ಸಿಸಿಬಿ ತನಿಖೆಗೆ ಓಲಾ ಎಂಜಿನಿಯರ್‌ ಆತ್ಯಹತ್ಯೆ ಪ್ರಕರಣ; ಎಫ್‌ಎಸ್‌ಎಲ್‌ ವರದಿ ನಿರೀಕ್ಷಿಸುತ್ತಿರುವ ಸರ್ಕಾರ

“ಎಫ್‌ಎಸ್‌ಎಲ್‌ ವರದಿ ನಿರೀಕ್ಷಿಸಲಾಗಿದೆ. ಅರ್ಜಿದಾರರಿಗೆ ಕಿರುಕುಳ ನೀಡದಂತೆ ಈ ಹಿಂದೆ ನ್ಯಾಯಾಲಯವು ಸಂಬಂಧ ಪೊಲೀಸರಿಗೆ ನೀಡಿರುವ ನಿರ್ದೇಶನವು ಮುಂದುವರಿಯಲಿದ್ದು, ಅರ್ಜಿದಾರರು ತನಖೆಗೆ ಸಹಕರಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.
OLA Electric
OLA Electric
Published on

ಓಲಾ ಎಂಜಿನಿಯರ್‌ ಆತ್ಯಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರುವುದಕ್ಕೆ ತಿಂಗಳಾಗುತ್ತದೆ ಎಂದಿರುವ ರಾಜ್ಯ ಸರ್ಕಾರವು ತನಿಖೆಯನ್ನು ಕೇಂದ್ರ ಅಪರಾಧ ವಿಭಾಗಕ್ಕೆ (ಸಿಸಿಬಿಗೆ) ವರ್ಗಾಯಿಸಲಾಗಿದೆ ಎಂದು ಶುಕ್ರವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಉದ್ಯೋಗಿಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದತಿ ಕೋರಿ ಓಲಾ ಎಲೆಕ್ಟ್ರಿಕ್‌ ಕಂಪೆನಿಯ ಮಾಲೀಕ ಭಾವಿಶ್‌ ಅಗರ್ವಾಲ್‌ ಸೇರಿ ಮೂವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರ ಏಕಸದಸ್ಯ ಪೀಠ ನಡೆಸಿತು.

ರಾಜ್ಯ ಸರ್ಕಾರದ ಪರ ವಕೀಲರು “ಕೈಬರಹ ಮತ್ತು ಫಿಂಗರ್‌ ಪ್ರಿಂಟ್‌ಗೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಇನ್ನೂ ಬಂದಿಲ್ಲ. ಮೊದಲಿಗೆ ಕೈಬರಹವನ್ನು ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಆನಂತರ ಫಿಂಗರ್‌ ಪ್ರಿಂಟ್‌ ಅನ್ನು ಎಫ್‌ಎಸ್‌ಎಲ್‌ಗೆ ಕಳುಹಿಸುವುದು ಪ್ರಕ್ರಿಯೆ. ಇದಕ್ಕೆ ಒಂದು ತಿಂಗಳು ಕಾಲಾವಕಾಶ ಬೇಕಿದೆ. ಈಗ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ. ಹೀಗಾಗಿ, ವಿಚಾರಣೆ ಮುಂದೂಡಬೇಕು” ಎಂದು ಕೋರಿದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಎಸ್‌ ಶ್ಯಾಮ್‌ಸುಂದರ್‌ ಅವರು “ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿರುವುದರಿಂದ ಅರ್ಜಿದಾರರಿಗೆ ಕಿರುಕುಳ ನೀಡಬಾರದು ಎಂದು ಈ ಹಿಂದೆ ಮಾಡಿರುವ ಮಧ್ಯಂತರ ಆದೇಶ ವಿಸ್ತರಿಸಬೇಕು” ಎಂದು ಕೋರಿದರು.

ಇದನ್ನು ಆಲಿಸಿದ ಪೀಠವು “ಎಫ್‌ಎಸ್‌ಎಲ್‌ ವರದಿ ನಿರೀಕ್ಷಿಸಲಾಗಿದೆ. ಅರ್ಜಿದಾರರಿಗೆ ಕಿರುಕುಳ ನೀಡದಂತೆ ಈ ಹಿಂದೆ ನ್ಯಾಯಾಲಯವು ಪ್ರಕರಣದ ಸಂಬಂಧ ಪೊಲೀಸರಿಗೆ ನೀಡಿರುವ ನಿರ್ದೇಶನವು ಮುಂದುವರಿಯಲಿದ್ದು, ಅರ್ಜಿದಾರರು ತನಿಖೆಗೆ ಸಹಕರಿಸಬೇಕು” ಎಂದು ಆದೇಶಿಸಿ, ವಿಚಾರಣೆಯನ್ನು ಜನವರಿ 21ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ಅರವಿಂದ್‌ ಸಹೋದರ ಅಶ್ವಿನ್‌ ಕಣ್ಣನ್‌ ಅವರು ದಾಖಲಿಸಿರುವ ದೂರಿನಲ್ಲಿ, ಓಲಾ ಎಲೆಕ್ಟ್ರಿಕ್‌ ಕಂಪನಿಯ ಹೋಮೋಲೋಗೇಷನ್‌ ಎಂಜಿಯರ್‌ ಆಗಿದ್ದ ಸಹೋದರ ಕೆ ಅರವಿಂದ್‌ ಅವರು 2025ರ ಸೆಪ್ಟೆಂಬರ್‌ 28ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಸೆಪ್ಟೆಂಬರ್‌ 30ರಂದು ಕಂಪನಿಯು 17,46,313 ರೂಪಾಯಿಯನ್ನು ಅರವಿಂದ್‌ ಅವರ ಖಾತೆಗೆ ನೆಫ್ಟ್‌ ಮಾಡಿದೆ. ಈ ಕುರಿತು ಅಕ್ಟೋಬರ್‌ 1ರಂದು ಕಂಪನಿಯ ಹೋಮೋಲೋಗೇಷನ್‌ ವಿಭಾಗದ ಮುಖ್ಯಸ್ಥರಾದ ಸುಬ್ರತ್‌ ಕುಮಾರ್‌ ದಾಸ್‌ ಅವರನ್ನು ವಿಚಾರಿಸಲಾಗಿ, ಇದಕ್ಕೆ ಕಂಪನಿಯ ಮಾನವ ಸಂಪನ್ಮೂಲದವರು ಪ್ರತಿಕ್ರಿಯಿಸಿದ್ದರು. ಆನಂತರ ಕಂಪನಿಯ ಪ್ರತಿನಿಧಿಗಳಾದ ಕೃತೇಶ್‌ ದೇಸಾಯಿ, ಪರಮೇಶ್‌ ಮತ್ತು ರೋಷನ್‌ ಅವರು ಹಣಕಾಸಿನ ಬಗ್ಗೆ ಅಸ್ಪಷ್ಟವಾಗಿ ಮಾಹಿತಿ ನೀಡಿದ್ದು, ಕಂಪನಿಯ ತಪ್ಪುಗಳನ್ನು ಮರೆಮಾಚುವ ಪ್ರಯತ್ನದಂತೆ ಕಂಡು ಬಂದಿರುವುದು ಅನುಮಾನಾಸ್ಪದವಾಗಿದೆ ಎಂದಿದ್ದಾರೆ.

Also Read
ಭಾವಿಶ್‌ ವಿರುದ್ಧದ ಪ್ರಕರಣ: ಎಫ್‌ಎಸ್‌ಎಲ್‌ ವರದಿ ಆಧರಿಸಿ ತನಿಖೆ ಮುಂದುವರಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಡೆತ್‌ ನೋಟ್‌ನಲ್ಲಿ ಅರವಿಂದ್‌ ಅವರು ಸುಬ್ರತ್‌ ದಾಸ್‌ ಮತ್ತು ಭಾವಿಶ್‌ ಅಗರ್ವಾಲ್‌ ಕೆಲಸದಲ್ಲಿ ಒತ್ತಡ ಹೇರಿದ್ದು, ತನಗೆ ನೀಡಬೇಕಾದ ವೇತನ ಮತ್ತು ಭತ್ಯೆ ನೀಡದೇ ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅಕ್ಟೋಬರ್‌ 6ರಂದು ಅರವಿಂದ್‌ ಸಹೋದರ ಅಶ್ವಿನ್‌ ಕಣ್ಣನ್‌ ದೂರಿನಲ್ಲಿ ವಿವರಿಸಿದ್ದಾರೆ.

ಇದರ ಅನ್ವಯ ಸುಬ್ರತ್‌ ಕುಮಾರ್‌ ದಾಸ್‌, ಭಾವಿಶ್‌ ಅಗರ್ವಾಲ್‌ ಮತ್ತು ಓಲಾ ಎಲೆಕ್ಟ್ರಿಕ್‌ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 108 ಜೊತೆಗೆ 3(5)ರ ಅಡಿ ಪ್ರಕರಣ ದಾಖಲಿಸಲಾಗಿದೆ.

Kannada Bar & Bench
kannada.barandbench.com