ಜಗತ್ತಿನಾದ್ಯಂತ ಸಂಚಲನ ಮೂಡಿಸಿರುವ ಪೆಗಸಸ್ ಬೇಹುಗಾರಿಕಾ ಹಗರಣ ಭಾರತದಲ್ಲಿ ಬಗೆದಷ್ಟೂ ಅಚ್ಚರಿಗಳನ್ನು ಹೊರಗೆಡಹುತ್ತಿದೆ. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರಾಗಿರುವ ಅರುಣ್ ಮಿಶ್ರಾ ಅವರ ಹಳೆಯ ಮೊಬೈಲ್ ಸಂಖ್ಯೆ, ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯ ಅಧಿಕಾರಿಗಳಾದ ಎನ್ ಕೆ ಗಾಂಧಿ ಮತ್ತು ಟಿ ಐ ರಜಪೂತ್, ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಆರೋಪಿಯಾಗಿರುವ ಕ್ರಿಶ್ಚಿಯನ್ ಮಿಷೆಲ್ ಪ್ರತಿನಿಧಿಸಿರುವ ವಕೀಲ ಅಲ್ಜೊ ಜೋಸೆಫ್, ದೇಶಭ್ರಷ್ಟ ಉದ್ಯಮಿ ನೀರವ್ ಮೋದಿ ಪರ ವಕೀಲ ವಿಜಯ್ ಅಗರ್ವಾಲ್ ಅವರ ಮೊಬೈಲ್ ಸಂಖ್ಯೆಗಳನ್ನು ಬೇಹುಗಾರಿಕಾ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ʼದಿ ವೈರ್ʼ ವರದಿ ಮಾಡಿದೆ.
2019ರ ಪೆಗಸಸ್ ಬೇಹುಗಾರಿಕಾ ದತ್ತಾಂಶದಲ್ಲಿ ನಿವೃತ್ತ ನ್ಯಾ. ಅರುಣ್ ಮಿಶ್ರಾ ಅವರ ಹೆಸರಿನಲ್ಲಿ ಈ ಹಿಂದೆ ನೋಂದಣಿಯಾಗಿದ್ದ ರಾಜಸ್ಥಾನದ ಮೊಬೈಲ್ ಸಂಖ್ಯೆಯನ್ನು ಉಲ್ಲೇಖಿಸಲಾಗಿದೆ. ಮೊಬೈಲ್ ಸಂಖ್ಯೆ ಖಾತರಿಪಡಿಸಿಕೊಳ್ಳುವುದರ ಭಾಗವಾಗಿ ʼದಿ ವೈರ್ʼ ಅರುಣ್ ಮಿಶ್ರಾ ಅವರ ಜೊತೆ ಮಾತನಾಡಿದೆ. ಮೊಬೈಲ್ ಸಂಖ್ಯೆ ಮರಳಿಸಿದ ಬಳಿಕವೂ ವಾಟ್ಸಾಪ್ ಅಥವಾ ಇತರೆ ಸಂದೇಶ ರವಾನೆಯ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದೀರಾ ಎಂದು ಮಿಶ್ರಾ ಅವರನ್ನು ಪ್ರಶ್ನಿಸಲಾಗಿತ್ತು. “2013-2014ರಿಂದ +9194XXXXXXX ಮೊಬೈಲ್ ಸಂಖ್ಯೆ ನನ್ನ ಬಳಿ ಇಲ್ಲ. ಈ ನಂಬರ್ ಅನ್ನು ನಾನು ಬಳಸುತ್ತಿಲ್ಲ. 2014ರ ಏಪ್ರಿಲ್ 21ರಲ್ಲಿ ಆ ಮೊಬೈಲ್ ಸಂಖ್ಯೆ ಮರಳಿಸಿದ್ದೇನೆ ” ಎಂದು ಮಿಶ್ರಾ ಸ್ಪಷ್ಟಪಡಿಸಿದ್ದಾರೆ.
ವಕೀಲ ಅಲ್ಜೊ ಜೋಸೆಫ್ ಅವರು “ವಕೀಲರ ಕಾಯಿದೆಯಲ್ಲಿ ಅಟಾರ್ನಿ-ಕಕ್ಷಿದಾರರ ಸಂವಹನಕ್ಕೆ ರಕ್ಷಣೆ ಒದಗಿಸಲಾಗಿದೆ. ಅದೇ ರೀತಿ, ನ್ಯಾಯಾಲಯದ ಅಧಿಕಾರಿಗಳ ಮೇಲೂ ನಿಗಾ ಇಡಲಾಗಿದೆ ಎಂಬ ವರದಿಗಳಿವೆ. ನ್ಯಾಯಾಲಯ ಮಧ್ಯಪ್ರವೇಶಿಸಲು ಇದು ಸರಿಯಾದ ಪ್ರಕರಣವಾಗಿದೆ” ಎಂದು ಬಾರ್ ಅಂಡ್ ಬೆಂಚ್‌ಗೆ ತಿಳಿಸಿದ್ದಾರೆ.