ಕೋವಿಡ್‌ನ ಒಮಿಕ್ರಾನ್ ತಳಿಯ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರಾಖಂಡ ವಿಧಾನಸಭೆ ಚುನಾವಣೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಬುಧವಾರ ಉತ್ತರಾಖಂಡ ಹೈಕೋರ್ಟ್ ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸಂಜಯ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ನಾರಾಯಣ್ ಸಿಂಗ್ ಧನಿಕ್ ಅವರ ನೇತೃತ್ವದ ವಿಭಾಗೀಯ ಪೀಠವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳನ್ನು ಪ್ರತಿನಿಧಿಸಿದ್ದ ವಕೀಲರಿಗೆ ಮನವಿಗೆ ಸಂಬಂಧಿಸಿದಂತೆ ಸೂಚನೆ ಪಡೆಯುವಂತೆ ಆದೇಶಿಸಿದ್ದು, ವಿಚಾರಣೆಯನ್ನು ಜನವರಿ 3ಕ್ಕೆ ಮುಂದೂಡಿತು.
ಮುಂದಿನ ವರ್ಷದ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಉತ್ತರಾಖಂಡ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಆರಂಭಿಸಿವೆ. ಸಾಮಾಜಿಕ ಅಂತರ ಮತ್ತು ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಬೃಹತ್ ಪ್ರಮಾಣದಲ್ಲಿ ಬಿಜೆಪಿ, ಆಪ್ ಮತ್ತು ಕಾಂಗ್ರೆಸ್ ಪಕ್ಷಗಳು ಸಮಾವೇಶ ನಡೆಸಿರುವ ಚಿತ್ರಗಳನ್ನು ಮನವಿಯ ಜೊತೆಗೆ ಅರ್ಜಿದಾರರು ಲಗತ್ತಿಸಿದ್ದಾರೆ.
ಒಮಿಕ್ರಾನ್ ತಳಿಯ ಸೋಂಕು ಹಿಂದಿನ ಎಲ್ಲಾ ತಳಿಯ ಸೋಂಕುಗಳಿಗಿಂತ ವ್ಯಾಪಕವಾಗಿ ಹಬ್ಬುತ್ತಿದ್ದು, ಶೇ 300ರಷ್ಟು ವೇಗವಾಗಿ ಹಬ್ಬುತ್ತಿದೆ. ಹೀಗಾಗಿ, ಬೃಹತ್ ರಾಜಕೀಯ ಸಮಾವೇಶಗಳನ್ನು ನಿಯಂತ್ರಿಸಿ ಜನರನ್ನು ಬದುಕುಳಿಸಬೇಕಾದ ಅಗತ್ಯವಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ರಾಜಕೀಯ ಪಕ್ಷಗಳಿಗೆ ಆನ್‌ಲೈನ್ ಮೂಲಕ ಸಮಾವೇಶ ನಡೆಸಲು ಆದೇಶಿಸಬೇಕು ಮತ್ತು ಹೊಸ ವರ್ಷದ ಸಂಭ್ರಮಾಚರಣೆಯನ್ನು ಗುಂಪುಗೂಡಿ ನಡೆಸುವುದಕ್ಕೂ ತಡೆಯೊಡ್ಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.