ಓಲೆಕಾರ್ ದೋಷಿ ಪ್ರಕರಣ: "ಬೇರೆಯವರನ್ನು ತಕ್ಷಣವೇ ಅನರ್ಹಗೊಳಿಸಲಾಗುತ್ತದೆ, ಇವರನ್ನೇಕೆ ಮಾಡಿಲ್ಲ?" ಹೈಕೋರ್ಟ್‌ ಪ್ರಶ್ನೆ

ಹಾವೇರಿ ನಗರಸಭೆ ಕಾಮಗಾರಿಯಲ್ಲಿ ನಕಲಿ ಬಿಲ್ ಮೂಲಕ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ಹಣ ನಷ್ಟ ಉಂಟುಮಾಡಿದ ಪ್ರಕರಣದಲ್ಲಿ ತಮ್ಮನ್ನು ದೋಷಿ ಎಂದು ತೀರ್ಮಾನಿಸಿದ ವಿಶೇಷ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಶಾಸಕ ಓಲೆಕಾರ್ ಕೋರಿದ್ದಾರೆ.
BJP MLA Nehru Olekar and Karnataka HC
BJP MLA Nehru Olekar and Karnataka HC
Published on

"ಬೇರೆಯವರನ್ನಾದರೆ ತಕ್ಷಣವೇ ಅನರ್ಹಗೊಳಿಸಲಾಗುತ್ತದೆ, ಇವರನ್ನೇಕೆ ಅನರ್ಹಗೊಳಿಸಿಲ್ಲ?" ಎಂದು ಭ್ರಷ್ಟಾಚಾರ, ಸ್ವಜನಪಕ್ಷಪಾತದ ಪ್ರಕರಣದಲ್ಲಿ ದೋಷಿಯೆಂದು ಪರಿಗಣಿಸಲ್ಪಟ್ಟಿರುವ ಬಿಜೆಪಿಯ ಶಾಸಕ ನೆಹರೂ ಓಲೆಕಾರ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌ ಪ್ರಶ್ನಿಸಿದ ಘಟನೆ ಶುಕ್ರವಾರ ನಡೆಯಿತು.

ಹಾವೇರಿ ನಗರಸಭೆ ಕಾಮಗಾರಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ಹಣ ನಷ್ಟ ಉಂಟುಮಾಡಿದ ಪ್ರಕರಣದಲ್ಲಿ ತಮ್ಮನ್ನು ದೋಷಿಯಾಗಿ ತೀರ್ಮಾನಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಕೋರಿ ಬಿಜೆಪಿ ಶಾಸಕ ನೆಹರೂ ಓಲೆಕಾರ್ ಸಲ್ಲಿಸಿದ್ದ ಅರ್ಜಿ ಕುರಿತ ವಿಚಾರಣೆಯ ಹೈಕೋರ್ಟ್‌ನಲ್ಲಿ ನಡೆಯಿತು.

ಶಾಸಕ ನೆಹರೂ ಓಲೆಕಾರ್ ಸಲ್ಲಿಸಿದ ಮಧ್ಯಂತರ ಅರ್ಜಿ ಸಂಬಂಧ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿತು.

ಓಲೆಕಾರ್ ಪರ ವಕೀಲರು, ಪ್ರಕರಣದಲ್ಲಿ ಅರ್ಜಿದಾರರು ಕ್ರಿಮಿನಲ್ ಒಳಸಂಚು ರೂಪಿಸಿಲ್ಲ. ಅಧೀನ ನ್ಯಾಯಾಲಯದ ಆದೇಶ ದೋಷಪೂರಿತ ಆಗಿದೆ ಎಂದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ ಎಂಬ ಅಭಿಪ್ರಾಯಕ್ಕೆ ಹೈಕೋರ್ಟ್ ಬಂದಿದೆ. ಇದೇ ಕಾರಣಕ್ಕೆ ಅರ್ಜಿದಾರರಿಗೆ ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯ ವಿಧಿಸಿದ ಆದೇಶಕ್ಕೆ ತಡೆ ಸಹ ನೀಡಿದೆ. ಶಿಕ್ಷೆ ವಿಧಿಸಿದ ಆದೇಶವು ದೋಷಪೂರಿತವಾಗಿದೆ ಎಂದಾದರೆ ಅದರ ಪರಿಣಾಮಗಳನ್ನು ಆರೋಪಿ ಎದುರಿಸಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅದರಂತೆ ಪ್ರಕರಣದಲ್ಲಿ ಅರ್ಜಿದಾರರ ಯಾವುದೇ ಪಾತ್ರ ಇಲ್ಲದ ಕಾರಣ ಅವರನ್ನು ದೋಷಿಯಾಗಿ ತೀರ್ಮಾನಿಸಿದ ವಿಶೇಷ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠವು ಅರ್ಜಿದಾರರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆಯೇ ಎಂದು ಪ್ರಶ್ನಿಸಿತು. ಓಲೆಕಾರ್ ಪರ ವಕೀಲರು ಇಲ್ಲ ಎಂದು ಉತ್ತರಿಸಿದಾಗ, "ಏಕೆ ಇನ್ನೂ ಅನರ್ಹಗೊಳಿಸಿಲ್ಲ? ಬೇರೆಯವರನ್ನು ತಕ್ಷಣವೇ ಅನರ್ಹಗೊಳಿಸಲಾಗುತ್ತದೆ?" ಎಂದು ಮರು ಪ್ರಶ್ನಿಸಿತು.

ಓಲೇಕಾರ್ ಪರ ವಕೀಲರು, ಶಾಸಕರನ್ನು ಅನರ್ಹಗೊಳಿಸುವ ವಿಚಾರ ಸ್ಪೀಕರ್ ಅವರ ಅಧಿಕಾರ ವ್ಯಾಪ್ತಿಗೆ ಒಳಪಡುತ್ತದೆ. ಅವರು ವಿವೇಚನೆ ಬಳಸಿ ತಿರ್ಮಾನ ಕೈಗೊಳ್ಳುತ್ತಾರೆ. ಆದರೆ, ದೋಷಿಯಾಗಿ ತೀರ್ಮಾನಿಸಿದ ವಿಶೇಷ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವ ವಿಚಾರಕ್ಕೂ, ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ವಿಚಾರಕ್ಕೂ ಸಂಬಂಧ ಇಲ್ಲ ಎಂದು ಉತ್ತರಿಸಿದರು.

Also Read
ಸ್ವಜನ ಪಕ್ಷಪಾತ ಪ್ರಕರಣ: ದೋಷಿ ಆದೇಶಕ್ಕೆ ತಡೆ ನೀಡಲು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಶಾಸಕ ನೆಹರೂ ಓಲೇಕಾರ್‌

ಅರ್ಜಿದಾರ ಮನವಿಯನ್ನು ಆಕ್ಷೇಪಿಸಿದ ಲೋಕಾಯುಕ್ತ ಪರ ವಕೀಲರು, ಕ್ರಿಮಿನಲ್ ಪ್ರಕರಣದಲ್ಲಿ ಚುನಾಯಿತ ಜನ ಪ್ರತಿನಿಧಿಗಳು ಎರಡು ವರ್ಷ ಕಾಲ ಶಿಕ್ಷೆಗೆ ಗುರಿಯಾದರೆ ಅವರ ಸ್ಥಾನ ತನ್ನಿಂದ ತಾನೇ ಅನರ್ಹವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ಸ್ಪಷ್ಟಪಡಿಸುತ್ತದೆ. ಪ್ರಕರಣದಲ್ಲಿ ಅರ್ಜಿದಾರರು ಕ್ರಿಮಿನಲ್ ಪಿತೂರಿ ನಡೆಸಿರುವ ಸಾಕ್ಷ್ಯಾಧಾರಗಳ ಸಮೇತ ವಿಶೇಷ ನ್ಯಾಯಾಲಯದಲ್ಲಿ ದೃಢಪಟ್ಟಿದೆ. ಆದ ಕಾರಣ ಅವರ ಮನವಿ ಪುರಸ್ಕರಿಸದೆ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದರು. ವಾದ-ಪ್ರತಿವಾದ ಆಲಿಸಿದ ಪೀಠವು ಆದೇಶ ಕಾಯ್ದಿರಿಸಿದೆ.

Kannada Bar & Bench
kannada.barandbench.com