
ಭೂ ಸ್ವಾಧೀನದ ವೇಳೆ ನಿಡುವ ಪರಿಹಾರಕ್ಕೆ ಆದಾಯ ತೆರಿಗೆ ವಿಧಿಸಿದ ಕ್ರಮವನ್ನು ಪ್ರಶ್ನಿಸಿ ಮಂಗಳೂರಿನ ಪ್ರಮುಖ ಉದ್ಯಮಿಯೊಬ್ಬರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂದು ಆದಾಯ ತೆರಿಗೆ ಅಧಿಕಾರಿಗಳಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರ್ದೇಶಿಸಿದೆ.
ಮಂಗಳೂರಿನ ಉದ್ಯಮಿ ಸುಪ್ರಿಯಾ ಎಸ್. ಶೆಟ್ಟಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರ ಏಕಸದಸ್ಯ ಪೀಠ ನಡೆಸಿತು.
“ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು” ಎಂದು ಮಧ್ಯಂತರ ಆದೇಶ ನೀಡಿರುವ ಪೀಠವು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಸೇರಿದಂತೆ ಪ್ರಕರಣದಲ್ಲಿನ ಒಟ್ಟು ಎಂಟು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ್ದು, ವಿಚಾರಣೆಯನ್ನು 2025ರ ಜನವರಿ 22ಕ್ಕೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರಿಗೆ ಸೇರಿದ 17.48 ಎಕರೆ ಜಮೀನಿನ ಕೆಲ ಭಾಗವನ್ನು ರಾಷ್ಟ್ರೀಯ ಹೆದ್ದಾರಿ–169ರ ವಿಸ್ತರಣೆಗಾಗಿ 2020ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ ನೀಡಲಾದ ಪರಿಹಾರ ಧನದ ಮೊತ್ತ ₹1.9 ಕೋಟಿಯಲ್ಲಿ ತೆರಿಗೆ ಅಧಿಕಾರಿಗಳು ಮೂಲದಲ್ಲೇ ತೆರಿಗೆ ಕಡಿತ ಮಾಡಿಕೊಂಡಿದ್ದಾರೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕಾಯಿದೆ–1956ರ ಪ್ರಕಾರ ನಮಗೆ ನ್ಯಾಯಸಮ್ಮತ ಪರಿಹಾರ ನೀಡಿಕೆ ಹಕ್ಕು ಮತ್ತು ಭೂ ಸ್ವಾಧೀನದಲ್ಲಿ ಪಾರದರ್ಶಕತೆ, ಪುನರ್ವಸತಿ ಹಾಗೂ ಪುನರ್‌ಸ್ಥಾಪನೆ ಕಾಯಿದೆ–2013 ಅನ್ವಯಿಸುತ್ತದೆ. ಹೀಗಾಗಿ, ಪರಿಹಾರ ಧನಕ್ಕೆ ತೆರಿಗೆ ವಿನಾಯಿತಿ ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಅರ್ಜಿದಾರರ ಪರ ವಕೀಲ ಕೆ ವಿ ಧನಂಜಯ ವಾದ ಮಂಡಿಸಿದ್ದರು.