ರಾಷ್ಟ್ರೀಯ ಸುದ್ದಿ ವಾಹಿನಿಯಲ್ಲಿ ಈಚೆಗೆ ಚರ್ಚೆಯಲ್ಲಿ ಪಾಲ್ಗೊಂಡು ಪ್ರವಾದಿ ಮುಹಮ್ಮದ್ ಅವರ ವಿರುದ್ದ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ದೇಶದ ವಿವಿಧ ರಾಜ್ಯಗಳಲ್ಲಿ ನಡೆದಿರುವ ತೀವ್ರ ಪ್ರತಿಭಟನೆ ಮತ್ತು ಗಲಭೆಗೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ದೇಶದ ವಿವಿಧೆಡೆ ತಮ್ಮ ವಿರುದ್ದ ದಾಖಲಾಗಿರುವ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಕೋರಿ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ ಬಿ ಪರ್ದಿವಾಲಾ ಅವರ ನೇತೃತ್ವದ ವಿಭಾಗೀಯ ಪೀಠವು ದೇಶಾದ್ಯಂತ ಕಿಚ್ಚು ಹೊತ್ತಿಸಲು ನೂಪುರ್ ಶರ್ಮಾ ಏಕೈಕ ಕಾರಣವಾಗಿದ್ದು, ಇಡೀ ದೇಶದ ಮುಂದೆ ಆಕೆ ಕ್ಷಮೆಯಾಚಿಸಬೇಕು ಎಂದು ಹೇಳಿತು.
“ದೇಶಾದ್ಯಂತ ಆಕೆ ಭಾವನೆಗಳನ್ನು ಪ್ರಚೋದಿಸಿರುವ ರೀತಿಗೆ ಆಕೆ ಹೊಣೆಗಾರರಾಗಿದ್ದು, ರಾಷ್ಟ್ರದಾದ್ಯಂತ ಆಗುತ್ತಿರುವ ಬೆಳವಣಿಗೆಗಳಿಗೆ ಆಕೆಯೇ ಏಕಮಾತ್ರ ಜವಾಬ್ದಾರಿಯಾಗಿದ್ದಾರೆ. ಚರ್ಚೆಯಲ್ಲಿ ಆಕೆ ಹೇಗೆ ಪ್ರಚೋದನೆ ನೀಡಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಇದೆಲ್ಲವನ್ನೂ ಹೇಳಿದ ನಂತರ ತಾನು ಓರ್ವ ವಕೀಲೆ ಎಂದು ಅವರು ಹೇಳಿದ್ದಾರೆ ಎಂಬುದನ್ನು ಕೇಳಿದೆವು. ಇದು ನಾಚಿಕೆಗೇಡು. ಆಕೆ ಇಡೀ ದೇಶದ ಕ್ಷಮೆ ಕೋರಬೇಕು” ಎಂದು ನ್ಯಾ. ಸೂರ್ಯಕಾಂತ್ ಗಂಭೀರವಾಗಿ ಹೇಳಿದರು.
ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಪ್ರಕರಣದ ಕುರಿತು ಚರ್ಚೆ ಆಯೋಜಿಸಿದ್ದ ಟಿವಿ ಚಾನೆಲ್ ಬಗ್ಗೆಯೂ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿದೆ. “ಏತಕ್ಕಾಗಿ ಟಿ ವಿ ಚರ್ಚೆ ಆಯೋಜಿಸಲಾಗಿತ್ತು? ಅಜೆಂಡಾವನ್ನು ಮತ್ತಷ್ಟು ಉದ್ದೀಪಿಸಲೆಂದೇ? ನ್ಯಾಯಾಲಯದ ವಿಚಾರಣೆಗೆ ಒಳಪಟ್ಟಿರುವ ಪ್ರಕರಣವನ್ನು ಚರ್ಚೆಗೆ ಆಯ್ಕೆ ಮಾಡಿಕೊಂಡಿದ್ದೇಕೆ” ಎಂದು ನ್ಯಾಯಾಲಯ ಪ್ರಶ್ನಿಸಿತು.
ದೆಹಲಿ ಪೊಲೀಸರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯವು “ದೆಹಲಿ ಪೊಲೀಸರು ಏನು ಮಾಡಿದ್ದಾರೆ? ನಮ್ಮ ಬಾಯಿ ತೆರೆಯುವಂತೆ ಮಾಡಬೇಡಿ” ಎಂದು ಕಿಡಿಕಾರಿತು.
ಶರ್ಮಾ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮಣೀಂದರ್ ಸಿಂಗ್ ಅವರು “ಒಂದೇ ಅಪರಾಧಕ್ಕೆ ಹಲವು ಎಫ್‌ಐಆರ್ ದಾಖಲಿಸಲಾಗದು ಎಂದು ಕಾನೂನಿನಲ್ಲಿ ಸ್ಪಷ್ಟಪಡಿಸಲಾಗಿದೆ” ಎಂದರು. ಇದಕ್ಕೆ ಪೂರಕವಾಗಿ ಅವರು ಸುಪ್ರೀಂ ಕೋರ್ಟ್‌ನ ಅರ್ನಾಬ್ ಗೋಸ್ವಾಮಿ ಮತ್ತು ಟಿ ಟಿ ಆಂಟನಿ ಪ್ರಕರಣವನ್ನು ಉಲ್ಲೇಖಿಸಿದರು.
“ಶರ್ಮಾ ಯಾವುದೇ ಕೆಟ್ಟ ಉದ್ದೇಶ ಹೊಂದಿರಲಿಲ್ಲ. ಚರ್ಚೆಯಲ್ಲಿ ಭಾಗವಹಿಸಿದ್ದ ಮತ್ತೊಬ್ಬರು ಶಿವಲಿಂಗವು ಕೇವಲ ಕಾರಂಜಿ ಎಂದು ಪದೇಪದೇ ಚರ್ಚೆಯಲ್ಲಿ ಹೇಳುತ್ತಿದ್ದರು. ನಿರೂಪಕರು ಹೀಗೆ ಹೇಳಲಿಲ್ಲ. ಈ ಪರಿಸ್ಥಿತಿ ನಿರ್ಮಾಣವಾದರೆ ಯಾರೊಬ್ಬರಿಗೂ ಮಾತನಾಡುವ ಹಕ್ಕು ಇರುವುದಿಲ್ಲ” ಎಂದರು.
ಆಗ ಪೀಠವು “ಟಿವಿ ಚರ್ಚೆಯಲ್ಲಿ ಪಾಲ್ಗೊಂಡು ದೇಶಾದ್ಯಂತ ಭಾವನೆ ಕೆರಳಿಸುವ ರಾಜಕೀಯ ಪಕ್ಷದ ವಕ್ತಾರರಿಗೆ ಪತ್ರಕರ್ತರ ಸ್ವಾತಂತ್ರ್ಯವನ್ನು ಹೋಲಿಸಲಾಗದು” ಎಂದು ಖಾರವಾಗಿ ನುಡಿಯಿತು.
ಮುಂದುವರಿದು, ಎಫ್‌ಐಆರ್ ವಿಚಾರದಲ್ಲಿ ಏನು ಬೆಳವಣಿಗೆಯಾಗಿದೆ ಎಂದು ಪೀಠ ಪ್ರಶ್ನಿಸಿತು. ಅದಕ್ಕೆ ಸಿಂಗ್ ಅವರು “ಶರ್ಮಾ ವಿಚಾರಣೆಯಲ್ಲಿ ಭಾಗವಹಿಸಿದ್ದರು” ಎಂದರು. ಆಗ ಪೀಠವು “ಆಮೇಲೆ ಏನಾಯಿತು. ನಿಮಗೆ ರತ್ನಗಂಬಳಿ ಹಾಸಿರಬೇಕು, ರತ್ನಗಂಬಳಿ!” ಎಂದು ಪೀಠವು ಮೊನಚಾಗಿ ಕುಟುಕಿತು. ಈ ಮನವಿಯನ್ನು ಪರಿಗಣಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಶರ್ಮಾ ಅವರು ಮನವಿಯನ್ನು ಹಿಂಪಡೆದರು.