ಓಲಾ ಉದ್ಯೋಗಿ ಆತ್ಮಹತ್ಯೆ ಪ್ರಕರಣ: ಡೆತ್‌ ನೋಟ್‌ ನಿಜವಲ್ಲ ಎಂದ ಭಾವಿಶ್ ಪರ ವಕೀಲರು

“ಡೆತ್‌ ನೋಟ್‌ಗಳೆಲ್ಲಾ ಸತ್ಯವಾಗಿರುವುದಿಲ್ಲ. ಈ ಪ್ರಕರಣದಲ್ಲಿ ಡೆತ್ ನೋಟ್‌ನ ನಿರೂಪಕ ಮೃತ ಕೆ ಅರವಿಂದ್ ಅವರ ಸಹೋದರ ಅಶ್ವಿನ್ ಕಣ್ಣನ್ ಎಂಬ ಬಗ್ಗೆ ಬಲವಾದ ಸಂದೇಹವಿದೆ” ಎಂದು ವಾದಿಸಿದ ಹಿರಿಯ ವಕೀಲ ಶ್ಯಾಮ್‌ಸುಂದರ್.
OLA Electric
OLA Electric
Published on

ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮೃತ ಉದ್ಯೋಗಿ ಕೆ ಅರವಿಂದ್ ಬಿಟ್ಟು ಹೋಗಿದ್ದಾರೆ ಎನ್ನಲಾದ ಆತ್ಮಹತ್ಯೆ ಪತ್ರದ ಅಸಲಿತನದ ಬಗ್ಗೆ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಭಾವಿಶ್‌ ಅಗರವಾಲ್‌ ಪರ ವಕೀಲರು ಗಂಭೀರ ಸಂದೇಹ ವ್ಯಕ್ತ ಪಡಿಸಿದ್ದಾರೆ.

ಇದೇ ವೇಳೆ ಕಂಪನಿಯ ವಾದಕ್ಕೆ ತಿರುಗೇಟು ನೀಡಿರುವ ಮೃತನ ಪರ ವಕೀಲರು, “ಓಲಾ ಕಂಪನಿ, ಈಸ್ಟ್‌ ಇಂಡಿಯಾ ಕಂಪನಿಗಿಂತಲೂ ಕೆಟ್ಟದಾದ ವರ್ತನೆ ತೋರುತ್ತಿದೆ” ಎಂದು ಆಪಾದಿಸಿದ್ದಾರೆ.

ಅರವಿಂದ್ ಸಾವಿನ ಆರೋಪದಡಿ ನಮ್ಮ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್‌ ಮತ್ತು ಈ ಸಂಬಂಧ ವಿಚಾರಣಾಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ನ್ಯಾಯಿಕ ವಿಚಾರಣೆ ರದ್ದುಗೊಳಿಸಬೇಕು ಎಂದು ಕೋರಿ ಕಂಪನಿಯ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಸುಬ್ರತ್ ಕುಮಾರ್ ದಾಸ್‌, ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಭಾವಿಶ್‌ ಅಗರವಾಲ್‌ ಮತ್ತು ಓಲಾ ಕಂಪನಿಯು ಕರ್ನಾಟಕ ಹೈಕೋರ್ಟ್‌ನಲ್ಲಿ ದಾಖಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರ ಏಕಸದಸ್ಯ ಪೀಠ ಬುಧವಾರ ವಿಚಾರಣೆ ನಡೆಸಿತು. 

Justice Mohammad Nawaz
Justice Mohammad Nawaz

ಓಲಾ ಕಂಪನಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಎಸ್‌ ಶ್ಯಾಮಸುಂದರ್‌ ಅವರು “ಡೆತ್‌ ನೋಟ್‌ಗಳೆಲ್ಲಾ ಸತ್ಯವಾಗಿರುವುದಿಲ್ಲ. ಈ ಪ್ರಕರಣದಲ್ಲಿ ಡೆತ್ ನೋಟ್‌ನ ನಿರೂಪಕ ಮೃತ ಕೆ ಅರವಿಂದ್ ಅವರ ಸಹೋದರ ಅಶ್ವಿನ್ ಕಣ್ಣನ್ ಎಂಬ ಬಗ್ಗೆ ನನಗೆ ಬಲವಾದ ಸಂದೇಹವಿದೆ” ಎಂದರು.

ಇದನ್ನು ತೀವ್ರವಾಗಿ ಆಕ್ಷೇಪಿಸಿದ ಅಶ್ವಿನ್‌ ಕಣ್ಣನ್ ಪರ ವಕೀಲ ಪಿ ಪ್ರಸನ್ನ ಕುಮಾರ್ ಅವರು “ಅರ್ಜಿದಾರರ ಪರ ವಕೀಲರು ಇಂತಹ ಮಾತುಗಳನ್ನು ಆಡುತ್ತಿರುವುದಕ್ಕೆ ನನಗೆ ತುಂಬಾ ವಿಷಾದವಿದೆ. ಹಿರಿಯ ವಕೀಲರಾಗಿ ಅವರು ಈ ರೀತಿ ವಾದ ಮಂಡಿಸಬಾರದು. ಓಲಾ ಕಂಪನಿ, ಈಸ್ಟ್ ಇಂಡಿಯಾ ಕಂಪನಿಗಿಂತಲೂ ಕೆಟ್ಟದಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಆರೋಪಿ ಪರ ವಕೀಲರು ಇಂತಹ ಆರೋಪಗಳನ್ನು ಮಾಡುತ್ತಿರುವುದು ವಿಷಾದನೀಯ. ಡೆತ್ ನೋಟ್ ಬರೆದವರು ಯಾರು ಎಂಬುದನ್ನು ಪೊಲೀಸರು ತನಿಖೆ ಮಾಡಬೇಕು” ಎಂದರು.

ಇದಕ್ಕೆ ಶ್ಯಾಮಸುಂದರ್ ಅವರು “ದೂರುದಾರರು ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ ಸಂದರ್ಶನಗಳು ಮತ್ತು ಛಾಯಾಚಿತ್ರಗಳಿಂದಾಗಿ ಕಂಪನಿಯ ಷೇರು ಬೆಲೆಗಳು ಕುಸಿಯುತ್ತಿವೆ” ಎಂದು ಆರೋಪಿಸಿದರು.

ಪ್ರಾಸಿಕ್ಯೂಷನ್‌ ಪರ ಹಾಜರಾಗಿದ್ದ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ ಎನ್‌ ಜಗದೀಶ್‌ ಅವರು “ವಿಚಾರಣೆಗೆ ಹಾಜರಾಗುವಂತೆ ಮತ್ತು ತನಿಖೆಗೆ ಸಹಕರಿಸುವಂತೆ ನೀಡಲಾಗಿರುವ ನೋಟಿಸ್‌ಗಳಿಗೆ ಪ್ರತಿಯಾಗಿ, ಅರ್ಜಿದಾರರು ಖುದ್ದು ಹಾಜರಾಗುವ ಬದಲು ಪತ್ರಗಳನ್ನು ಕಳುಹಿಸುತ್ತಿದ್ದಾರೆ” ಎಂದು ದೂರಿದರು.

Also Read
ಓಲಾ ಎಲೆಕ್ಟ್ರಿಕಲ್‌ ಮುಖ್ಯಸ್ಥ ಭಾವಿಶ್‌ ಅಗರ್ವಾಲ್‌ಗೆ ತನಿಖೆ ನೆಪದಲ್ಲಿ ಕಿರುಕುಳ ನೀಡದಂತೆ ಹೈಕೋರ್ಟ್‌ ನಿರ್ದೇಶನ

ವಾದ–ಪ್ರತಿವಾದ ಆಲಿಸಿದ ಪೀಠವು ಅರ್ಜಿದಾರರ ವಿರುದ್ಧ ಯಾವುದೇ ಆತುರದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ನೀಡಿರುವ ಈ ಹಿಂದಿನ ನಿರ್ದೇಶನವನ್ನು ಮುಂದುವರಿಸಲು ಆದೇಶಿಸಿ, ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ:  ಕೆಲಸದ ಸ್ಥಳದಲ್ಲಿ ಕಿರುಕುಳ ನೀಡಲಾಗುತ್ತಿದೆ, ಸಂಬಳ ಬಾಕಿ ಉಳಿಸಿಕೊಳ್ಳಲಾಗಿದೆ ಹಾಗೂ ಕಂಪನಿ ಮಾಲೀಕರು ಸವಲತ್ತುಗಳನ್ನು ನಿರಾಕರಿಸಿದ್ದಾರೆ ಎಂದು ಆರೋಪಿಸಿ ಕೆ ಅರವಿಂದ್‌ ಪತ್ರ ಬರೆದಿಟ್ಟು 2025ರ ಸೆಪ್ಟೆಂಬರ್ 28ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಕೆ ಅರವಿಂದ್ ಅವರ ಸಹೋದರ ಅಶ್ವಿನ್‌ ನೀಡಿರುವ ದೂರಿನ ಮೇರೆಗೆ, ಭಾರತೀಯ ನ್ಯಾಯ ಸಂಹಿತೆ–2023ರ (ಬಿಎನ್‌ಎಸ್‌) ಸೆಕ್ಷನ್‌ 108 ಹಾಗೂ 3(5)ರ ಅಡಿ ಅರ್ಜಿದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Kannada Bar & Bench
kannada.barandbench.com