C M Ibrahim and Karnataka HC
C M Ibrahim and Karnataka HC

ಜೆಡಿಎಸ್‌ ರಾಜ್ಯ ಕಾರ್ಯಕಾರಿ ಸಮಿತಿ ಮತ್ತು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸದಂತೆ ಆಕ್ಷೇಪಿಸಿ ಇಬ್ರಾಹಿಂ ಮೇಲ್ಮನವಿ

ಮೇಲ್ಮನವಿದಾರ ಇಬ್ರಾಹಿಂ ಪರ ವಕೀಲರು ಯಥಾಸ್ಥಿತಿ ಕಾಪಾಡಲು ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ಮತ್ತು ಅದರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸದಂತೆ ನಿರ್ಬಂಧಿಸಬೇಕು ಎಂದು ಕೋರಿದ್ದಾರೆ.

ಜೆಡಿಎಸ್‌ನ ರಾಜ್ಯ ಕಾರ್ಯಕಾರಿ ಸಮಿತಿ ಮತ್ತು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬಾರದು ಎಂದು ಜೆಡಿಎಸ್‌ನ ಉಚ್ಚಾಟಿತ ಅಧ್ಯಕ್ಷ ಸಿ ಎಂ ಇಬ್ರಾಹಿಂ ಸಲ್ಲಿಸಿರುವ ಮೇಲ್ಮನವಿ ಸಂಬಂಧ ಪ್ರತಿವಾದಿಗಳಿಂದ ಸೂಚನೆ ಪಡೆಯಲು ಜೆಡಿಎಸ್‌ ಪರ ವಕೀಲರಿಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಸೂಚಿಸಿದೆ.

ಜೆಡಿಎಸ್‌ ಸಂವಿಧಾನಕ್ಕೆ ವಿರುದ್ಧವಾಗಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ಉಚ್ಚಾಟನೆ ಮಾಡಿರುವುದಕ್ಕೆ ಪ್ರಶ್ನಿಸಿ ಹಾಗೂ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಚ್‌ ಡಿ ಕುಮಾರಸ್ವಾಮಿ ನೇಮಿಸಿರುವುದನ್ನು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾಧೀನ ನ್ಯಾಯಾಲಯ ವಜಾ ಮಾಡಿದ್ದರ ವಿರುದ್ಧ ಜೆಡಿಎಸ್‌ ಉಚ್ಚಾಟಿತ ಅಧ್ಯಕ್ಷ ಸಿ ಎಂ ಇಬ್ರಾಹಿಂ ಸಲ್ಲಿಸಿರುವ ಪ್ರಥಮ ಮೇಲ್ಮನವಿಯನ್ನು (ಆರ್‌ಎಫ್‌ಎ) ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಮೇಲ್ಮನವಿದಾರ ಇಬ್ರಾಹಿಂ ಪರ ವಕೀಲರು ಯಥಾಸ್ಥಿತಿ ಕಾಪಾಡಲು ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ಮತ್ತು ಅದರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸದಂತೆ ನಿರ್ಬಂಧಿಸಬೇಕು ಎಂದು ಕೋರಿದ್ದಾರೆ. ಪ್ರತಿವಾದಿಗಳ ಪರ ವಕೀಲರು ಈ ಸಂಬಂಧ ಪ್ರತಿವಾದಿಗಳಿಂದ ಸೂಚನೆ ಪಡೆಯಲು ಕಾಲಾವಕಾಶ ಕೋರಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಮೇ 9ಕ್ಕೆ ವಿಚಾರಣೆ ಮುಂದೂಡಿದೆ.

ಕರ್ನಾಟಕದಲ್ಲಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಸುವ ಮೂಲಕ ಹೊಸ ಅಧ್ಯಕ್ಷರನ್ನು ನೇಮಿಸಬಾರದು. ಸಿ ಎಂ ಇಬ್ರಾಹಿಂ ಅವರನ್ನು ಮತ್ತೆ ಜೆಡಿಎಸ್‌ ಅಧ್ಯಕ್ಷರನ್ನಾಗಿ ನೇಮಿಸಲು ಆದೇಶಿಸಬೇಕು ಎಂಬ ಮನವಿಯ ಅರ್ಜಿಯನ್ನೂ ಇಬ್ರಾಹಿಂ ಅವರು ಆರ್‌ಎಫ್‌ಎ ಜೊತೆ ಸಲ್ಲಿಕೆ ಮಾಡಿದ್ದಾರೆ.

Also Read
ಜೆಡಿಎಸ್‌ ಅಧ್ಯಕ್ಷ ಸ್ಥಾನದಿಂದ ಉಚ್ಚಾಟನೆ: ಸಿ ಎಂ ಇಬ್ರಾಹಿಂ ಅರ್ಜಿ ವಜಾ ಮಾಡಿದ ಬೆಂಗಳೂರಿನ ಸತ್ರ ನ್ಯಾಯಾಲಯ

ವಿಧಾನಸಭೆ ಚುನಾವಣೆಗೂ ಮುನ್ನ ಅಂದರೆ 03-08-2022ರಂದು ಜೆಡಿಎಸ್‌ ಅಧ್ಯಕ್ಷರಾಗಿ ತನ್ನನ್ನು ರಾಜ್ಯ ಕಾರ್ಯಕಾರಿಣಿಯಲ್ಲಿ ಘೋಷಿಸಲಾಗಿತ್ತು. ಎಚ್‌ ಡಿ ದೇವೇಗೌಡ ಮತ್ತು ಎಚ್‌ ಡಿ ಕುಮಾರಸ್ವಾಮಿ ಅವರು 2024 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು, ಸಕಾರಣವಿಲ್ಲದೇ ತಮ್ಮನ್ನು 16-11-2023ರಂದು ಪಕ್ಷದಿಂದ ಉಚ್ಚಾಟಿಸಿದ್ದಾರೆ. ಪ್ರತಿವಾದಿಗಳ ಈ ನಡೆಯು ಜೆಡಿಎಸ್‌ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಪಕ್ಷದ ನಿಯಮಗಳನ್ನು ಪಾಲಿಸಲಾಗಿಲ್ಲ. ಈ ನೆಲೆಯಲ್ಲಿ ತಮ್ಮ ವಾದ ಆಲಿಸದೇ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸದಂತೆ ನಿರ್ಬಂಧಿಸಬೇಕು ಎಂದು ಇಬ್ರಾಹಿಂ ಅರ್ಜಿಯಲ್ಲಿ ಕೋರಿದ್ದರು. ಇದನ್ನು ವಿಚಾರಣಾಧೀನ ನ್ಯಾಯಾಲಯವು 2024ರ ಮಾರ್ಚ್‌ 23ರಂದು ವಜಾ ಮಾಡಿತ್ತು. 

ಮೇಲ್ಮನವಿದಾರರ ಪರವಾಗಿ ವಕೀಲ ಶತಭಿಷ್‌ ಶಿವಣ್ಣ, ಪ್ರತಿವಾದಿಗಳ ಪರವಾಗಿ ಎ ವಿ ನಿಶಾಂತ್‌ ವಾದಿಸಿದರು.

Kannada Bar & Bench
kannada.barandbench.com