ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕೊನೆಯ ದಿನ ಕರ್ತವ್ಯಕ್ಕೆ ಹಾಜರಾದ ನ್ಯಾ. ಯು ಯು ಲಲಿತ್ ಅವರು ಹಲವು ಭಾವೋದ್ವೇಗದ ಕ್ಷಣಗಳಿಗೆ ಸಾಕ್ಷಿಯಾದರು. ಮೊದಲಿಗೆ ಸರ್ವೋಚ್ಚ ನ್ಯಾಯಾಲಯದ ಕ್ಯಾಂಪಸ್ ಪ್ರವೇಶಿಸುತ್ತಲೇ ಸಿಜೆಐ ಕೊಠಡಿಯತ್ತ ಹೆಜ್ಜೆ ಹಾಕುವುದಕ್ಕೂ ಮುನ್ನ ಮೆಟ್ಟಿಲಿಗಳಿಗೆ ನಮಸ್ಕರಿಸಿದರು.
ಮೊದಲಿಗೆ ವಕೀಲರಾಗಿ 29 ವರ್ಷ, ಕಳೆದ ಎಂಟು ವರ್ಷಗಳು ನ್ಯಾಯಮೂರ್ತಿಯಾಗಿರುವುದು ಸೇರಿದಂತೆ ಒಟ್ಟು 37 ವರ್ಷಗಳ ಕಾಲ ಸುಪ್ರೀಂ ಕೋರ್ಟ್‌ನಲ್ಲಿ ಕಳೆದಿರುವ ನ್ಯಾ. ಲಲಿತ್ ಅವರು ಇಂದು ಸಂಜೆ ಸರ್ವೋಚ್ಚ ನ್ಯಾಯಾಲಯದ ಕ್ಯಾಂಪಸ್‌ನಲ್ಲಿ ಅಂತಿಮವಾಗಿ ಸುತ್ತು ಹಾಕಿದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನಿವೃತ್ತರಾದವರು ಯಾವುದೇ ನ್ಯಾಯಾಲಯದಲ್ಲಿ ವಕೀಲರಾಗಿ ಕೆಲಸ ಮಾಡಲು ಅವಕಾಶವಿರುವುದಿಲ್ಲ.
ತಮ್ಮ ಕರ್ತವ್ಯದ ಅಂತಿಮ ದಿನ ಸರ್ವೋಚ್ಚ ನ್ಯಾಯಾಲಯದ ವರದಿಗಾರಿಕೆ ಮಾಡುವ ಪತ್ರಕರ್ತರ ಜೊತೆ ಅನೌಪಚಾರಿಕವಾಗಿ ಚರ್ಚೆ ನಡೆಸಿದ ಸಿಜೆಐ ಅವರು ಆನಂತರ ಮೊದಲ ಐದು ನ್ಯಾಯಾಲಯದ ಕೊಠಡಿಗಳಿರುವ ಕಡೆಗೆ ಹೆಜ್ಜೆ ಹಾಕಿದರು. ಆ ಸಂದರ್ಭದಲ್ಲಿ ಮೆಟ್ಟಿಲುಗಳಿಗೆ ನಮಿಸಿದ ಸಿಜೆಐ ಅವರು ನ್ಯಾಯಾಲಯದ ಅಧಿಕಾರಿಗಳ ಜೊತೆ ಕೆಲ ಕಾಲ ಸಮಾಲೋಚನೆ ನಡೆಸಿದರು.