ಮಕ್ಕಳು, ಗರ್ಭಿಣಿಯರು ಮತ್ತು ಎದೆ ಹಾಲುಣಿಸುವ ತಾಯಂದಿರಿಗೆ ಪೌಷ್ಟಿಕಾಂಶಯುಕ್ತ ಆಹಾರ ಪೂರೈಸಲು ಪೂರಕ ಪೌಷ್ಟಿಕಾಂಶ ತಯಾರಿ ಮಹಿಳಾ ತರಬೇತಿ ಕೇಂದ್ರಗಳನ್ನು (ಎಂಎಸ್‌ಪಿಟಿಸಿ) ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ಖಾತರಿ ನೀಡಿರುವ ಗುಂಪುಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ನೀತಿ ಮತ್ತು ಚೌಕಟ್ಟನ್ನು ರೂಪಿಸಿ 2020ರ ಜುಲೈ 2ರಂದು ಹೊರಡಿಸಿರುವ ಸುತ್ತೋಲೆಯು ಮುಂದಿನ ವಿಚಾರಣೆಯವರೆಗೆ ಜಾರಿಯಲ್ಲಿರಲಿದೆ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶ ಮಾಡಿದೆ.
ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಯೋಜನೆ (ಐಸಿಡಿಎಸ್) ಅಡಿ ಮಕ್ಕಳು, ಗರ್ಭಿಣಿಯರು ಮತ್ತು ಎದೆ ಹಾಲುಣಿಸುವ ತಾಯಂದಿರಿಗೆ ಕಳಪೆ ಗುಣಮಟ್ಟದ ಆಹಾರ ಪದಾರ್ಥ ಪೂರೈಸಲಾಗುತ್ತಿದೆ ಎಂದು ಆಕ್ಷೇಪಿಸಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಅಮರಾವತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸಂಗೀತಾ ಗದುಗಿನ್ ಹಾಗೂ ಸಂಬಂಧಿತರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
2020ರ ಜುಲೈ 2ರಂದು ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯು ಮರು ನವೀಕರಣಗೊಂಡು ಜಾರಿಯಾಗಲಿದ್ದು, ಮುಂದಿನ ವಿಚಾರಣೆಯವರೆಗೆ ಜಾರಿಯಲ್ಲಿರಲಿದೆ. ಇದರ ಜೊತೆಗೆ ಮಾರ್ಚ್ 5ರಂದು ಪೀಠ ಮಾಡಿರುವ ಆದೇಶವು ಮುಂದುವರಿಯಲಿದೆ. ಮಧ್ಯಂತರ ಆದೇಶಗಳು ಪ್ರಕರಣ ಇತ್ಯರ್ಥವಾಗುವವರೆಗೂ ಮುಂದುವರಿಯಲಿವೆ. ಮಾರ್ಚ್ 14ರ ನ್ಯಾಯಾಲಯದ ಆದೇಶಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳು ಸಲ್ಲಿಸಿರುವ ಅನುಪಾಲನಾ ವರದಿಯನ್ನು ಅಧಿಕೃತವಾಗಿ ಸ್ವೀಕರಿಸಲಾಗಿದೆ ಎಂದಿರುವ ಪೀಠವು ವಿಚಾರಣೆಯನ್ನು ಮುಂದೂಡಿದೆ.
ಕಳೆದ ವಿಚಾರಣೆಯಲ್ಲಿ ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಯೋಜನೆ ಅಡಿ ಮಕ್ಕಳು, ಗರ್ಭಿಣಿಯರು ಮತ್ತು ಎದೆ ಹಾಲುಣಿಸುವ ತಾಯಂದಿರಿಗೆ ಪೌಷ್ಟಿಕಾಂಶಯುಕ್ತ ಆಹಾರ ಪೂರೈಸುವುದಕ್ಕೆ ಸಂಬಂಧಿಸಿದಂತೆ ಹೊರಡಿಸಲಾಗಿದ್ದ ರಾಜ್ಯ ಸರ್ಕಾರದ ಎರಡು ಆಕ್ಷೇಪಾರ್ಹ ಆದೇಶಗಳಿಗೆ ಹೈಕೋರ್ಟ್ ತಡೆ ನೀಡಿತ್ತು.