ವಿವೇಕಯುತ ಸಮಾಜದ ನೈತಿಕತೆಗೆ ವಿರುದ್ಧ: ಮಲಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ತಂದೆಗೆ ಜಾಮೀನು ನಿರಾಕರಣೆ

“ಉತ್ತಮ ಸಮಾಜವನ್ನು ಸುಭದ್ರಗೊಳಿಸಲು ಹಾಗೂ ಹಿಂದು ಸಂಪ್ರದಾಯದ ಅಡಿಯಲ್ಲಿ ಉತ್ತಮ ರೂಢಿಗಳನ್ನು ಉಳಿಸಿಕೊಳ್ಳುವ ‌ನಿಟ್ಟಿನಲ್ಲಿ ಈ ಅರ್ಜಿಯನ್ನು ತಿರಸ್ಕರಿಸುವುದು ಸೂಕ್ತ” ಎಂದಿರುವ ಹೈಕೋರ್ಟ್‌.
POCSO ACT
POCSO ACT
Published on

ಅಪ್ರಾಪ್ತ ಮಲಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆ ಗರ್ಭವತಿಯಾಗಲು ಕಾರಣನಾದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ವ್ಯಕ್ತಿಗೆ ಈಚೆಗೆ ಜಾಮೀನು ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್, ಆರೋಪಿ ಎಸಗಿದ್ದಾನೆ ಎನ್ನಲಾದ ಅಪರಾಧವು ಸಮಾಜಕ್ಕೆ ಮಾರಕವಾಗಿದ್ದು, ವಿವೇಕಯುತ ಸಮಾಜದ ನೈತಿಕತೆಗೆ ವಿರುದ್ಧ ಎಂದಿದೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ನಿವಾಸಿ, ಸದ್ಯ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ನೆಲೆಸಿರುವ ದುರ್ಗಪ್ಪ ಅಲಿಯಾಸ್ ದುರ್ಗೇಶ್ ಜಾಮೀನು ಕೋರಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ರಾಚಯ್ಯ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

Justice S Rachaiah
Justice S Rachaiah

ಮಲತಂದೆಯೇ ಅಪ್ರಾಪ್ತ ಮಲಮಗಳ ಮೇಲೆ ಅತ್ಯಾಚಾರ ಎಸಗುವಂತಹ ಕೃತ್ಯ ಇಡೀ ಸಮಾಜಕ್ಕೆ ಮಾರಕವಾಗಿದೆ ಹಾಗೂ ವಿವೇಕಯುತ ಸಮಾಜದ ನೈತಿಕತೆಗೆ ವಿರುದ್ಧ. ಆದ್ದರಿಂದ, ಉತ್ತಮ ಸಮಾಜವನ್ನು ಸುಭದ್ರಗೊಳಿಸಲು ಹಾಗೂ ಹಿಂದು ಸಂಪ್ರದಾಯದ ಅಡಿಯಲ್ಲಿ ಉತ್ತಮ ರೂಢಿಗಳನ್ನು ಉಳಿಸಿಕೊಳ್ಳುವ ‌ನಿಟ್ಟಿನಲ್ಲಿ ಈ ಅರ್ಜಿಯನ್ನು ತಿರಸ್ಕರಿಸುವುದು ಸೂಕ್ತ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ವಿಚಾರಣೆ ವೇಳೆ ವಾದ ಮಂಡಿಸಿದ್ದ ಆರೋಪಿಯ ಪರ ವಕೀಲ ಬಿ ಆರ್‌ ಹೊನ್ನೇಶ್‌ ಅವರು "ಅರ್ಜಿದಾರ ಅಮಾಯಕನಾಗಿದ್ದು, ಆತನೇ ಕೂಲಿ ಕೆಲಸ ಮಾಡಿ ದೂರುದಾರ ಮಹಿಳೆ ಹಾಗೂ ಆಕೆಯ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ. ಪ್ರಕರಣದಲ್ಲಿ ಆತನನ್ನು ತಪ್ಪಾಗಿ ಸಿಲುಕಿಸಲಾಗಿದೆ. ಸಂತ್ರಸ್ತೆಯ ಗರ್ಭದಲ್ಲಿರುವ ಮಗು ಅರ್ಜಿದಾರನದ್ದೇ‌ ಎಂಬುದನ್ನು ಸಾಬೀತುಪಡಿಸಲು ಡಿಎನ್‌ಎ ಪರೀಕ್ಷೆಯನ್ನೇ ನಡೆಸಲಾಗಿಲ್ಲ. ನ್ಯಾಯಾಲಯ ವಿಧಿಸುವ ಯಾವುದೇ ಷರತ್ತಿಗೆ ಅರ್ಜಿದಾರ ಬದ್ಧನಾಗಿರುತ್ತಾನೆ, ಆತನಿಗೆ ಜಾಮೀನು ಮಂಜೂರು ಮಾಡಬೇಕು" ಎಂದು ಮನವಿ ಮಾಡಿದ್ದರು.

ಇದನ್ನು ಬಲವಾಗಿ ಆಕ್ಷೇಪಿಸಿದ್ದ ಸರ್ಕಾರದ ಪರ ವಕೀಲ ಲಕ್ಷ್ಮಣ್‌ ಅವರು "ಆರೋಪಿಯು ತನ್ನ‌ 15 ವರ್ಷದ ಮಲಮಗಳ ಮೇಲೆಯೇ ಹೀನಕೃತ್ಯ ಎಸಗಿ ಆಕೆ ಗರ್ಭ ಧರಿಸಲು ಕಾರಣನಾಗಿದ್ದಾನೆ. ಒಂದೊಮ್ಮೆ ಆತನಿಗೆ ಜಾಮೀನು‌ ನೀಡಿದರೆ ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಬೆದರಿಕೆಯೊಡ್ಡುವ ಸಾಧ್ಯತೆ ಇದೆ. ಆದ್ದರಿಂದ, ಆರೋಪಿಯ ಅರ್ಜಿ ವಜಾಗೊಳಿಸಬೇಕು" ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ: ಮೊದಲ ಪತಿಯೊಡನೆ ನೆಲೆಸಿದ್ದ ದೂರುದಾರ ಮಹಿಳೆಗೆ ಮೂವರು ಮಕ್ಕಳಿದ್ದರು. ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದರಿಂದ ದಂಪತಿ ವಿಚ್ಛೇದನ ಪಡೆದು ದೂರವಾಗಿದ್ದರು. ವಿಚ್ಛೇದನದ ಬಳಿಕ ಅರ್ಜಿದಾರ ಆರೋಪಿಯನ್ನು ಎರಡನೇ ಮದುವೆಯಾಗಿದ್ದ ಮಹಿಳೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.

ಹಬ್ಬದ ಸಂದರ್ಭದಲ್ಲಿ ಮಕ್ಕಳು 2025ರ ಸೆಪ್ಟೆಂಬರ್ 1ರಂದು ಚಿಕ್ಕನಾಯಕನಹಳ್ಳಿಗೆ ಬಂದಿದ್ದರು. ಈ ವೇಳೆ ಮಹಿಳೆಗೆ ತನ್ನ 15 ವರ್ಷದ ಪುತ್ರಿಗೆ ಕಳೆದ 2 ತಿಂಗಳಿನಿಂದ ಋತುಸ್ರಾವವಾಗದ ವಿಚಾರ ತಿಳಿದು, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಿದ್ದರು. ವೈದ್ಯರ ತಪಾಸಣೆಯಲ್ಲಿ ಆಕೆ 2 ತಿಂಗಳ ಗರ್ಭಿಣಿ ಎಂದು ತಿಳಿದಿಬಂದಿತ್ತು. ಮಗಳನ್ನು ಈ ಕುರಿತು ವಿಚಾರಿಸಲಾಗಿ ಮಲತಂದೆಯೇ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದನೆ ಎಂದು ತಿಳಿಸಿದ್ದಳು.

ಬಾಲಕಿಯ ಹೇಳಿಕೆ ಆಧರಿಸಿ ಆರೋಪಿ ವಿರುದ್ಧ ಚಿಕ್ಕನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಯನ್ನು ಬಂಧಿಸಿದ್ದ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್‌ 64(2)(ಎಫ್) (ಪೋಷಕನ ಸ್ಥಾನದಲ್ಲಿದ್ದುಕೊಂಡು ಅತ್ಯಾಚಾರ), 64(2)(ಎಂ) (ನಿರಂತರ ಅತ್ಯಾಚಾರ), 65(1) (16 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಮೇಲೆ ಅತ್ಯಾಚಾರ) ಹಾಗೂ ಪೋಕ್ಸೊ ಕಾಯಿದೆಯ ಸೆಕ್ಷನ್ 4 ಹಾಗೂ 6ರ (ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ) ಅಡಿಯ ಆರೋಪಗಳ ತನಿಖೆ ನಡೆಸಿ, ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ, ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ, ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದನು.

Attachment
PDF
Durgappa @ Durgesh Vs State of Karnataka
Preview
Kannada Bar & Bench
kannada.barandbench.com