ಓಲಾ, ಉಬರ್ ಆಟೋರಿಕ್ಷಾ ಸೇವೆ ಸ್ಥಗಿತ: ಸೌಹಾರ್ದವಾಗಿ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ 4 ವಾರ ಸಮಯ ನೀಡಿದ ಹೈಕೋರ್ಟ್‌

ಆ್ಯಪ್‌ ಮೂಲಕ ಓಲಾ ಮತ್ತು ಉಬರ್‌ ಆಟೋರಿಕ್ಷಾ ಸೇವೆ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಎಲ್ಲರ ಜೊತೆ ಸಮಾಲೋಚನಾ ಸಭೆ ನಡೆಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ರಾಜ್ಯ ಸರ್ಕಾರ.
Ola, Uber and Karnataka HC
Ola, Uber and Karnataka HC

ಓಲಾ ಮತ್ತು ಉಬರ್‌ ತಮ್ಮ ಆ್ಯಪ್‌ ಮೂಲಕ ಆಟೋರಿಕ್ಷಾ ಸೇವೆ ನೀಡುವುದಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲು ನಾಲ್ಕು ವಾರ ಕಾಲಾವಕಾಶ ನೀಡಬೇಕು ಎಂಬ ರಾಜ್ಯ ಸರ್ಕಾರದ ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ಪುರಸ್ಕರಿಸಿತು.

ಓಲಾ ಮತ್ತು ಉಬರ್‌ ಇನ್ನು ಮುಂದೆ ತಮ್ಮ ಆ್ಯಪ್‌ ಮೂಲಕ ಆಟೋರಿಕ್ಷಾ ಸೇವೆ ನೀಡುವಂತಿಲ್ಲ. ತಕ್ಷಣ ಈ ಸೇವೆ ಸ್ಥಗಿತಗೊಳಿಸಬೇಕು ಎಂದು ರಾಜ್ಯ ಸರ್ಕಾರ ಈಚೆಗೆ ನಿರ್ದೇಶಿಸಿರುವ ಆಕ್ಷೇಪಾರ್ಹ ಆದೇಶ ವಜಾ ಮಾಡುವಂತೆ ಕೋರಿ ಎಎನ್‌ಐ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌, ಉಬರ್‌ ಇಂಡಿಯಾ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ರೊಪ್ಪೆನ್‌ ಟ್ರಾನ್ಸ್‌ಪೊರ್ಟೇಷನ್‌ ಸರ್ವೀಸಸ್‌ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

“ಆ್ಯಪ್‌ ಮೂಲಕ ಓಲಾ ಮತ್ತು ಉಬರ್‌ ಆಟೋರಿಕ್ಷಾ ಸೇವೆ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಎಲ್ಲರ ಜೊತೆ ಸಮಾಲೋಚನಾ ಸಭೆ ನಡೆಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರದ ಕೋರಿಕೆಯಂತೆ ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ. ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಸಲ್ಲಿಸಿರುವ ಮಧ್ಯಪ್ರವೇಶ ಮನವಿಗೆ ರಾಜ್ಯ ಸರ್ಕಾವು ಐದು ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು. ಉಳಿದ ಮಧ್ಯಪ್ರವೇಶ ಅರ್ಜಿಗಳಿಗೆ ಪಕ್ಷಕಾರರು ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು. ಮಧ್ಯಪ್ರವೇಶ ಕೋರಿಕೆಗಳನ್ನು ಒಂದು ದಿನ ವಿಚಾರಣೆ ನಡೆಸಿ, ಇತ್ಯರ್ಥಪಡಿಸಲಾಗುವುದು” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿತು.

ಇದಕ್ಕೂ ಮುನ್ನ, ಅರ್ಜಿದಾರರನ್ನು ಪ್ರತಿನಿಧಿಸಿದ್ದ ಸರ್ಕಾರದ ಪರ ವಕೀಲರು “ಸಮಸ್ಯೆ ಇತ್ಯರ್ಥಪಡಿಸಲು ಸಾರಿಗೆ ಆಯುಕ್ತರು ಸಂಬಂಧಿತ ಎಲ್ಲರ ಜೊತೆ ಸಮಾಲೋಚನಾ ಸಭೆ ನಡೆಸಿದ್ದರು. ಆದರೆ, ಒಮ್ಮತದ ನಿಲುವಿಗೆ ಬರಲಾಗಿಲ್ಲ. ನವೆಂಬರ್‌ 14 ಮತ್ತು 15ರಂದು ಸಂಚಾರಿ ಪೊಲೀಸರ ಜೊತೆ ಸಭೆ ಏರ್ಪಡಿಸಲಾಗುತ್ತಿದೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಲಾಗಿದೆ. ಇದಕ್ಕಾಗಿ ನಾಲ್ಕು ವಾರಗಳ ಕಾಲಾವಕಾಶ ನೀಡಬೇಕು” ಎಂದು ಕೋರಿದರು.

ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು “ಆ್ಯಪ್‌ ಮೂಲಕ ಆಟೋರಿಕ್ಷಾ ಸೇವೆ ನೀಡುವುದಕ್ಕೆ ದರ ಹೆಚ್ಚಳ ಪರಿಗಣಿಸಲು ಕೋರಿ ಮಧ್ಯಪ್ರವೇಶ ಅರ್ಜಿ ಸಲ್ಲಿಸಲಾಗಿದೆ. ಅದನ್ನು ಪರಿಗಣಿಸಬೇಕು” ಎಂದು ಮನವಿ ಮಾಡಿದರು.

ಮಧ್ಯಪ್ರವೇಶಕಾರರೊಬ್ಬರ ಪರವಾಗಿ ಹಾಜರಾಗಿದ್ದ ವಕೀಲ ಎನ್‌ ಪಿ ಅಮೃತೇಶ್‌ ಅವರು “ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಸಾರಿಗೆ ಆಯುಕ್ತರು ಸಭೆ ಕರೆದಿದ್ದರು. ಆದರೆ, ಸಭೆಯಲ್ಲಿ ಓಲಾ, ಉಬರ್‌, ರೊಪ್ಪನ್‌ ಸರ್ವೀಸ್‌ ಸೇರಿದಂತೆ ಐವರು ಸಂಬಂಧಿತರು ಮಾತ್ರ ಭಾಗಿಯಾಗಿದ್ದರು. ಬೆಂಗಳೂರು ನಗರದಲ್ಲಿ 16 ಚಾಲಕ ಒಕ್ಕೂಟಗಳಿವೆ. ಸಮಾಲೋಚನಾ ಸಭೆಯಲ್ಲಿ ಸಾರ್ವಜನಿಕರನ್ನೂ ಭಾಗಿದಾರರನ್ನಾಗಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಆದರೆ, ಇದ್ಯಾವುದನ್ನೂ ಮಾಡದೇ ನ್ಯಾಯಾಲಯಕ್ಕೆ ದಾಖಲೆ ತೋರಿಸಲು ಕಣ್ಣೊರೆಸುವ ಪ್ರಯತ್ನವನ್ನು ಸಾರಿಗೆ ಆಯುಕ್ತರು ಮಾಡಿದ್ದಾರೆ” ಎಂದು ಆಕ್ಷೇಪಿಸಿದರು.

ಇದಕ್ಕೆ ಪೀಠವು “ಸಭೆಗೆ ಆಹ್ವಾನಿಸುವ ಕುರಿತು ಸರ್ಕಾರದ ಗಮನಸೆಳೆಯಬೇಕಲ್ಲವೇ. ನಿಮ್ಮ ಮಧ್ಯಪ್ರವೇಶ ಕೋರಿಕೆಯನ್ನೂ ಒಳಗೊಂಡಂತೆ ಎಲ್ಲಾ ಮಧ್ಯಂತರ ಅರ್ಜಿಗಳನ್ನು ಒಂದು ದಿನ ವಿಚಾರಣೆಗೆ ಪರಿಗಣಿಸಲಾಗುವುದು” ಎಂದ ಪೀಠವು ವಿಚಾರಣೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com