ಪ್ರಧಾನಿ ಮೋದಿ ಅವರನ್ನು ಇಷ್ಟಪಡಿ, ಬಿಡಿ ಆದರೆ ಅವರ ವಿರುದ್ಧ ಅವಹೇಳನಕಾರಿ ಭಾಷೆ ಬಳಸುವಂತಿಲ್ಲ: ಗುಜರಾತ್ ಹೈಕೋರ್ಟ್

ಪ್ರಧಾನಿ ಮೋದಿ ಮತ್ತು ಅವರ ಮೃತ ತಾಯಿ ವಿರುದ್ಧ ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಹೇಳಿಕೆ ಪ್ರಕಟಿಸಿದ್ದ ವ್ಯಕ್ತಿಯೊಬ್ಬರಿಗೆ ನ್ಯಾ. ನಿರ್ಝರ್ ದೇಸಾಯಿ ಅವರಿದ್ದ ಏಕಸದಸ್ಯ ಪೀಠ ಜಾಮೀನು ನಿರಾಕರಿಸಿತು.
Gujarat High Court and PM Narendra Modi
Gujarat High Court and PM Narendra Modi
Published on

ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ದಿವಂಗತ ತಾಯಿ ಹೀರಾಬೆನ್ ಮೋದಿ ವಿರುದ್ಧ ಫೇಸ್‌ಬುಕ್ ನಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಪ್ರಕಟಿಸಿದ್ದ ಆರೋಪಿಗೆ ಗುಜರಾತ್ ಹೈಕೋರ್ಟ್ ಇತ್ತೀಚೆಗೆ ಜಾಮೀನು ನಿರಾಕರಿಸಿದೆ [ಅಫ್ಸಲ್‌ಭಾಯ್ ಕಸಂಭಾಯ್ ಲಖಾನಿ ಮತ್ತು ಗುಜರಾತ್‌ ಸರ್ಕಾರ ನಡುವಣ ಪ್ರಕರಣ].

ಪ್ರಧಾನಿ ಮೋದಿ ಅವರನ್ನು ಇಷ್ಟಪಡಲು ಅಥವಾ ಇಷ್ಟಪಡದೇ ಇರಲು ವ್ಯಕ್ತಿಗಳು ಸ್ವತಂತ್ರರು. ಆದರೆ ಅವರ ವಿರುದ್ಧ ಅವಹೇಳನಕಾರಿ  ಮತ್ತು ನಿಂದನೀಯ ಪದ ಬಳಸಬಾರದು ಎಂದು ನ್ಯಾ. ನಿರ್ಝರ್‌ ದೇಸಾಯಿ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.

"ಒಬ್ಬ ವ್ಯಕ್ತಿ ಯಾವುದೇ ವ್ಯಕ್ತಿಯನ್ನು  ಇಷ್ಟಪಡಬಹುದು ಅಥವಾ ಇಷ್ಟಪಡದೇ ಇರಬಹುದು. ಆದರೆ ಇದರರ್ಥ ದೇಶದ ಪ್ರಧಾನಿ ಮತ್ತವರ ತಾಯಿಯ ಬಗ್ಗೆ ಅವಹೇಳನಕಾರಿ ಮತ್ತು ನಿಂದನೀಯ ಭಾಷೆ ಬಳಸಬಹುದು ಎಂದಲ್ಲ. ಆದ್ದರಿಂದ ಹೇಳಿಕೆಯನ್ನು ಮತ್ತೆ ಉಲ್ಲೇಖಿಸದೆಯೇ ನ್ಯಾಯಾಲಯ ಸಾಮಾನ್ಯ ಅವಲೋಕನವನ್ನಷ್ಟೇ ಮಾಡುತ್ತಿದೆ. ಪ್ರಕರಣದ ಸಾಕ್ಷ್ಯಗಳ ಇಟ್ಟಾರೆ ಪರಿಗಣೆ ಮೇಲೆ ಪ್ರಸ್ತುತ ಅರ್ಜಿದಾರ ಭಾರತೀಯ ಪ್ರಜೆಯಾಗಿದ್ದು ಸಮಾಜದಲ್ಲಿನ ಶಾಂತಿ ಅಸ್ಥಿರಗೊಳಿಸಲು ಎಲ್ಲಾ ಪ್ರಯತ್ನ ಮಾಡಿದ್ದಾರೆ ಎಂಬುದನ್ನು ಈ ನ್ಯಾಯಾಲಯ ಕಂಡುಕೊಂಡಿದೆ” ಎಂಬುದಾಗಿ ಅದು ವಿವರಿಸಿತು.

ಆರೋಪಿ ಅಫ್ಸಲ್‌ಭಾಯ್ ಕಸಂಭಾಯ್ ಲಖಾನಿ ಅವರು ಪ್ರಕಟಿಸಿರುವ ವಸ್ತುವಿಷಯ ಪ್ರಧಾನಿ ವಿರುದ್ಧ ಮಾತ್ರವಲ್ಲದೆ ಅವರ ದಿವಂಗತ ತಾಯಿಯ ವಿರುದ್ಧವೂ ಅವಹೇಳನಕಾರಿ ಮತ್ತು ಅವಮಾನಕರ ಹೇಳಿಕೆಗಳನ್ನು ಒಳಗೊಂಡಿದೆ. ಜೊತೆಗೆ ಅವರ 'ಗುಜರಾತ್ ತ್ರಸ್ತ್‌ ಭಾಜಪಾ ಮಸ್ತ್' ಫೇಸ್‌ಬುಕ್‌ ಪುಟದಲ್ಲಿ ಪೊರ್ನೋಗ್ರಫಿ ಮತ್ತು ಅಶ್ಲೀಲ  ವಿಷಯಗಳು ಇರುವುದನ್ನು, ಪಾಕಿಸ್ತಾನದ ಪರ ಹಾಗೂ ಭಾರತ ವಿರೋಧಿ ಪೋಸ್ಟ್‌ಗಳು ಇರುವುದನ್ನು ನ್ಯಾಯಾಲಯ ಗಮನಿಸಿತು.

ಈ ಹಿನ್ನೆಲೆಯಲ್ಲಿ ನ್ಯಾಯಾಲಯವು “ಇಂತಹ ವ್ಯಕ್ತಿಗೆ ಜಾಮೀನು ನೀಡಿದರೆ, ತಂತ್ರಜ್ಞಾನವು ಮುಂದುವರಿದಂತೆ ನಕಲಿ ಐಡಿಗಳನ್ನು ಸೃಷ್ಟಿಸಿ ಮತ್ತೊಂದು ಹೆಸರನ್ನು ಬಳಸಿಕೊಂಡು ಮತ್ತೊಮ್ಮೆ ಈ ಬಗೆಯ ಅಪರಾಧ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಇಂತಹ ವ್ಯಕ್ತಿಗೆ ಸಮಾಜದಲ್ಲಿ ಮುಕ್ತವಾಗಿ ತಿರುಗಾಡಲು ಅವಕಾಶ ನೀಡಿದರೆ, ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪೋಸ್ಟ್‌ಗಳ ಮೂಲಕ ಹಾನಿ ಮಾಡಬಹುದು. ಒಮ್ಮೆ ಹಾನಿ ಸಂಭವಿಸಿದ ಬಳಿಕ, ಆ ವ್ಯಕ್ತಿಯನ್ನು ಬಂಧಿಸಿ ಶಿಕ್ಷೆ ವಿಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಏಕೆಂದರೆ , ಸಾಮಾಜಿಕ ಮಾಧ್ಯಮ ಜನರ ಮೇಲೆ ಪ್ರಭಾವ ಬೀರುವ  ಅತ್ಯಂತ ಶಕ್ತಿಶಾಲಿ ಸಾಧನವಾಗಿದ್ದು ಸಮಾಜದಲ್ಲಿ ಶಾಂತಿ ಸಾಮರಸ್ಯ ಹಾಗೂ ಭ್ರಾತೃತ್ವವನ್ನು ಕದಡುವ ರೂಪದಲ್ಲಿ ಅದಾಗಲೇ ದೊಡ್ಡ ಧಕ್ಕೆ ಉಂಟಾಗಿರುತ್ತದೆ” ಎಂದು ನುಡಿದು ಜಾಮೀನು ಮನವಿಯನ್ನು ತಿರಸ್ಕರಿಸಿತು.  

Kannada Bar & Bench
kannada.barandbench.com