ಕಾನೂನು ಅಗತ್ಯದ ಬಗ್ಗೆ ಗಮನಹರಿಸಲು 8 ವಲಯದಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇಮಕ: ಹೈಕೋರ್ಟ್‌ಗೆ ಬಿಬಿಎಂಪಿ ಮಾಹಿತಿ

ಸಿಸಿಎಂಎಸ್‌ ವೇದಿಕೆ ಕೋರಿಕೆ ಕುರಿತು ಇ-ಆಡಳಿತ ಇಲಾಖೆಯ ಕಾರ್ಯದರ್ಶಿ ಅದನ್ನು ಸಕಾರಾತ್ಮಕವಾಗಿ ಪರಿಗಣಿಸಿ, ತಕ್ಷಣ ಜಾರಿಗೊಳಿಸಬೇಕು. ಅಲ್ಲದೇ, ಈ ಸಂಬಂಧ ವರದಿಯನ್ನು ತಕ್ಷಣ ಸಲ್ಲಿಸಬೇಕು ಎಂದು ಆದೇಶಿಸಿದ ನ್ಯಾಯಾಲಯ.
BBMP and Karnataka HC
BBMP and Karnataka HC
Published on

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಎಂಟೂ ವಲಯಗಳಲ್ಲಿನ ಕಾನೂನು ಅಗತ್ಯತೆ ಬಗ್ಗೆ ಗಮನಹರಿಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶರುಗಳನ್ನು ನೇಮಕ ಮಾಡಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ಗೆ ಬಿಬಿಎಂಪಿ ಈಚೆಗೆ ತಿಳಿಸಿದೆ.

ಬೆಂಗಳೂರಿನ ಬನಶಂಕರಿಯಲ್ಲಿ ನೆರೆಯ ನಿವಾಸಿಯೊಬ್ಬರು ಕಟ್ಟಡ ಪರವಾನಗಿ ಉಲ್ಲಂಘಿಸಿ ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಆಕ್ಷೇಪಿಸಿ ವೆಂಕಟೇಶ್‌ ಎಂಬವರು ಸಲ್ಲಿಸಿದ್ದ‌ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಮಾರ್ಚ್‌ 24ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ಬಿಬಿಎಂಪಿಯ ಕಾನೂನು ಘಟಕದ ಮುಖ್ಯಸ್ಥರು ನ್ಯಾಯಾಲಯ ಮುಂದೆ ಹಾಜರಾಗಬೇಕು ಎಂದು ನ್ಯಾಯಾಲಯವು ಆದೇಶ ಮಾಡಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಯಲ್ಲಿ ಭಾಗಿಯಾಗಿದ್ದ ಬಿಬಿಎಂಪಿ ಕಾನೂನು ಘಟಕದ ಮುಖ್ಯಸ್ಥ ಚಂದ್ರಶೇಖರ್‌ ಪಾಟೀಲ್‌ ಅವರು “ಹಿಂದೆ ಹಲವಾರು ತಪ್ಪುಗಳಾಗಿವೆ. ಬಿಬಿಎಂಪಿ ಕಾನೂನು ಅಗತ್ಯಗಳು ಮತ್ತು ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ, ತುರ್ತಾಗಿ ಅಗತ್ಯ ಕ್ರಮಕೈಗೊಳ್ಳಲು ಬಿಬಿಎಂಪಿ ವಕೀಲರಿಗೆ ಸೂಚನೆ ನೀಡಲು ಎಂಟೂ ವಲಯಗಳಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ” ಎಂದು ತಿಳಿಸಿದರು.

“ಬಿಬಿಎಂಪಿ ಅಧಿಕಾರಿಗಳು, ಕಾನೂನು ಅಧಿಕಾರಿಗಳು ಮತ್ತು ಬಿಬಿಎಂಪಿಯ ವಕೀಲರ ನಡುವೆ ಸುಲಭವಾಗಿ ಸಂವಹನ ಸಾಧ್ಯವಾಗಿಸುವ ನಿಟ್ಟಿನಲ್ಲಿ ಬಿಬಿಎಂಪಿಯಲ್ಲಿ ಸಿಸಿಎಂಎಸ್‌ ವೇದಿಕೆ ಜಾರಿಗೆ ಸಂಬಂಧಿಸಿದಂತೆ ಇ-ಆಡಳಿತ ಇಲಾಖೆಯ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಪಾಟೀಲ್ ತಿಳಿಸಿದ್ದಾರೆ. ಇಂಥ ಕೋರಿಕೆ ಸಲ್ಲಿಸಿದರೆ ಇ-ಆಡಳಿತ ಇಲಾಖೆಯ ಕಾರ್ಯದರ್ಶಿಯು ಅದನ್ನು ಸಕಾರಾತ್ಮಕವಾಗಿ ಪರಿಗಣಿಸಿ, ಅದನ್ನು ತಕ್ಷಣ ಜಾರಿಗೊಳಿಸಬೇಕು. ಅಲ್ಲದೇ, ಈ ಸಂಬಂಧ ವರದಿಯನ್ನು ತಕ್ಷಣ ಸಲ್ಲಿಸಬೇಕು” ಎಂದು ಆದೇಶದಲ್ಲಿ ಹೇಳಿದೆ.

Kannada Bar & Bench
kannada.barandbench.com