ಆಟೋರಿಕ್ಷಾ ಸೇವೆಗಳಿಗೆ ಸಾರಿಗೆ ಇಲಾಖೆಯು ನವೆಂಬರ್ 25ರಂದು ದರ ವಿಧಿಸಿ ಅಧಿಸೂಚನೆ ಹೊರಡಿಸಿರುವುದನ್ನು ಪ್ರಶ್ನಿಸಿ ಓಲಾ ಮತ್ತು ಉಬರ್ ಸಂಸ್ಥೆಗಳು ಹೊಸದಾಗಿ ಅರ್ಜಿ ಸಲ್ಲಿಸಿವೆ. ಈ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
ಮೊದಲಿಗೆ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯವು ಮೂಲ ದರದ ಜೊತೆಗೆ ಹೆಚ್ಚುವರಿಯಾಗಿ ಶೇ. 10 ರಷ್ಟು ದರ ಸ್ವೀಕರಿಸಲು ಓಲಾ ಮತ್ತು ಉಬರ್‌ಗೆ ಅನುಮತಿಸಿ ನವೆಂಬರ್ 6ರಂದು ಮಧ್ಯಂತರ ಆದೇಶ ಮಾಡಿತ್ತು. ಈ ಆದೇಶವನ್ನು ವಿಸ್ತರಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಎರಡು ವಾರಗಳ ಕಾಲ ಮಂದೂಡಿದೆ.
ಓಲಾ ಮತ್ತು ಉಬರ್ ಸಂಸ್ಥೆಗಳು ತಾವು ನೀಡುವ ಸೇವೆಗೆ ʼಸೇವಾ ಶುಲ್ಕʼ ವಿಧಿಸಲು ಅರ್ಹತೆ ಕಲ್ಪಿಸಲು ನಿರ್ದೇಶಿಸಿ ಸಾರಿಗೆ ಇಲಾಖೆಗೆ ರಾಜ್ಯ ಸರ್ಕಾರವು ನವೆಂಬರ್ 25ರಂದು ಅಧಿಸೂಚನೆ ಪ್ರಕಟಿಸಿತ್ತು. ಸೂಕ್ತ ಪರವಾನಗಿ ಹೊಂದಿದ ಅಗ್ರಿಗೇಟರ್ಗಳು ಆಟೋರಿಕ್ಷಾ ಸೇವೆಗೆ ಶೇ. 5ರಷ್ಟು ದರ ವಿಧಿಸಬಹುದು ಎಂದು ತಿಳಿಸಲಾಗಿತ್ತು.
ಸವಾರರಿಂದ ವಸೂಲಿ ಮಾಡಿದ ಮೊತ್ತದ ಶೇ. 20ರಷ್ಟನ್ನು ಸೇವಾ ಶುಲ್ಕ ರೂಪದಲ್ಲಿ ವಿಧಿಸಲು ಕೇಂದ್ರ ಸರ್ಕಾರವು ಮಾರ್ಗಸೂಚಿಯಲ್ಲಿ ತಿಳಿಸಿದೆ. ದರ ಪಟ್ಟಿಯ ವ್ಯಾಪ್ತಿಗೆ ಸೇವಾ ಶುಲ್ಕ ದರ ಬರುವುದಿಲ್ಲ. ಹೀಗಾಗಿ, ಹಾಲಿ ನಿಯಮಗಳ ಅಡಿ ದರ ವಿಧಿಸುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಮೂಲ ದರದ ಶೇ. 10ರಷ್ಟು ದರ ಹೆಚ್ಚಳ ಮಾಡಿದರೂ ಓಲಾ ಮತ್ತು ಉಬರ್‌ಗೆ ನಷ್ಟವಾಗಲಿದೆ ಎಂದು ಅರ್ಜಿದಾರರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಸಲಹೆಗಳು ಮಾತ್ರವಾಗಿದ್ದು, ನಿಯಮ ರೂಪಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ರಾಜ್ಯ ಮಾರ್ಗಸೂಚಿಗಳ ಪ್ರಕಾರ ಮತ್ತು ಸಾರ್ವಜನಿಕ ಹಿತಾಸಕ್ತಿಯಲ್ಲಿ ದರವನ್ನು ನಿಗದಿಪಡಿಸಲಾಗಿದೆ ಎಂದು ರಾಜ್ಯವು ನ್ಯಾಯಾಲಯಕ್ಕೆ ತಿಳಿಸಿದೆ. ಸಾರ್ವಜನಿಕ ಹಿತಾಸಕ್ತಿ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿಯ ಪ್ರಕಾರ ದರ ನಿಗದಿಪಡಿಸಲಾಗಿದೆ ಎಂದು ರಾಜ್ಯ ಸರ್ಕಾರ ವಾದಿಸಿದೆ.