ಪೌಷ್ಠಿಕಾಂಶ ಕೊರತೆ, ವಿಷಾಹಾರ ಪತ್ತೆಯಾಗಿಲ್ಲ; ಕೊಲೆ ಆರೋಪಿ ದರ್ಶನ್‌ಗೆ ಮನೆ ಊಟಕ್ಕೆ ಅನುಮತಿಸಲಾಗದು: ಕಾರಾಗೃಹ ಇಲಾಖೆ
ನಟ ದರ್ಶನ್‌ಗೆ ಜೈಲಿನಲ್ಲಿ ನೀಡಲಾಗುತ್ತಿರುವ ಆಹಾರದಲ್ಲಿ ವಿಷಾಹಾರ ಪತ್ತೆಯಾಗಿಲ್ಲ ಮತ್ತು ಪೌಷ್ಠಿಕಾಂಶದ ಕೊರತೆಯೂ ಕಂಡುಬಂದಿಲ್ಲ. ದರ್ಶನ್‌ಗೆ ಮನೆ ಊಟದ ಅಗತ್ಯವಿದೆ ಎಂದು ವೈದ್ಯಾಧಿಕಾರಿ ಅಭಿಪ್ರಾಯ ನೀಡಿಲ್ಲ. ಮಿಗಿಲಾಗಿ ಕೊಲೆ ಆರೋಪಿಗೆ ಮನೆ ಊಟ ಪಡೆಯಲು ಅವಕಾಶವಿಲ್ಲ ಎಂಬ ಸಕಾರಣ ಉಲ್ಲೇಖಿಸಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿನ ಎರಡನೇ ಆರೋಪಿಯಾಗಿರುವ ದರ್ಶನ್ ಮನೆ ಊಟ ಪಡೆಯಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ.
ಕಾರಾಗೃಹ ಮತ್ತು ಸುಧಾರಣಾ ಸೇವೆಯ ಮಹಾನಿರ್ದೇಶಕಿ ಮಾಲಿನಿ ಕೃಷ್ಣಮೂರ್ತಿ ಆಗಸ್ಟ್ 14ರಂದು ಹೊರಡಿಸಿರುವ ಜ್ಞಾಪನೆಯಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಿದ್ದಾರೆ. ಅವುಗಳು ಇಂತಿವೆ.
ಬೆಂಗಳೂರಿನ ದಕ್ಷಿಣ ವಲಯ ಕಾರಾಗೃಹಗಳ ಉಪ ಮಹಾನಿರೀಕ್ಷಕರು ದರ್ಶನ್ ಅವರ ವೈದ್ಯಕೀಯ ದಾಖಲೆಗಳನ್ನು ಜುಲೈ 16ರಂದು ಪರಿಶೀಲಿಸಿದ್ದು, ಇದರಲ್ಲಿ ದರ್ಶನ್‌ಗೆ ಮೂಳೆ ಸಮಸ್ಯೆಗೆ ಚಿಕಿತ್ಸೆ ನೀಡಿರುವುದನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯ ವಿಷಾಹಾರದ ಸಮಸ್ಯೆ ಇಲ್ಲ ಎಂದು ನಮೂದಿಸಿದ್ದಾರೆ.
ಜುಲೈ 17ರಂದು ದರ್ಶನ್‌ಗೆ ವೈರಲ್ ಜ್ವರಕ್ಕೆ ಸಾಮಾನ್ಯ ಚಿಕಿತ್ಸೆ ನೀಡಲಾಗಿದೆ. ಜುಲೈ 22ರಂದು ಅವರಿಗೆ ತೀವ್ರ ಕೆಳ ಬೆನ್ನು ನೋವು ಬಲ ಕಾಲಿನವರೆಗೆ ಇತ್ತು. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಎರಡು ಮುಂಗೈಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿರುವುದರಿಂದ ಅವರ ಎಡ ಮತ್ತು ಬಲ ಮುಂಗೈಗಳಿಗೆ ಚಿಕಿತ್ಸೆ ನೀಡಲಾಗಿದೆ.
ಕಾರಾಗೃಹ ಮತ್ತು ಸುಧಾರಣಾ ಸೇವೆ ಕೈಪಿಡಿ 2021ರ 322ನೇ ಕಂಡಿಕೆ ಪ್ರಕಾರ ಬಂಧಿಗೆ ವೈದ್ಯಕೀಯ ಕಾರಣ, ವೈದ್ಯಾಧಿಕಾರಿ ವಿವೇಚನೆಯ ಅನುಸಾರ ಹೆಚ್ಚುವರಿ ಆಹಾರ ಅಥವಾ ಮಾರ್ಪಡಿಸಿದ ಆಹಾರ ನೀಡಬಹುದು. ಕಂಡಿಕೆ 338ರ ಪ್ರಕಾರ ವೈದ್ಯರ ಸಲಹೆ ಮೇರೆಗೆ ಆಹಾರ ಕ್ರಮ ರೂಪಿಸಬಹುದು. ಕಂಡಿಕೆ 855ರ ಪ್ರಕಾರ ಆಸ್ಪತ್ರೆಯಲ್ಲಿ ಇರದ ಬಂದಿಗೆ ವಿಶೇಷ ಆಹಾರವನ್ನು ವೈದ್ಯಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ನೀಡಬಹುದು.
ಪ್ರಸ್ತುತ ಕಾರಾಗೃಹದ ಅಧಿಕಾರಿಗಳು ದರ್ಶನ್‌ಗೆ ಒದಗಿಸುವ ಆಹಾರದಲ್ಲಿ ಯಾವುದೇ ವಿಷಾಹಾರ ಅಥವಾ ಪೌಷ್ಟಿಕಾಂಶದ ಕೊರತೆ ಬಗ್ಗೆ ಯಾವುದೇ ದೂರುಗಳು ಇಲ್ಲದಿರುವುದರಿಂದ ಮನೆಯ ಊಟದ ವ್ಯವಸ್ಥೆಗೆ ಅನುಮತಿ ನೀಡಲು ಯಾವುದೇ ಅವಕಾಶವಿರುವುದಿಲ್ಲ. ದರ್ಶನ್ ಉಳಿವಿಗಾಗಿ ಮನೆ ಊಟದ ಅಗತ್ಯವಿದೆ ಎಂದು ಕಾರಾಗೃಹದ ವೈದ್ಯಾಧಿಕಾರಿ ಯಾವುದೇ ಶಿಫಾರಸ್ಸು ಮಾಡಿಲ್ಲ ಮತ್ತು ವೈದ್ಯಕೀಯ ಸಲಹೆ ನೀಡಿಲ್ಲ.
ದರ್ಶನ್‌ಗೆ ಬೆಂಗಳೂರು ಕೇಂದ್ರ ಕಾರಾಗೃಹದ ವೈದ್ಯಾಧಿಕಾರಿ ಸಲಹೆ ಮೇರೆಗೆ ಜುಲೈ 5ರಿಂದ 10 ದಿನಗಳ ಕಾಲ ಹಾಲು, ಮೊಟ್ಟೆ, ಬ್ರೆಡ್ ಹಾಗೂ ಕ್ಯಾಲ್ಸಿಯಂ, ವಿಟಮಿನ್ ಡಿ3 ಸಪ್ಲಿಮೆಂಟ್‌ಗಳನ್ನು ನೀಡಲಾಗಿದೆ. ಆನಂತರ ವೈದ್ಯರ ಸಲಹೆ ಮೇರೆಗೆ ಆಗಸ್ಟ್ 1ರಿಂದ 15 ದಿನಗಳವರೆಗೆ ಬ್ರೆಡ್, ಹಾಲು ಮತ್ತು ಮೊಟ್ಟೆ ನೀಡಲಾಗಿದೆ. ಕಾರಾಗೃಹ ಮತ್ತು ಸಧಾರಣಾ ಸೇವೆ ಕೈಪಿಡಿಯ ಕಂಡಿಕೆ 728(i) ಅನ್ವಯ ದರ್ಶನ್ ಕೊಲೆ ಆರೋಪಿಯಾಗಿರುವುದರಿಂದ ಅವರ ಮನವಿ ಪುರಸ್ಕರಿಸಲಾಗದು ಎಂದು ವಿವರಿಸಲಾಗಿದೆ.


