ವಾರಾಣಸಿ ಜಿಲ್ಲಾ ನ್ಯಾಯಾಧೀಶರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್: ರಾಮನಗರದ ವಕೀಲ ಪಾಷಾಗೆ ಜಾಮೀನು ಮಂಜೂರು
ಉತ್ತರಪ್ರದೇಶದ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ಕಲ್ಪಿಸಿದ್ದ ವಾರಾಣಸಿ ಜಿಲ್ಲಾ ನ್ಯಾಯಾಧೀಶರ ವಿರುದ್ಧ ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ ಆರೋಪದ ಮೇಲೆ ರಾಮನಗರ ವಕೀಲ ಹಾಗೂ ಎಸ್‌ಡಿಪಿಐ ಮುಖಂಡ ಚಾಂದ್ ಪಾಷ ಅವರಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಮಂಗಳವಾರ ಬೆಳಿಗ್ಗೆ ಪಾಷ ಅವರನ್ನು ಬಂಧಿಸಿದ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪಾಷ ಪರ ವಕೀಲರು ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ರಾಮನಗರ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪರಿಮಳ ತುಬಕಿ ಅವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದರು.
ಚಾಂದ್ ಪಾಷ ಫೆಬ್ರವರಿ 2ರಂದು ಮಾಡಿದ್ದ ಫೇಸ್‌ಬುಕ್ ಪೋಸ್ಟ್ ಕುರಿತು ರಾಮನಗರ ಬಿಜೆಪಿ ಮುಖಂಡ ಪಿ ಶಿವಾನಂದ ಅವರು ನೀಡಿದ್ದ ದೂರಿನ ಅನ್ವಯ ಫೆಬ್ರವರಿ 3ರಂದು ಪಾಷ ವಿರುದ್ಧ ಐಜೂರು ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 504 (ಶಾಂತಿಭಂಗಕ್ಕೆ ಪ್ರಚೋದನೆ) ಮತ್ತು 505(2) (ಜಾತಿ, ಧರ್ಮ ಹಾಗೂ ಎರಡು ಗುಂಪುಗಳ ನಡುವೆ ದ್ವೇಷ ಉಂಟು ಮಾಡುವ ಹೇಳಿಕೆ ಪ್ರಚುರಪಡಿಸುವುದು) ಅಡಿ ಎಫ್ಐಆರ್ ದಾಖಲಾಗಿತ್ತು.
ಪಿಎಸ್‌ಐ ಅಮಾನತಿಗೆ ಆಗ್ರಹ: ವಕೀಲ ಚಾಂದ್ ಪಾಷಾ ಪ್ರಕರಣವು ಕೋಮು ಸ್ವರೂಪ ಪಡೆದು ವಕೀಲರ ಎರಡು ಬಣಗಳ ನಡುವೆ ಸೋಮವಾರ ಘರ್ಷಣೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಹಲವು ವಕೀಲರ ವಿರುದ್ಧ ಐಜೂರು ಠಾಣೆ ಪಿಎಸ್‍ಐ ತನ್ವೀರ್ ಹುಸೇನ್ ಪ್ರಕರಣ ದಾಖಲಿಸಿದ್ದರು. ವಕೀಲರ ವಿರುದ್ಧ ಎಫ್‌ಐಆರ್ ದಾಖಲಿಸಿದ ಕಾರಣಕ್ಕೆ ಪಿಎಸ್‌ಐ ಅಮಾನತ್ತಿಗೆ ಆಗ್ರಹಿಸಿ ಜಿಲ್ಲೆಯ ವಕೀಲರು ಆರಂಭಿಸಿದ್ದ ಅನಿರ್ಧಿಷ್ಟಾವಧಿ ಮುಷ್ಕರ ಮಂಗಳವಾರವೂ ಮುಂದುವರೆದಿದ್ದು, ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಕಲಾಪ ಬಹಿಷ್ಕರಿಸಿ ವಕೀಲರು ಪ್ರತಿಭಟಿಸಿದರು.
ಬೆಂಗಳೂರು ವಕೀಲರ ಸಂಘವು (ಎಎಬಿ) ಪ್ರತಿಭಟನೆಗೆ ಬೆಂಬಲ ಸೂಚಿಸಿದೆ. 40ಕ್ಕೂ ಹೆಚ್ಚು ವಕೀಲರ ವಿರುದ್ಧ ಎಫ್‍ಐಆರ್ ದಾಖಲಿಸುವ ಮೂಲಕ ಪೊಲೀಸರು ವಕೀಲರಿಗೆ ಅಪಮಾನ ಮಾಡಿದ್ದಾರೆ. ಇದಕ್ಕೆ ಕಾರಣವಾದ ಪಿಎಸ್‍ಐ ಅಮಾನತ್ತು ಮಾಡಬೇಕು ಎಂದು ಎಎಬಿ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಹೇಳಿದ್ದಾರೆ.
ಪಿಎಸ್‌ಐ ಅಮಾನತಿನ ವಿಚಾರದಲ್ಲಿ ರಾಮನಗರ ಜಿಲ್ಲಾ ಪೊಲೀಸರು ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.