ನೀಟ್‌ ವಿವಾದ: ಸುಪ್ರೀಂ ಕೋರ್ಟ್‌ಗೆ ಎಲ್ಲಾ ಪ್ರಕರಣ ವರ್ಗಾಯಿಸಲು ಕೋರುವುದಾಗಿ ದೆಹಲಿ ಹೈಕೋರ್ಟ್‌ಗೆ ಎನ್‌ಟಿಎ ಮಾಹಿತಿ

ವ್ಯತಿರಿಕ್ತವಾದ ತೀರ್ಪುಗಳನ್ನು ತಪ್ಪಿಸುವುದಕ್ಕಾಗಿ ನೀಟ್‌ಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ಆಲಿಸಿದರೆ ಸೂಕ್ತವಾಗಿರುತ್ತದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.
NEET-UG 2024 and Delhi High Court
NEET-UG 2024 and Delhi High Court
Published on

ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶಾತಿ ಪದವಿ ಪರೀಕ್ಷೆಯ (ನೀಟ್‌ ಯುಜಿ 2024) ವಿವಾದ ಕುರಿತಂತೆ ವಿವಿಧ ಹೈಕೋರ್ಟ್‌ಗಳಿಗೆ ಸಲ್ಲಿಸಲಾಗಿರುವ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾವಣೆ ಮಾಡುವಂತೆ ಕೋರುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ದೆಹಲಿ ಹೈಕೋರ್ಟ್‌ಗೆ ಬುಧವಾರ ತಿಳಿಸಿದೆ.

ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರಿದ್ದ ಪೀಠದೆದುರು ಹಾಜರಾದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ಗೆ ವರ್ಗಾವಣೆ ಕೋರಿ ಎನ್‌ಟಿಎ ಅರ್ಜಿ ಸಲ್ಲಿಸಲಿದೆ ಎಂದು ತಿಳಿಸಿದರು.

ನೀಟ್‌ ಯುಜಿ ಪರೀಕ್ಷೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ದೇಶದ ಹಲವು ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾಗಿದ್ದು ವ್ಯತಿರಿಕ್ತವಾದ ತೀರ್ಪುಗಳನ್ನು ತಪ್ಪಿಸುವುದಕ್ಕಾಗಿ ನೀಟ್‌ಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ ಆಲಿಸಿದರೆ ಸೂಕ್ತವಾಗಿರುತ್ತದೆ ಎಂದು ಮೆಹ್ತಾ ತಿಳಿಸಿದರು.

ನೀಟ್‌ ಯುಜಿ ಪ್ರಶ್ನೆ ಪತ್ರಿಕೆಗಳ ಸೋರಿಕೆಗೆ ಸಂಬಂಧಿಸಿದಂತೆ, ಕೃಪಾಂಕ ನೀಡುವಲ್ಲಿ ಆಗಿರುವ ಸಮಸ್ಯೆ ಹಾಗೂ ಒಂದೇ ಪ್ರಶ್ನೆಗೆ ಎರಡು ಸರಿ ಉತ್ತರ ನೀಡಿರುವುದನ್ನು ಪ್ರಶ್ನಿಸಿ ವಿವಿಧ ಅರ್ಜಿಗಳನ್ನು ಸಲ್ಲಿಸಲಾಗಿದೆ.

ಪ್ರಸಕ್ತ ಸಾಲಿನ ನೀಟ್‌ ಯುಜಿ ಪರೀಕ್ಷೆಗಳ ಸುತ್ತಲಿನ ವಿವಾದಕ್ಕೆ ಸಂಬಂಧಿಸಿದ ಅರ್ಜಿಗಳ ಕುರಿತಂತೆ ಮೆಹ್ತಾ ದೆಹಲಿ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು. ವಾದವನ್ನು ಪರಿಗಣಿಸಿದ ನಂತರ ಹೇಳಿಕೆಯನ್ನು ದಾಖಲಿಸಿಕೊಂಡ ಹೈಕೋರ್ಟ್‌ ಎನ್‌ಟಿಎಗೆ ನೋಟಿಸ್ ಜಾರಿಗೊಳಿಸಿತು.

ಇದೇ ವೇಳೆ ಅರ್ಜಿದಾರರು ಜುಲೈನಲ್ಲಿ ಪ್ರಕರಣದ ವಿಚಾರಣೆ ನಡೆಸುವಂತೆ ಕೋರಿದರು. ಒಂದೊಮ್ಮೆ ಸುಪ್ರೀಂ ಕೋರ್ಟ್‌ಗೆ ಪ್ರಕರಣ ವರ್ಗಾವಣೆ ಮಾಡಲು ಎನ್‌ಟಿಎ ಮುಂದಾಗದಿದ್ದರೆ, ತಾವು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಮನವಿ ಪುರಸ್ಕರಿಸಿದ ನ್ಯಾಯಾಲಯ ಪ್ರಕರಣವನ್ನು ಜುಲೈ 5ರಂದು ವಿಚಾರಣೆ ನಡೆಸಲು ನಿರ್ದೇಶಿಸಿತು.

Kannada Bar & Bench
kannada.barandbench.com