ಅಪಾರ್ಟ್‌ಮೆಂಟ್‌ಗಳಲ್ಲಿ ನಿರ್ಮಿಸಿರುವ ಈಜುಕೊಳಗಳಲ್ಲಿ ಸಂಭವಿಸುವ ಸಾವು ಅಥವಾ ಅವಘಡಗಳನ್ನು ತಪ್ಪಿಸಲು ಜೀವರಕ್ಷಕರ ನೇಮಕ ಅಥವಾ ಸೂಕ್ತ ಸುರಕ್ಷತಾ ಕ್ರಮಕೈಗೊಳ್ಳದಿದ್ದರೆ ಅಪಾರ್ಟ್‌ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ (ಆರ್‌ಡಬ್ಲ್ಯುಎ) ಪದಾಧಿಕಾರಿಗಳನ್ನು ಕ್ರಿಮಿನಲ್ ನಿರ್ಲಕ್ಷ್ಯದ ಆರೋಪಕ್ಕೆ ಗುರಿಪಡಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಮಹತ್ವದ ಆದೇಶ ಮಾಡಿದೆ.
ಬೆಂಗಳೂರಿನ ಪ್ರೆಸ್ಟೀಜ್ ಲೇಕ್‌ಸೈಡ್ ಹ್ಯಾಬಿಟೇಟ್ ಹೋಮ್ ಓನರ್ಸ್ ಅಸೋಸಿಯೇಶನ್‌ನ ಆರು ಪದಾಧಿಕಾರಿಗಳು ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣ ವಜಾ ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ.
“ಹಾಲಿ ಪ್ರಕರಣದಲ್ಲಿನಂತೆ ಈಜುಕೊಳ ಹೊಂದಿರುವ ಯಾವುದೇ ಅಪಾರ್ಟ್‌ಮೆಂಟ್‌ನಲ್ಲಿ ಜೀವರಕ್ಷಕ ನೇಮಕ ಅಥವಾ ಸುರಕ್ಷತಾ ಕ್ರಮಕೈಗೊಳ್ಳದಿದ್ದರೆ ಅಂಥ ಅಪಾರ್ಟ್‌ಮೆಂಟ್‌ಗಳು ತಮಗೆ ತಾವೇ ಕೇಡು ತಂದುಕೊಳ್ಳುತ್ತವೆ” ಎಂದು ನ್ಯಾಯಾಲಯ ಆದೇಶದಲ್ಲಿ ಎಚ್ಚರಿಸಿದೆ.
“ಹಾಲಿ ಪ್ರಕರಣದಲ್ಲಿ ಘಟಿಸಿರುವಂತೆ ಮುಗ್ಧ ಜೀವಗಳ ಸಾವನ್ನು ತಪ್ಪಿಸುವುದಕ್ಕಾಗಿ ಅಪಾರ್ಟ್‌ಮೆಂಟ್‌ಗಳಲ್ಲಿನ ಕ್ಷೇಮಾಭಿವೃದ್ಧಿ ಸಂಘಗಳ ಸದಸ್ಯರು ಮಕ್ಕಳ ಜೀವ ಉಳಿಸುವುದಕ್ಕಾಗಿ ನಿರ್ದಿಷ್ಟ ಕ್ರಮಕೈಗೊಳ್ಳಬೇಕು. ಪ್ರಕರಣದಲ್ಲಿ ನಿರ್ದಿಷ್ಟ ಸಮಯದಲ್ಲಿ ಈಜುಕೊಳದ ಬಳಿ ಯಾವುದೇ ಜೀವರಕ್ಷಕರನ್ನು ನೇಮಿಸಿಕೊಳ್ಳಲಾಗಿರಲಿಲ್ಲ ಅಥವಾ ಈಜುಕೊಳದ ಸುತ್ತ ಸುರಕ್ಷಾ ಕ್ರಮಕೈಗೊಂಡಿರಲಿಲ್ಲ ಎನ್ನುವುದು ಕಂಡುಬಂದಿದೆ. ಹೀಗಾಗಿ, ಮೇಲ್ನೋಟಕ್ಕೆ ಅರ್ಜಿದಾರರು ನಿರ್ಲಕ್ಷ್ಯ ವಹಿಸಿರುವುದರಿಂದ ಐಪಿಸಿ ಸೆಕ್ಷನ್ 304ಕ್ಕೆ ಬದಲಾಗಿ ಐಪಿಸಿ ಸೆಕ್ಷನ್ 304ಎ (ನಿರ್ಲಕ್ಷ್ಯ ಅಥವಾ ಅಜಾಗರೂಕತೆಯಿಂದ ಮತ್ತೊಬ್ಬರ ಪ್ರಾಣಕ್ಕೆ ಎರವಾಗುವುದು) ಅಡಿಯ ಅಪರಾಧಕ್ಕಾಗಿ ವಿಚಾರಣೆಯಲ್ಲಿ ಅವರು ಆರೋಪಮುಕ್ತವಾಗಿ ಹೊರಬೇಕು” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.
ಅರ್ಜಿದಾರರ ಪರವಾಗಿ ವಾದಿಸಿದ್ದ ಸರ್ಕಾರಿ ವಕೀಲ ಪಿ ತೇಜಸ್ ಅವರು “ಈಜುಕೊಳದ ಸುತ್ತ ಯಾವುದೇ ಸುರಕ್ಷತಾ ಕ್ರಮಕೈಗೊಳ್ಳದಿರುವುದು ಬಾಲಕಿಯ ಸಾವಿಗೆ ಕಾರಣ” ಎಂದಿದ್ದರು.
ಅರ್ಜಿದಾರರ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಸಂದೇಶ್ ಚೌಟ ಮತ್ತು ಎನ್ ಎಸ್ ಶ್ರೀರಾಜ್ ಗೌಡ ಅವರು “ಮಗುವಿನ ಕೊಲೆ ಮಾಡುವ ಯಾವುದೇ ಉದ್ದೇಶ ಅರ್ಜಿದಾರರಿಗೆ ಇರಲಿಲ್ಲ. ಐಪಿಸಿ ಸೆಕ್ಷನ್ 304ರ ಅಡಿ ಉದ್ದೇಶದ ಅಂಶ ಇರಬೇಕಾಗುತ್ತದೆ. ಅಪಾರ್ಟ್‌ಮೆಂಟ್ ಒಳಗೆ ನಿರ್ಮಿಸುವ ಈಜುಕೊಳದಲ್ಲಿ ಯಾವುದೇ ಅಪಾರ್ಟ್‌ಮೆಂಟ್‌ನಲ್ಲಿ ಜೀವರಕ್ಷರು ಇಲ್ಲ” ಎಂದಿದ್ದರು.
ಪ್ರಕರಣದ ಹಿನ್ನೆಲೆ: 2023ರ ಡಿಸೆಂಬರ್‌ನಲ್ಲಿ ಪ್ರೆಸ್ಟೀಜ್ ಲೇಕ್‌ಸೈಡ್ ಹ್ಯಾಬಿಟೇಟ್ ಅಪಾರ್ಟ್‌ಮೆಂಟ್‌ನಲ್ಲಿ ನಿರ್ಮಿಸಿರುವ ಅಲಂಕೃತ ಈಜುಕೊಳಕ್ಕೆ ಆಟವಾಡುವಾಗ ಅಲ್ಲಿನ ನಿವಾಸಿಯ ಒಂಭತ್ತು ವರ್ಷದ ಬಾಲಕಿ ಆಯತಪ್ಪಿ ಬಿದ್ದಿದ್ದು, ವಿದ್ಯುತ್ ಸ್ಪರ್ಶದಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಳು.
ಈ ಸಂಬಂಧ ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಅಪಾರ್ಟ್‌ಮೆಂಟ್‌ನ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ದೇಬಾಶಿಶ್ ಸಿನ್ಹಾ, ಎಸ್ ಟಿ ಸುರೇಶ್ ಬಾಬು, ಸಂತೋಷ್ ಮಹರಾಣ, ಗೋಬಿಂದ ಮಂಡಲ್, ಬಿಕಾಸ್‌ಕುಮಾರ್ ಪರೀಧ್ ಮತ್ತು ಭಕ್ತ ಚರಣ್ ಪ್ರಧಾನ್ ವಿರುದ್ಧ ವರ್ತೂರು ಪೊಲೀಸರು ಉದ್ದೇಶಪೂರ್ವಕ ಕೊಲೆ ಆರೋಪದ ಅಡಿ ಪ್ರಕರಣ ದಾಖಲಿಸಿದ್ದರು. ಇದನ್ನು ರದ್ದುಪಡಿಸುವಂತೆ ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ನಿರ್ಲಕ್ಷ್ಯದಿಂದ ಒಂಭತ್ತು ವರ್ಷದ ಬಾಲಕಿಯ ಸಾವಿಗೆ ಕಾರಣರಾಗಿರುವ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್ 304ಎ ಅಡಿ ತನಿಖೆ ಮತ್ತು ವಿಚಾರಣೆ ನಡೆಯಬೇಕು ಎಂದು ನ್ಯಾಯಾಲಯ ಹೇಳಿದ್ದು, ಐಪಿಸಿ ಸೆಕ್ಷನ್ 304 (ಉದ್ದೇಶಪೂರ್ವಕ ಕೊಲೆ) ಅಡಿ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಿದೆ.