ನರ್ಸಿಂಗ್‌ ಕಾಲೇಜುಗಳು ಮೌಲಸೌಕರ್ಯ, ತಪಾಸಣಾ ವರದಿಯನ್ನು ವೆಬ್‌ ಪೋರ್ಟಲ್‌ಗಳಲ್ಲಿ ಅಪ್‌ಲೋಡ್‌ ಮಾಡಬೇಕು: ಹೈಕೋರ್ಟ್‌

“ನರ್ಸಿಂಗ್‌ ಕೋರ್ಸ್‌ಗಳಿಗೆ ಸೇರುವ ವಿದ್ಯಾರ್ಥಿಗಳು ಯಾವ ಸಂಸ್ಥೆಗಳ ಕಾಲೇಜಿನಲ್ಲಿ ಸೀಟು ಪಡೆಯಬೇಕು, ಕಾಲೇಜುಗಳ ‍ಮೂಲಸೌಕರ್ಯ, ಅಲ್ಲಿನ ವ್ಯವಸ್ಥೆ ಹೇಗಿದೆ ಎಂಬೆಲ್ಲಾ ವಿವರ ಪಡೆಯಲು ಯಾವುದೇ ವ್ಯವಸ್ಥೆ ಇಲ್ಲ” ಎಂದಿರುವ ಪೀಠ.
Justice Suraj Govindraj
Justice Suraj Govindraj
Published on

ರಾಜ್ಯದ ನರ್ಸಿಂಗ್‌ ಕಾಲೇಜುಗಳಲ್ಲಿನ ಮೂಲಸೌಕರ್ಯ ಸೇರಿದಂತೆ ಇತರೆ ಅಂಶಗಳ ತಪಾಸಣಾ ವರದಿಗಳನ್ನು ಆಯಾ ನರ್ಸಿಂಗ್‌ ಸಂಸ್ಥೆಗಳು ವೆಬ್‌ ಪೋರ್ಟಲ್‌ನಲ್ಲಿ ಕಾಲಕಾಲಕ್ಕೆ ಅಪ್‌ಲೋಡ್‌ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಸಕ್ಷಮ ಪ್ರಾಧಿಕಾರಗಳಿಗೆ ಆದೇಶಿಸಿದೆ.

ರಾಜ್ಯ ಖಾಸಗಿ ಆರೋಗ್ಯ ಸಂಸ್ಥೆಗಳ ನಿರ್ವಹಣಾ ಒಕ್ಕೂಟ ಮತ್ತು ರಾಜ್ಯ ನರ್ಸಿಂಗ್‌ ಮತ್ತು ಇತರೆ ಆರೋಗ್ಯ ಸಂಬಂಧಿ ಸಂಸ್ಥೆಗಳ ನಿರ್ವಹಣಾ ಒಕ್ಕೂಟ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ತಿರಸ್ಕರಿಸಿದೆ.

“ನರ್ಸಿಂಗ್‌ ಕೋರ್ಸ್‌ಗಳಿಗೆ ಸೇರುವ ವಿದ್ಯಾರ್ಥಿಗಳು ಯಾವ ಸಂಸ್ಥೆಗಳ ಕಾಲೇಜಿನಲ್ಲಿ ಸೀಟು ಪಡೆಯಬೇಕು, ಕಾಲೇಜುಗಳು, ಅಲ್ಲಿನ ಮೂಲಸೌಕರ್ಯ, ಅಲ್ಲಿನ ವ್ಯವಸ್ಥೆ ಹೇಗಿದೆ ಎಂಬೆಲ್ಲಾ ವಿವರಗಳನ್ನು ಪಡೆಯಲು ಸದ್ಯ ಯಾವುದೇ ವ್ಯವಸ್ಥೆ ಇಲ್ಲ” ಎಂಬುದನ್ನು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

ಈ ನಿಟ್ಟಿನಲ್ಲಿ ತಪಾಸಣಾ ವರದಿಗಳನ್ನು ಆಯಾ ನರ್ಸಿಂಗ್‌ ಸಂಸ್ಥೆಗಳು ವೆಬ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ನರ್ಸಿಂಗ್‌ ಮಂಡಳಿ (ಐಎನ್‌ಸಿ), ರಾಜ್ಯ ನರ್ಸಿಂಗ್‌ ಮಂಡಳಿ (ಕೆಎನ್‌ಸಿ) ಮತ್ತು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ (ಆರ್‌ಜಿಯುಎಚ್‌ಎಸ್‌) ನಿರ್ದೇಶಿಸಿದೆ.

“ನರ್ಸಿಂಗ್‌ ಸಂಸ್ಥೆಗಳ ವಿರುದ್ಧ ಯಾವುದೇ ವಿದ್ಯಾರ್ಥಿ, ಪೋಷಕರು, ಶಿಕ್ಷಕರು ಅಥವಾ ಉಪನ್ಯಾಸಕರು ಆನ್‌ಲೈನ್‌ ಮೂಲಕವೇ ಐಎನ್‌ಸಿ, ಕೆಎನ್‌ಸಿ ಮತ್ತು ಆರ್‌ಜಿಯುಎಚ್‌ಎಸ್‌ಗೆ ದೂರು ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಮತ್ತು ಆ ದೂರುಗಳನ್ನೂ ಅಪ್‌ಲೋಡ್‌ ಮಾಡಬೇಕು ಎಂದು ಐಎನ್‌ಸಿ, ಕೆಎನ್‌ಸಿ ಮತ್ತು ಆರ್‌ಜಿಯುಎಚ್‌ಎಸ್‌ಗೆ ಪೀಠ ತಾಕೀತು ಮಾಡಿದೆ.

“ನಿಮ್ಮ ವ್ಯಾಪ್ತಿಯ ನರ್ಸಿಂಗ್‌ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಸೌಕರ್ಯಗಳ ಬಗ್ಗೆ ಕೂಲಂಕಷ ತಪಾಸಣೆ ನಡೆಸಿ ವರದಿ ಸಲ್ಲಿಸಬೇಕು” ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್ಲ ಜಿಲ್ಲಾಧಿಕಾರಿಗಳಿಗೆ 2024ರ ನವೆಂಬರ್‌ 5ರಂದು ಸೂಚಿಸಿದ್ದರು. ಅರ್ಜಿದಾರರು ಇದನ್ನು ಪ್ರಶ್ನಿಸಿದ್ದರು.

Kannada Bar & Bench
kannada.barandbench.com