
“ವಾರಂಟಿ ಅವಧಿಯಿದ್ದರೂ ಸ್ಕೂಟರ್ ಸರ್ವೀಸ್‌ಗೆ ವಕೀಲರಿಂದಲೇ ಸೇವಾ ಶುಲ್ಕ ಪಡೆದಿರುವ ಓಲಾದ ಮುಂದೆ ಜನಸಾಮಾನ್ಯರ ಪರಿಸ್ಥಿತಿ ಹೇಗಿರುತ್ತದೆ ಎಂದು ಊಹಿಸಿಕೊಳ್ಳಲಾಗದು” ಎಂದು ಬೇಸರ ವ್ಯಕ್ತಪಡಿಸಿರುವ ಬೆಂಗಳೂರಿನ ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಸೇವಾ ಶುಲ್ಕವನ್ನು ಬಡ್ಡಿಯೊಂದಿಗೆ ಮರಳಿಸುವಂತೆ ಈಚೆಗೆ ಓಲಾ ಸಂಸ್ಥೆಗೆ ಕಟ್ಟುನಿಟ್ಟಿನ ಆದೇಶ ಮಾಡಿದೆ.
ಬೆಂಗಳೂರಿನ ವಕೀಲ ಇ ಎ ಅಶ್ವಿನ್ ದತ್ತ ಸಲ್ಲಿಸಿದ್ದ ಅರ್ಜಿಯನ್ನು ಆಯೋಗದ ಸದಸ್ಯರಾದ ರೇಣುಕಾದೇವಿ ದೇಶಪಾಂಡೆ ಮತ್ತು ಸುಮಾ ಅನಿಲ್ ಕುಮಾರ್ ಅವರ ಪೀಠವು ಭಾಗಶಃ ಪುರಸ್ಕರಿಸಿದೆ.
ಓಲಾ ಬೈಕ್ ರಿಪೇರಿಗೆ ವಾರಂಟಿ ಇರುವ ಅವಧಿಯಲ್ಲೂ ಶುಲ್ಕ ವಿಧಿಸಿದ್ದ ಓಲಾ ಎಲೆಕ್ಟ್ರಿಕಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ದೂರುದಾರಿಗೆ ₹1,635 ಸ್ವೀಕರಿಸಿದ ದಿನದಿಂದ 45 ದಿನಗಳ ಒಳಗೆ ವಾರ್ಷಿಕ ಶೇ.6ರ ಬಡ್ಡಿ ಸೇರಿಸಿ ಮರಳಿಸಬೇಕು. ಗಡುವು ತಪ್ಪಿದ್ದಲ್ಲಿ ವಾರ್ಷಿಕ ಶೇ.8ರ ಬಡ್ಡಿ ಸೇರಿ ಅಸಲು ಮರುಪಾವತಿಸಬೇಕು. ದೂರುದಾರ ಅಶ್ವಿನ್ ದತ್ತಗೆ ನೀಡಿರುವ ಮಾನಸಿಕ ಹಿಂಸೆಗೆ ₹20 ಸಾವಿರ, ನ್ಯಾಯಾಲಯದ ಖರ್ಚಿನ ಬಾಬ್ತು ₹5 ಸಾವಿರಗಳನ್ನು ಪ್ರತ್ಯೇಕವಾಗಿ ಪಾವತಿಸಬೇಕು ಎಂದು ಆಯೋಗ ನಿರ್ದೇಶಿಸಿದೆ.
“ಓಲಾ ದೊಡ್ಡ ಕಂಪನಿಯಾಗಿದ್ದರೂ ವಾರಂಟಿ ಅವಧಿಯಲ್ಲಿ ಉಚಿತವಾಗಿ ರಿಪೇರಿ ಮಾಡಿಕೊಡದೇ, ದೂರುದಾರ ವಕೀಲರೂ ಎಂದು ತಿಳಿದಿದ್ದರೂ ಈ ಕೆಲಸ ಮಾಡಲಾಗಿದೆ. ಸಣ್ಣಪುಟ್ಟ ದೋಷಗಳಿಂದ ಸಣ್ಣ ಮೊತ್ತಕ್ಕೆ ಗ್ರಾಹಕರು ಆಯೋಗದ ಕದತಟ್ಟುವ ಸನ್ನಿವೇಶ ಉಂಟು ಮಾಡುವ ಮೂಲಕ ಅನುಚಿತ ವ್ಯಾಪಾರ ನೀತಿ ಪುನರಾವರ್ತಿಸಬಾರದು” ಎಂದು ಓಲಾಗೆ ಆಯೋಗ ಆದೇಶಿಸಿದೆ.
“ಓಲಾ ಬೈಕ್‌ಗಳಿಗೆ ಸಂಬಂಧಿಸಿದಂತೆ ಈ ಹಿಂದೆ ತುಂಬಾ ದೂರುಗಳು ಬಂದಿವೆ. ಓಲಾ ಸಣ್ಣ ಸಮಸ್ಯೆಗಳಿಗೆ ಸ್ಪಂದಿಸದೇ ಗ್ರಾಹಕರಿಗೆ ತೊಂದರೆ ನೀಡಿರುವುದನ್ನು ಪುನರಾವರ್ತಿಸಬಾರದು” ಎಂದು ಎಚ್ಚರಿಸಿದೆ.
“ದೂರುದಾರ ಸ್ವತಃ ನ್ಯಾಯವಾದಿಯಾಗಿದ್ದು ಸಹ, ವಾರಂಟಿ ಅವಧಿಯಲ್ಲಿ ರಿಪೇರಿ ಹಣ ಪಾವತಿಸಿ ಸ್ಕೂಟರ್ ಹಿಂಪಡೆಯುವ ಸ್ಥಿತಿ ಗಂಭೀರವಾಗಿದೆ. ಹೀಗಿರುವಾಗ, ಜನಸಾಮಾನ್ಯರ ಪರಿಸ್ಥಿತಿ ಹೇಗಿರುತ್ತದೆ ಎಂದು ಊಹಿಸಿಕೊಳ್ಳಲು ಆಗುವುದಿಲ್ಲ” ಎಂದು ಆಯೋಗ ಹೇಳಿದೆ.
ಪ್ರಕರಣದ ಹಿನ್ನೆಲೆ: ದೂರುದಾರ ಅಶ್ವಿನ್ ಅವರು 10.06.2024ರಂದು ಓಲಾ ಎಸ್1ಎಕ್ಸ್ ಸ್ಕೂಟರ್ ಖರೀದಿಸಿದ್ದು, ಜೂನ್ 14ರಂದು ಸ್ಕೂಟರ್ ಪಡೆದಿದ್ದರು. ಸ್ಕೂಟರ್ ಪಡೆದ ದಿನದಿಂದ ಮೂರು ವರ್ಷಗಳ ಕಾಲ ವಾರಂಟಿ ಇರಲಿದೆ ಎಂದು ಹೇಳಲಾಗಿತ್ತು. ಬ್ರೇಕ್, ಆಯಿಲ್ ಮತ್ತು ಬಣ್ಣ ಇತ್ಯಾದಿ ಹೊರತುಪಡಿಸಿ ಉಳಿದೆಲ್ಲಾ ಭಾಗಗಳಿಗೆ ವಾರಂಟಿ ಅನ್ವಯಿಸಲಿದೆ ಎಂದೂ ತಿಳಿಸಲಾಗಿತ್ತು.
ಈ ಮಧ್ಯೆ, ಸ್ಕೂಟರ್ ಖರೀದಿಸಿದ ಒಂದು ವರ್ಷ ತುಂಬುವುದರೊಳಗೇ ಹಿಂದಿನ ಚಕ್ರದ ರಿಮ್ ಬಾಗಿದ್ದು, ಗಾಳಿ ಸೋರಿಕೆಯಾಗಿ ಟಯರ್ ಚಪ್ಪಟೆಯಾಗಿತ್ತು. ಮುಂಭಾಗದ ಎಡ ಬ್ರೇಕ್ ಸಹ ಕಾರ್ಯನಿರ್ವಹಿಸುತ್ತಿಲ್ಲ. ಇದಕ್ಕೆ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಬಳಕೆ ಮಾಡಿರುವುದೇ ಕಾರಣ ಎಂದು 2025ರ ಮಾರ್ಚ್ 13ರಂದು ಸರ್ವೀಸ್ ಸೆಂಟರ್‌ಗೆ ರಿಪೇರಿಗಾಗಿ ಅಶ್ವಿನ್ ಸ್ಕೂಟರ್ ಬಿಟ್ಟಿದ್ದರು.
ಮಾರ್ಚ್ 14ರಂದು ಓಲಾ ಕಂಪನಿಯ ತಂತ್ರಜ್ಞ ಸಂತೋಷ್ ಎಂಬಾತ ಕರೆ ಮಾಡಿ ಚಕ್ರದ ದುರಸ್ತಿಗಾಗಿ ಅದನ್ನು ಹೊರಗಡೆ ಮೆಕ್ಯಾನಿಕ್‌ಗೆ ನೀಡಲಾಗಿದೆ. ಇದರ ಖರ್ಚನ್ನು ವೈಯಕ್ತಿಕ ಖಾತೆಗೆ ಹಾಕುವಂತೆ ಖಾತೆಯ ನಂಬರ್ ಕಳುಹಿಸಿದ್ದರು. ಇದಕ್ಕೆ ಒಪ್ಪದ ಅಶ್ವಿನ್ ಅವರು ಗ್ರಾಹಕರ ಸೇವಾ ಕೇಂದ್ರಕ್ಕೆ ಇಮೇಲ್ ಕಳುಹಿಸಿದ್ದರು. ಮಾರ್ಚ್ 15 ಕಳೆದರೂ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದ ಅವರು ಸೇವಾ ಕೇಂದ್ರಕ್ಕೆ ತೆರಳಿ ಬೈಕ್ ಪರಿಸ್ಥಿತಿಯನ್ನು ಪರಿಶೀಲಿಸಿದ್ದರು. ಆಗ ಸ್ಕೂಟರ್ ಚಕ್ರವನ್ನು ತೆಗೆಯಲಾಗಿತ್ತು. ಇದನ್ನು ಮಾರ್ಚ್ 17ರಂದು ಮತ್ತೆ ಗ್ರಾಹಕರ ಸೇವಾ ಕೇಂದ್ರದ ಗಮನಕ್ಕೆ ತಂದಿದ್ದರು. ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಹಣವನ್ನು ಪಾಪಸ್ ಪಡೆಯುವ ಹಕ್ಕಿಗೆ ಒಳಪಟ್ಟು ಸಂತೋಷ್ ಸೂಚಿಸಿದ ಖಾತೆಗೆ ₹1,400 ಮತ್ತು ಕಾರ್ಮಿಕರ ಖರ್ಚಿನ ಬಾಬ್ತು ₹235 ಪಾವತಿಸಿದ್ದರು. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿದ್ದ ಅಶ್ವಿನ್ ಅವರು ಮಾರ್ಚ್ 20ರಂದು ಓಲಾಗೆ ಲೀಗಲ್ ನೋಟಿಸ್ ಕಳುಹಿಸಿದ್ದರು. ಇದನ್ನು ಸ್ವೀಕರಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಅಲ್ಲದೇ, ಆಯೋಗಕ್ಕೆ ಬಂದು ಆರೋಪವನ್ನು ಸಹ ಓಲಾ ಅಲ್ಲಗಳೆದಿರಲಿಲ್ಲ.