆ ಅಷ್ಟೊಂದು ಸದರವೆ? ಮ್ಯಾಜಿಸ್ಟ್ರೇಟ್ ಮುಂದೆ ನಿಂತುಕೊಳ್ಳಲು ನಿಮ್ಮ ಅರ್ಜಿದಾರರಿಗೆ ಯಾವ ಅಂತಸ್ತು ಅಡ್ಡಿಯಾಗಿದೆ? ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಎಂದರೆ ಏನೆಂದುಕೊಂಡಿದ್ದೀರಿ? ವಿಚಾರಣಾಧೀನ ನ್ಯಾಯಾಲಯ ನಾಲ್ಕು ಬಾರಿ ಸಮನ್ಸ್ ಹೊರಡಿಸಿದ್ದರೂ ಏಕೆ ಹಾಜರಾಗಿಲ್ಲ?" ಎಂದು ಶ್ರೀರಾಮುಲು ಪರ ವಕೀಲರನ್ನು ಪ್ರಶ್ನಿಸುವ ಮೂಲಕ ತರಾಟೆಗೆ ತೆಗೆದುಕೊಂಡರು.

ಅಲ್ಲದೇ, ಸಚಿವ ಹಾಗೂ ಮಾಜಿ ಸಚಿವ ಅಥವಾ ಯಾರೇ ಜನಪ್ರತಿನಿಧಿ ಆಗಿರಲೀ ನ್ಯಾಯಾಲಯ ಎಂದರೆ ಹುಷಾರಾಗಿರಬೇಕು. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರೂಪುಗೊಂಡಿರುವ ಶಾಸಕರು - ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ರಚನೆಯಾಗಿರುವ ವಿಶೇಷ ಪೀಠ ಇದಾಗಿದೆ ಎಂಬುದನ್ನು ಮರೆಯಬೇಡಿ. ನಿಮ್ಮ ವರ್ತನೆಗೆ ಈ ವಿಶೇಷ ನ್ಯಾಯಪೀಠವು ಸೂಕ್ತ ಮತ್ತು ಕಠಿಣ ಕಾನೂನು ಕ್ರಮ‌ ಕೈಗೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

ಅಂತಿಮವಾಗಿ, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮುಂದಿನ ವಿಚಾರಣೆಗೆ ಅರ್ಜಿದಾರ ಶ್ರೀರಾಮುಲು ಖುದ್ದು ಹಾಜರಾಗಬೇಕು. ತಪ್ಪಿದರೆ ಅವರ ವಿರುದ್ಧ ಬಂಧನ ಆದೇಶ ಹೊರಡಿಸಲಾಗುವುದು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.

ಪ್ರಕರಣದ ಹಿನ್ನೆಲೆ: ಚುನಾವಣಾ ಅಧಿಕಾರಿಗಳ ಅನುಮತಿ ಪಡೆಯದೇ 2023ರ ಏಪ್ರಿಲ್‌ 28ರಂದು ಸಂಜೆ 4.15ರ ಸಮಯದಲ್ಲಿ ಚಿತ್ರದುರ್ಗದ ಚಳ್ಳಕೆರೆ ವಿಧಾನಭಾ ಕ್ಷೇತ್ರದ ತುರವನೂರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಆರ್‌ ಅನಿಲ್‌ ಕುಮಾರ್‌ ಪರ ಶ್ರೀರಾಮುಲು ಚುನಾವಣಾ ಪ್ರಚಾರ ಸಮಾವೇಶ ನಡೆಸಿದ್ದರು. ಇದರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಸಂಬಂಧ ಫ್ಲೈಯಿಂಗ್‌ ಸ್ಕ್ವಾಡ್‌ ತಂಡದ ಅಧಿಕಾರಿಯಾಗಿದ್ದ ಎಂ ತಿಪ್ಪೇಸ್ವಾಮಿ, ಚಿತ್ರದುರ್ಗದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ 2023ರ ಏಪ್ರಿಲ್‌ 29ರಂದು ಖಾಸಗಿ ದೂರು ಸಲ್ಲಿಸಿದ್ದರು. ಪ್ರಕರಣ ಕುರಿತು ಮೇ 4ರಂದು ಬಿ ಶ್ರೀರಾಮುಲು ವಿರುದ್ಧ ಸಂಜ್ಞೇ ತೆಗೆದುಕೊಂಡಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ 2023ರ ಮೇ 5ರಂದು ಸಮನ್ಸ್‌ ಜಾರಿಗೊಳಿಸಿತ್ತು. ಇದರಿಂದ ಶ್ರೀರಾಮುಲು ಹೈಕೋರ್ಟ್‌ ಮೊರೆ ಹೋಗಿದ್ದರು.

Related Stories

No stories found.
Kannada Bar & Bench
kannada.barandbench.com