ಕಲ್ಲುಗಣಿ, ಎಂ-ಸ್ಯಾಂಡ್ ಸೇರಿದಂತೆ ಉಪ ಖನಿಜಗಳ ಗಣಿ ಗುತ್ತಿಗೆಗಳ ಅವಧಿಯನ್ನು ಕನಿಷ್ಠ 30 ವರ್ಷ ಮತ್ತು ಗರಿಷ್ಠ 50 ವರ್ಷ ವಿಸ್ತರಿಸಲು ಅವಕಾಶ ಮಾಡಿಕೊಟ್ಟಿರುವ ‘ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮ-2023’ಕ್ಕೆ ಆಕ್ಷೇಪಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಸಮಗ್ರ ವರದಿ ಸಲ್ಲಿಸುವಂತೆ ಮಂಗಳವಾರ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.
ಮಾಹಿತಿ ಹಕ್ಕು ಕಾರ್ಯಕರ್ತ ಕೆ ಪಿ ಶಿವಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆಗೆ ನಡೆಸಿತು.
“ಇದೊಂದು ಗಂಭೀರ ವಿಚಾರವಾಗಿದೆ. ಅರ್ಜಿಯಲ್ಲಿ ಆಕ್ಷೇಪಿಸಲಾದ ವಿಷಯಗಳ ಕುರಿತು ರಾಜ್ಯ ಸರ್ಕಾರವು ಸಮಗ್ರ ವರದಿ ಸಲ್ಲಿಸಬೇಕು. ಫೆಡರೇಷನ್ ಆಫ್ ಕರ್ನಾಟಕ ಗ್ರಾನೈಟ್ ಇಂಡಸ್ಟ್ರಿ ಸಲ್ಲಿಸಿದ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರವು ಆಕ್ಷೇಪಣೆ ಸಲ್ಲಿಸಬೇಕು” ಎಂದು ನೋಟಿಸ್ ಜಾರಿಗೊಳಿಸಿ ಪೀಠವು ವಿಚಾರಣೆಯನ್ನು ಜನವರಿ 19ಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಕೀಲೆ ವಿಜೇತಾ ನಾಯಕ್ ಅವರು, ಕೇಂದ್ರ ಸರ್ಕಾರದ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ-1957ಕ್ಕೆ ತದ್ವಿರುದ್ಧವಾಗಿ ರಾಜ್ಯ ಸರ್ಕಾರ ‘ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳಿಗೆ ತಿದ್ದುಪಡಿ ತಂದಿದೆ. ಎಂ-ಸ್ಯಾಂಡ್ ಗಣಿಗಾರಿಕೆಗೆ ಗರಿಷ್ಠ 20 ವರ್ಷಕ್ಕೆ ಮತ್ತು ಕಲ್ಲುಗಣಿಗಾರಿಕೆ (ಗ್ರಾನೈಟ್)ಗೆ ಗರಿಷ್ಠ 30 ವರ್ಷಕ್ಕೆ ಗಣಿ ಗುತ್ತಿಗೆ ನೀಡಬಹುದು. ಆದರೆ, ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿ ಪ್ರಕಾರ ನಿರ್ದಿಷ್ಟ ಖನಿಜಗಳಿಗೆ ಚಾಲ್ತಿ ಗಣಿ ಗುತ್ತಿಗೆ ಅವಧಿ 20 ವರ್ಷ ಇದ್ದದ್ದನ್ನು 30 ವರ್ಷಕ್ಕೆ ಹಾಗೂ ಅನಿರ್ದಿಷ್ಟವಲ್ಲದ ಖನಿಜಗಳಿಗೆ ಗಣಿ ಗುತ್ತಿಗೆ ಅವಧಿ 30 ವರ್ಷ ಇದ್ದದ್ದನ್ನು ಏಕಾಏಕಿ 50 ವರ್ಷಕ್ಕೆ ವಿಸ್ತರಿಸಲಾಗಿದೆ. ಇದು ಕಾನೂನು ಬಾಹಿರ ಎಂದು ಆಕ್ಷೇಪಿಸಿದರು.
ಹೊಸ ಹರಾಜಿಗೆ ಅವಕಾಶ ಕೊಡದೆ, ಚಾಲ್ತಿ ಗಣಿ ಗುತ್ತಿಗೆಗಳ ಅವಧಿಯನ್ನು ವಿಸ್ತರಿಸುವುದರಿಂದ ರಾಜ್ಯ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ಖೋತಾ ಆಗುತ್ತಿದೆ. ಜೊತೆಗೆ ಗಣಿಗಾರಿಕೆಗೆ ಹೊಸಬರಿಗೆ ಅವಕಾಶ ಸಿಗದಂತಾಗಿದೆ. ಚಾಲ್ತಿ ಗಣಿ ಗುತ್ತಿಗೆಗಳ ಅವಧಿ ವಿಸ್ತರಿಸುವುದರಿಂದ ಹಳೆಯ ಗಣಿ ಗುತ್ತಿಗೆದಾರರ ಪ್ರಾಬಲ್ಯ ಹೆಚ್ಚಾಗಿ ಅದು ಏಕಸ್ವಾಮ್ಯಕ್ಕೆ ಅವಕಾಶ ಮಾಡಿಕೊಡಲಿದೆ. ಆದ್ದರಿಂದ, ಅವಧಿ ವಿಸ್ತರಣೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ 2023ರ ಮಾರ್ಚ್ 17ರಂದು ಜಾರಿಗೆ ತಂದಿರುವ ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮ-2023ರ ನಿಯಮ 8(ಎ)(1) ಅನ್ನು ರದ್ದುಪಡಿಸಬೇಕು. ಗಣಿ ಗುತ್ತಿಗೆ ನೀಡುವ ಸಂಬಂಧ ಕೇಂದ್ರ ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಅರ್ಜಿ ಇತ್ಯರ್ಥ ಆಗುವ ತನಕ ತಿದ್ದುಪಡಿ ನಿಯಮಗಳ ಜಾರಿಗೆ ತಡೆ ನೀಡಬೇಕು ಎಂದು ಕೋರಿದರು.
ಸರ್ಕಾರದ ಪರ ವಕೀಲ ಎಸ್ ಎಸ್ ಮಹೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.