ಗೃಹಲಕ್ಷ್ಮಿ, ಗೃಹಜ್ಯೋತಿ ಜಾಹೀರಾತುಗಳಲ್ಲಿ ಸಿಎಂ, ಡಿಸಿಎಂ ಭಾವಚಿತ್ರಕ್ಕೆ ತಕರಾರು: ಪಿಐಎಲ್‌ ವಜಾಗೊಳಿಸಿದ ಹೈಕೋರ್ಟ್‌

“ಜನರಿಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದವರು ಸಹಜವಾಗಿ ಯಾವೆಲ್ಲಾ ಕಾರ್ಯಕ್ರಮಗಳನ್ನು ಮತದಾರರಿಗೆ ರೂಪಿಸಲಾಗಿದೆ ಎಂಬ ಮಾಹಿತಿ ನೀಡುತ್ತಾರೆ. ಇದರಲ್ಲಿ ತಪ್ಪೇನಿದೆ” ಎಂದ ಪೀಠ.
Gruha Jyothi and Gruha Lakshmi and Karnataka HC
Gruha Jyothi and Gruha Lakshmi and Karnataka HC

ರಾಜ್ಯ ಸರ್ಕಾರ ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮಿ ಮತ್ತು ಗೃಹಜೋತಿ ಯೋಜನೆಗಳ ಜಾಹೀರಾತು ಮತ್ತು ಒಪ್ಪಿಗೆ ಆದೇಶಗಳಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಮಂತ್ರಿಗಳ ಭಾವಚಿತ್ರ, ಹೆಸರು ಬಳಕೆಗೆ ನಿರ್ಬಂಧ ವಿಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ವಜಾ ಮಾಡಿದೆ.

ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರವಾಗಿ ವಾದಿಸಿದ ವಕೀಲ ಎಸ್‌ ಉಮಾಪತಿ ಅವರು ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮಿ ಯೋಜನೆಗಳ ಜಾಹೀರಾತುಗಳಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರ ಭಾವಚಿತ್ರ ಮತ್ತು ಹೆಸರು ಬಳಕೆ ಮಾಡಲಾಗುತ್ತದೆ. ಸರ್ಕಾರಿ ಜಾಹೀರಾತುಗಳಲ್ಲಿ ಮುಖ್ಯಮಂತ್ರಿ, ಮಂತ್ರಿಗಳ ಭಾವಚಿತ್ರ ಬಳಸದಂತೆ ಸುಪ್ರೀಂ ಕೋರ್ಟ್‌ ಆದೇಶವಿದೆ. ಇದನ್ನು ಉಲ್ಲಂಘಿಸಲಾಗಿದೆ. ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಭಾವಚಿತ್ರ ಬಳಕೆ ಮಾಡಿಕೊಂಡು ಪ್ರಚಾರ ನಡೆಸಲಾಗುತ್ತಿದೆ. ಆ ಮೂಲಕ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ” ಎಂದರು.

ಇದಕ್ಕೆ ಪೀಠವು “ಜನರಿಗೆ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದವರು ಸಹಜವಾಗಿ ಯಾವೆಲ್ಲಾ ಕಾರ್ಯಕ್ರಮಗಳನ್ನು ಮತದಾರರಿಗೆ ರೂಪಿಸಲಾಗಿದೆ ಎಂಬ ಮಾಹಿತಿ ನೀಡುತ್ತಾರೆ. ಇದರಲ್ಲಿ ತಪ್ಪೇನಿದೆ. ಇದಕ್ಕೆ ನಿಮ್ಮ ಆಕ್ಷೇಪವೇನಾದರೂ ಇದ್ದರೆ ಅಂಥವರನ್ನು ಆಯ್ಕೆ ಮಾಡಬಾರದು” ಎಂದು ಹೇಳಿತು.

ಅಂತಿಮವಾಗಿ ಅರ್ಜಿದಾರರ ವಾದದಿಂದ ಸಂತುಷ್ಟಗೊಳ್ಳದ ಪೀಠವು ಅರ್ಜಿ ವಜಾ ಮಾಡಿ, ವಿಸ್ತೃತ ಆದೇಶ ಪ್ರಕಟಿಸಲಾಗುವುದು ಎಂದು ಹೇಳಿತು.

Kannada Bar & Bench
kannada.barandbench.com