ಎರಡೂವರೆ ದಶಕದ ಹಿಂದಿನ ಗಲಭೆ ಪ್ರಕರಣದಲ್ಲಿ ಬಂಧನ: ಅನಿವಾಸಿ ಭಾರತೀಯನಿಗೆ ಮೂರು ವಾರ ಮಧ್ಯಂತರ ಜಾಮೀನು ಮಂಜೂರು

ಕಡತಗಳು, ದಾಖಲೆಗಳು ಲಭ್ಯವಿಲ್ಲ ಎಂಬ ಆಧಾರದಲ್ಲಿ ತಡೆ ಸಿಕ್ಕಿರುವ ಪ್ರಕರಣದಲ್ಲಿ ಆರೋಪಿಯನ್ನು ಬಂಧನದಲ್ಲಿಟ್ಟುಕೊಳ್ಳುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟು, ಆರೋಪಿ ಕೇಶವ ಶೆಟ್ಟಿಗೆ 3 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ.
High Court of Karnataka
High Court of Karnataka
Published on

ಬರೋಬ್ಬರಿ 25 ವರ್ಷಗಳ ಹಿಂದೆ ನಡೆದಿದ್ದ ಗಲಭೆ ಪ್ರಕರಣದ ಆರೋಪದಲ್ಲಿ ಮುಲ್ಕಿ ಪೋಲೀಸರಿಂದ ಬಂಧಿತರಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಹಳೆಯಂಗಡಿ ಮೂಲ ನಿವಾಸಿ ಹಾಗೂ ಒಮನ್ ದೇಶದ ಮಸ್ಕತ್‌ನಲ್ಲಿ ವಾಸವಾಗಿರುವ ಅನಿವಾಸಿ ಭಾರತೀಯ ಚಂದ್ರಹಾಸ ಕೇಶವ ಶೆಟ್ಟಿಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಜಾಮೀನು ಕೋರಿ ಚಂದ್ರಹಾಸ ಕೇಶವ ಶೆಟ್ಟಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು ಪ್ರಕರಣಕ್ಕೆ ಸಂಬಂಧಿಸಿದ ಕಡತಗಳು ಮತ್ತು ದಾಖಲೆಗಳು ಲಭ್ಯವಿಲ್ಲ ಎಂಬ ವಿಚಾರಣಾಧೀನ ನ್ಯಾಯಾಲಯದ ಮುಚ್ಚಳಿಕೆಯನ್ನು ಪರಿಗಣಿಸಿದ್ದ ಇನ್ನೊಂದು ಏಕಸದಸ್ಯ ಪೀಠ ಸೆಪ್ಟೆಂಬರ್‌ 23ರಂದು ಪ್ರಕರಣಕ್ಕೆ ತಡೆ ನೀಡಿದೆ. ಹೀಗಾಗಿ, ಕಡತಗಳು ಮತ್ತು ದಾಖಲೆಗಳು ಲಭ್ಯವಿಲ್ಲ ಎಂಬ ಆಧಾರದಲ್ಲಿ ತಡೆ ಸಿಕ್ಕಿರುವ ಪ್ರಕರಣದಲ್ಲಿ ಆರೋಪಿಯನ್ನು ಬಂಧನದಲ್ಲಿಟ್ಟುಕೊಳ್ಳುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟು, ಆರೋಪಿ ಕೇಶವ ಶೆಟ್ಟಿಗೆ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶಿಸಿತು.

ಅಲ್ಲದೇ ವಿಚಾರಣಾಧೀನ ನ್ಯಾಯಾಲಯದ ಸಮಾಧಾನಕ್ಕಾಗಿ ₹1 ಲಕ್ಷ ಮೊತ್ತದ ವೈಯುಕ್ತಿಕ ಬಾಂಡ್, ಹಾಗೂ ಅಷ್ಟೇ ಮೊತ್ತದ ಇಬ್ಬರು ವ್ಯಕ್ತಿಗಳ ಭದ್ರತಾ ಖಾತರಿ ಒದಗಿಸಬೇಕು. ತನಿಖೆಗೆ ಸಹಕರಿಸಬೇಕು. ವಿಚಾರಣಾಧೀನ ನ್ಯಾಯಾಲಯದ ಅನುಮತಿ ಇಲ್ಲದೆ ಠಾಣಾ ವ್ಯಾಪ್ತಿಯಿಂದ ಹೊರಗಡೆ ಹೋಗಬಾರದು ಮತ್ತು ವಿದೇಶ ಪ್ರಯಾಣ ಮಾಡಬಾರದು, ಪಾಸ್ ಪೋರ್ಟ್ ಅನ್ನು ಮೂಡಬಿದಿರೆ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಷರತ್ತುಗಳನ್ನು ಪೀಠ ವಿಧಿಸಿದೆ.

1998ರ ಡಿಸೆಂಬರ್ ತಿಂಗಳಲ್ಲಿ ಗಲಭೆ ನಡೆದಿತ್ತು. ಈ ಸಂಬಂಧ ದಾಖಲಾಗಿದ್ದ ದೂರಿನಲ್ಲಿ ಅರ್ಜಿದಾರರನ್ನು ಆರೋಪಿಯನ್ನಾಗಿ ಮಾಡಲಾಗಿತ್ತು. ಎಫ್ಐಆರ್ ಹಾಗೂ ಆರೋಪ ಪಟ್ಟಿಯಲ್ಲಿ ಆರೋಪಿ ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. 1992ರಿಂದಲೇ ಕುಟುಂಬ ಸಮೇತವಾಗಿ ಚಂದ್ರಹಾಸ ಮಸ್ಕತ್‌ನಲ್ಲಿ ನೆಲೆಸಿದ್ದಾರೆ. ಅಧಿಕೃತವಾಗಿ ಅಲ್ಲಿನ ನಿವಾಸಿ ಗುರುತಿನ ಚೀಟಿ ಸಹ ಹೊಂದಿದ್ದಾರೆ. 2021ರಲ್ಲಿ ಪಾಸ್ ಪೋರ್ಟ್ ನವೀಕರಣ ಮಾಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಅವರಿಗೆ ಯಾವುದೇ ಸಮನ್ಸ್ ಅಥವಾ ನೋಟಿಸ್ ಕೊಟ್ಟಿಲ್ಲ. ಆದರೂ, ಅವರನ್ನು ತಲೆಮರೆಸಿಕೊಂಡಿದ್ದಾರೆ ಎಂದು ತೋರಿಸಲಾಗಿದೆ. ಪ್ರಕರಣಕ್ಕೂ ಅವರಿಗೂ ಸಂಬಂಧವಿಲ್ಲ. ತಾಯಿಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಸ್ಕತ್‌ನಿಂದ ತವರೂರಿಗೆ ಬರುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಮುಲ್ಕಿ ಪೋಲೀಸರು ಕೇಶವ ಶೆಟ್ಟಿ ಅವರನ್ನು ಆಗಸ್ಟ್ 28ರಂದು ಬಂಧಿಸಿದ್ದರು. ವಿಚಾರಣಾಧೀನ ನ್ಯಾಯಾಲಯ ಜಾಮೀನು ತಿರಸ್ಕರಿಸಿತ್ತು. ಹೀಗಾಗಿ, ಕೇಶವ ಶೆಟ್ಟಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರ ಹಿರಿಯ ವಕೀಲ ಎಂ ಅರುಣ್ ಶ್ಯಾಮ್ ವಾದಿಸಿದರು. ವಕೀಲ ಸುಯೋಗ ಹೆರಳೆ ವಕಾಲತ್ತು ವಹಿಸಿದ್ದರು.

Kannada Bar & Bench
kannada.barandbench.com