“ಅಪರಾಧ ಪ್ರಕರಣಗಳಿಗೆ ಬಳಕೆಯಾದ ಕಾರಣಕ್ಕೆ ಪೊಲೀಸರು ಜಪ್ತಿ ಮಾಡಿದ ವಾಹನಗಳನ್ನು ಕೇವಲ ಗುರುತಿಸುವ ಉದ್ದೇಶಕ್ಕಾಗಿ ಬಿಡುಗಡೆ ಮಾಡದಿರುವುದು ಸರಿಯಲ್ಲ. ತನಿಖಾಧಿಕಾರಿಗಳು ಪಂಚನಾಮೆಯೊಂದಿಗೆ ವಿವಿಧ ಕೋನದದಲ್ಲಿ ಪೋಟೋ ತೆಗೆದುಕೊಂಡು ವಾಹನ ಬಿಡುಗಡೆ ಮಾಡಬೇಕು” ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಅಭಿಪ್ರಾಯಪಟ್ಟಿದೆ.
ಅಪರಾಧ ಪ್ರಕರಣಗಳಿಗೆ ಬಳಕೆಯಾಗಿದೆ ಎಂಬ ಕಾರಣದಿಂದ ರಾಜರಾಜೇಶ್ವರಿ ನಗರ ಠಾಣಾ ಪೊಲೀಸರು ಜಪ್ತಿ ಮಾಡಿರುವ ತಮ್ಮ ಕಾರು, ಬೈಕು ಮತ್ತು ಆಟೋರಿಕ್ಷಾವನ್ನು ಬಿಡುಗಡೆ ಮಾಡಬೇಕು ಎಂದು ಜವ್ವಾಜಿ ಧನತೇಜ, ಜಯಲಕ್ಷ್ಮಿ ಮತ್ತು ನಂದಿನಿ ಎಸ್. ಪ್ರಕಾಶ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.
“ಅಪರಾಧ ಕೃತ್ಯಕ್ಕೆ ಬಳಕೆಯಾದ ವಾಹನಗಳನ್ನು ಪೊಲೀಸ್ ಠಾಣೆ ಮುಂದೆ ನಿಷ್ಕ್ರಿಯವಾಗಿ ನಿಲ್ಲಿಸಲು ಅನುಮತಿಸಲಾಗದು ಎಂಬುದಾಗಿ ಸುಂದರ್‌ಬಾಯ್ ಅಂಬಲಾಲ್ ದೇಸಾಯಿ ಮತ್ತು ಗುಜರಾತ್ ಸರ್ಕಾರ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿದೆ. ಅದರಂತೆ ಜಪ್ತಿಯಾದ ವಾಹನಗಳ ಮಾಲೀಕರು ಅವುಗಳ ಬಿಡುಗಡೆಗೆ ಸಲ್ಲಿಸಿದ ಅರ್ಜಿಗಳನ್ನು ಕೆಲ ಷರತ್ತು ವಿಧಿಸುವ ಮೂಲಕ ಮ್ಯಾಜಿಸ್ಟ್ರೇಟ್ ಅಥವಾ ಸಂಬಂಧಿತ ನ್ಯಾಯಾಲಯವು ಇತ್ಯರ್ಥಪಡಿಸಬೇಕು” ಎಂದು ಆದೇಶದಲ್ಲಿ ಹೇಳಲಾಗಿದೆ.
“ವಾಹನ ಗುರುತಿಸುವ ಉದ್ದೇಶದಿಂದ ಅದರ ಬಿಡುಗಡೆಗೆ ಕೋರಿದ ಅರ್ಜಿ ತಿರಸ್ಕರಿಸುವುದು ಸರಿಯಾದ ಕ್ರಮವಲ್ಲ. ಪೊಲೀಸ್ ಠಾಣೆ ಮುಂದೆ ಇರಿಸಲು ಅವಕಾಶ ಕಲ್ಪಿಸಿದರೆ ವಾಹನಗಳು ಹಾಳಾಗಲಿವೆ. ಇನ್ನೂ ಗುರುತಿಸುವ ಉದ್ದೇಶದಿಂದ ಪೊಲೀಸರು ವಾಹನಗಳನ್ನು ನ್ಯಾಯಾಲಯಕ್ಕೆ ತರಲು ಸಹ ಸಾಧ್ಯವಾಗುವುದಿಲ್ಲ. ಆದ್ದರಿಂದ, ಸುಪ್ರಿಂ ಕೋರ್ಟ್ ರೂಪಿಸಿರುವ ಮಾರ್ಗಸೂಚಿಯಂತೆ ತನಿಖಾಧಿಕಾರಿ ಪಂಚನಾಮೆಯೊಂದಿಗೆ ವಾಹನದ ಪೋಟೋ ತೆಗೆದುಕೊಂಡು ಬಿಡುಗಡೆ ಮಾಡಬೇಕು” ಎಂದು ಆದೇಶದಲ್ಲಿ ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ, ವಿಚಾರಣಾಧೀನ ನ್ಯಾಯಾಲಯ ಹೊರಡಿಸಿದ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಅರ್ಜಿದಾರರು ಆರೋಪಿಗಳು ಅಲ್ಲ. ಕೇವಲ ವಾಹನಗಳ ಮಾಲೀಕರಾಗಿದ್ದಾರೆ. ಆದ ಕಾರಣ ಕಾರಿಗೆ ಮೂರು ಲಕ್ಷ, ಬೈಕಿಗೆ 30 ಸಾವಿರ ಮತ್ತು ಮತ್ತು ಆಟೋರಿಕ್ಷಾಗೆ 75 ಸಾವಿರ ರೂಪಾಯಿ ಭದ್ರತಾ ಖಾತರಿ (ಇಂಡೆಮ್ನಿಟಿ ಬಾಂಡ್) ಪಡೆದು ಬಿಡುಗಡೆ ಮಾಡಬೇಕು. ತನಿಖಾಧಿಕಾರಿ ಪಂಚನಾಮೆಯೊಂದಿಗೆ ವಿವಿಧ ಕೋನದಲ್ಲಿ ವಾಹನಗಳ ಪೋಟೋ ತೆಗೆಕೊಳ್ಳಬೇಕು. ಗುರುತಿಸುವ ಉದ್ದೇಶಕ್ಕಾಗಿ ಫೋಟೊಗಳನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ: ಕೊಲೆ ಯತ್ನ, ಜೀವ ಬೆದರಿಕೆ ಮತ್ತು ವ್ಯಕ್ತಿಯನ್ನು ಅಕ್ರಮವಾಗಿ ಕೂಡಿ ಹಾಕಿದ ಅಪರಾಧಕ್ಕೆ ಬಳಕೆಯಾದ ಆರೋಪದ ಮೇಲೆ ಅರ್ಜಿದಾರರ ಒಡೆತನದ ಹೋಂಡಾ ಸಿಟಿ ಕಾರು ಮತ್ತು ಹೊಂಡಾ ಡಿಯೋ ಬೈಕ್ ಮತ್ತು ಬಜಾಜ್ ಆಟೋರಿಕ್ಷಾವನ್ನು 2021ರಲ್ಲಿ ರಾಜರಾಜೇಶ್ವರಿ ಠಾಣಾ ಪೊಲೀಸರು ಜಪ್ತಿ ಮಾಡಿದ್ದರು. ಈ ಅಪರಾಧ ಪ್ರಕರಣದ ವಿಚಾರಣೆಯು ವಿಚಾರಣಾಧೀನ ನ್ಯಾಯಾಲಯದ ಮುಂದೆ ಬಾಕಿಯಿದೆ.
ಈ ನಡುವೆ ತಮ್ಮ ವಾಹನ ಬಿಡುಗಡೆ ಮಾಡಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ವಾಹನ ಮಾಲೀಕರು (ಅರ್ಜಿದಾರರು) ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 451 ಮತ್ತು 457ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಆ ಅರ್ಜಿಯನ್ನು ವಜಾಗೊಳಿಸಿ ನಗರದ 54ನೇ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು 2022ರ ಏಪ್ರಿಲ್ 5ರಂದು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು.