ವಂಚನೆ ಮೂಲಕ ನಡೆಸಲಾಗುತ್ತಿದ್ದ 169 ನರ್ಸಿಂಗ್ ಕಾಲೇಜುಗಳ ಕುರಿತು ಮರುತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿದ್ದ ಮಧ್ಯಪ್ರದೇಶ ಹೈಕೋರ್ಟ್ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್ ಈಚೆಗೆ ನಿರಾಕರಿಸಿದೆ [ವಿಎನ್‌ಎಸ್ ಕಾಲೇಜ್ ಆಫ್ ನರ್ಸಿಂಗ್ ಮತ್ತಿತರರು ಹಾಗೂ ಮಧ್ಯಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಸಿಬಿಐ ಈ ಹಿಂದೆ ಎಲ್ಲಾ ಕಾಲೇಜುಗಳು ಲೋಪವೆಸಗಿಲ್ಲ ಎಂದಿತ್ತು. ಆದರೆ ನ್ಯಾಯಮೂರ್ತಿ ಪಿ ವಿ ಸಂಜಯ್ ಕುಮಾರ್ ಮತ್ತು ನ್ಯಾಯಮೂರ್ತಿ ಅಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ವಿಭಾಗೀಯ ಪೀಠ ಇದಕ್ಕೆ ಸಮ್ಮತಿಸಲಿಲ್ಲ.
ಈ ನರ್ಸಿಂಗ್ ಕಾಲೇಜುಗಳು ಸಂಪೂರ್ಣವಾಗಿ ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಸಾಬೀತುಪಡಿಸಲು ಎಲ್ಲರೂ ಹವಣಿಸುತ್ತಿದ್ದಾರೆಂದು ಅದು ಹೇಳಿದೆ.
"ಎಲ್ಲವೂ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಫಲಕ ತೂಗುಹಾಕಲು ನೀವೆಲ್ಲರೂ ಸ್ಪಷ್ಟವಾಗಿ ಯತ್ನಿಸಿದ್ದೀರಿ ಎಂದು ತೋರುತ್ತಿದೆ" ಎಂದು ನ್ಯಾಯಮೂರ್ತಿ ಕುಮಾರ್ ಮೇಲ್ಮನವಿ ಸಲ್ಲಿಸಿದ್ದ ಕಾಲೇಜುಗಳ ಪರ ವಕೀಲರಿಗೆ ಮೌಖಿಕವಾಗಿ ಹೇಳಿದರು.
ಅಂತೆಯೇ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗಳನ್ನು ವಜಾಗೊಳಿಸಲಾಯಿತು.
ಆದರೆ ಮೇಲ್ಮನವಿ ವಜಾಗೊಳಿಸಿದ್ದರೂ ಅದು ಹೈಕೋರ್ಟ್‌ನಲ್ಲಿ ಬಾಕಿ ಉಳಿದಿರುವ ವಿಚಾರಣೆಗೆ ಸಂಬಂಧಿಸಿದಂತೆ ಪಕ್ಷಕಾರರು ಪ್ರಶ್ನಿಸುವುದನ್ನು ತಡೆಯುವುದಿಲ್ಲ ಎಂದು ಇದೇ ವೇಳೆ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿತು.
ತಮಗೆ ಅನುಕೂಲಕರವಾಗುವಂತೆ ಅನುಮಾನಾಸ್ಪದ ಕಾಲೇಜುಗಳು ಸಿಬಿಐನ ಕೆಲ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮೂಲ ಅರ್ಜಿದಾರರಲ್ಲಿ ಒಂದಾದ ಕಾನೂನು ವಿದ್ಯಾರ್ಥಿ ಸಂಘ ಹೈಕೋರ್ಟ್ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ್ದ ಹೈಕೋರ್ಟ್ ಪ್ರಕರಣದ ಮರು ತನಿಖೆಗೆ ಆದೇಶಿಸಿತ್ತು.