ಕೋವಿಡ್ ಹಿನ್ನೆಲೆ: ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರದಂತೆ ಶಿಕ್ಷಣಾಧಿಕಾರಿಗಳಿಗೆ ಮದ್ರಾಸ್ ಹೈಕೋರ್ಟ್ ಕಿವಿಮಾತು

ಮಕ್ಕಳೊಂದಿಗೆ ಹೆಚ್ಚು ಅನುಕಂಪದಿಂದ ವರ್ತಿಸುವ ಮೂಲಕ ಸಮಾಜ ಈ ಸಮಸ್ಯೆ ಎದುರಿಸಬೇಕು ಮತ್ತು ಅವರ ಮೇಲೆ ಒತ್ತಡ ಹೇರಬಾರದು ಎಂದು ನ್ಯಾಯಾಲಯ ಹೇಳಿದೆ.
Class Room
Class Room
Published on

ಕೋವಿಡ್‌ ಸಂದರ್ಭದಲ್ಲಿ ಆನ್‌ಲೈನ್‌ ತರಗತಿಗಳ ಯುಗ ಆರಂಭವಾಗಿರುವಾಗ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಹೆಚ್ಚು ಸಹಾನುಭೂತಿ ಮತ್ತು ವಿವೇಚನೆಯಿಂದ ವರ್ತಿಸಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ ಕಿವಿಮಾತು ಹೇಳಿದೆ.

ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಆನ್‌ಲೈನ್‌ ತರಗತಿಗೆ ಹಾಜರಾಗಬೇಕೆಂಬ ಹೊಸ ಸವಾಲು ಎದುರಿಸುತ್ತಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಮಕ್ಕಳನ್ನು ಆಪ್ತ ಸಮಾಲೋಚನೆಗಾಗಿ ಮನೋವೈದ್ಯರ ಬಳಿಗೆ ಕರೆದೊಯ್ಯುವ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಒಂದು ವರ್ಷದಿಂದ ಮನೆಗಳಲ್ಲೇ ಉಳಿದಿರುವುದರಿಂದ ಮಕ್ಕಳು ತಮ್ಮ ಹುರುಪು ಕಳೆದುಕೊಳ್ಳುತ್ತಿದ್ದಾರೆ ಎಂದು ನ್ಯಾ. ಎನ್‌ ಆನಂದ್‌ ವೆಂಕಟೇಶ್‌ ಕಳವಳ ವ್ಯಕ್ತಪಡಿಸಿದರು.

"ಈ ಸಾಂಕ್ರಾಮಿಕ ಅವಧಿಯಲ್ಲಿ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ವ್ಯವಹರಿಸುವಾಗ ಹೆಚ್ಚು ಸಹಾನುಭೂತಿ ಮತ್ತು ವಿವೇಚನೆಯಿಂದ ನಡೆದುಕೊಳ್ಳಬೇಕಿದೆ. ಈ ಸಾಂಕ್ರಾಮಿಕ ಅವಧಿಯಲ್ಲಿ ಮಕ್ಕಳನ್ನು ಆಪ್ತ ಸಮಾಲೋಚನೆಗಾಗಿ ಮನೋವೈದ್ಯರ ಬಳಿಗೆ ಕರೆದೊಯ್ಯುವ ಪ್ರಕರಣಗಳು ಹೆಚ್ಚುತ್ತಿವೆ. ಮಕ್ಕಳು ಹೊಸ ಸಮಸ್ಯೆ ಎದುರಿಸುತ್ತಿದ್ದು ಅವರು ಮನೆಗಳಲ್ಲೇ ಉಳಿದಿರುವುದರಿಂದ ತಮ್ಮ ಹುರುಪು ಕಳೆದುಕೊಳ್ಳುತ್ತಿದ್ದಾರೆ. ಇದು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ನಡೆಯುತ್ತಿದೆ. ಮಕ್ಕಳೊಂದಿಗೆ ಹೆಚ್ಚು ಅನುಕಂಪದಿಂದ ವರ್ತಿಸುವ ಮೂಲಕ ಸಮಾಜ ಈ ಸಮಸ್ಯೆ ಎದುರಿಸಬೇಕು ಮತ್ತು ಅವರ ಮೇಲೆ ಒತ್ತಡ ಹೇರಬಾರದು” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

2020-21ರ ಶೈಕ್ಷಣಿಕ ವರ್ಷದಲ್ಲಿ ತರಗತಿಗಳಿಗೆ ಸರಿಯಾಗಿ ಹಾಜರಾಗಲು ವಿಫಲನಾದ ಕಾರಣ ಉತ್ತೀರ್ಣನಾಗುವ ಅವಕಾಶ ಕಳೆದುಕೊಂಡ 10ನೇ ತರಗತಿ ವಿದ್ಯಾರ್ಥಿಗೆ ಪರಿಹಾರ ನೀಡುವಾಗ ನ್ಯಾಯಾಲಯ ಈ ಅವಲೋಕನ ಮಾಡಿದೆ.

ಕೋವಿಡ್‌ ಹಿನ್ನೆಲೆಯಲ್ಲಿ 2019-2020ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲು ಸರ್ಕಾರ ಆದೇಶಿಸಿತ್ತು. ಅದರಂತೆ ತೇರ್ಗಡೆಯಾಗಬೇಕಾದ ವಿದ್ಯಾರ್ಥಿಗಳ ಪಟ್ಟಿಯನ್ನು ಶಾಲೆ ಸರ್ಕಾರದ ಅಧಿಕಾರಿಗಳಿಗೆ ಕಳಿಸಿಕೊಟ್ಟಿತ್ತು. ಆ ಪಟ್ಟಿಯಲ್ಲಿ ವಿದ್ಯಾರ್ಥಿಯ ಹೆಸರನ್ನು ಸೇರಿಸಿರಲಿಲ್ಲ. ಇದರಿಂದಾಗಿ ಸರ್ಕಾರಿ ಆದೇಶದ ಪ್ರಯೋಜನ ವಿದ್ಯಾರ್ಥಿಗೆ ದೊರೆತಿರಲಿಲ್ಲ. ಬಳಿಕ ಶಾಲೆ ವಿದ್ಯಾರ್ಥಿಯ ಹೆಸರು ಬಿಟ್ಟು ಹೋಗಿರುವ ವಿಚಾರವನ್ನು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ತಿಳಿಸಿತ್ತು. ನಂತರ, ವಿದ್ಯಾರ್ಥಿಯ ತಂದೆ 2021ರ ಮಾರ್ಚ್ 10ರಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ ಈ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಹಿಂದಿನ ಆದೇಶದಲ್ಲಿ ನ್ಯಾಯಾಲಯ ಮೂರು ವಾರದೊಳಗೆ ಸರ್ಕಾರಿ ಆದೇಶಕ್ಕನುಗುಣವಾಗಿ ನಿರ್ಧಾರ ತೆಗೆದುಕೊಳ್ಳುವಂತೆ ನಿರ್ದೇಶಿಸಿತ್ತು. ಆದರೆ 2020-21ರ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿ ತರಗತಿಗೆ ಗೈರಾಗಿದ್ದರಿಂದ ಆತ ಸರ್ಕಾರಿ ಆದೇಶದ ಪ್ರಯೋಜನ ಪಡೆಯಲು ಅರ್ಹ ಅಲ್ಲ ಎಂದು ಮೇ 4ರಂದು ಪರೀಕ್ಷಾ ನಿರ್ದೇನಾಲಯ ತಿಳಿಸಿತು. ಹೀಗಾಗಿ ವಿದ್ಯಾರ್ಥಿಯ ತಂದೆ ಮತ್ತೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Also Read
ವೃತ್ತಿಪರ ಶಿಕ್ಷಣ ಪ್ರವೇಶಿಕೆ ಸರ್ಕಾರದ ಉಡುಗೊರೆಯಲ್ಲ: ಸುಪ್ರೀಂ ಕೋರ್ಟ್‌

ಆದರೆ ನಿರ್ದೇಶನಾಲಯ ನಿರ್ಣಯ ಕೈಗೊಳ್ಳುವಲ್ಲಿ ತಪ್ಪೆಸಗಿದೆ ಎಂದು ನ್ಯಾ. ಆನಂದ್ ವೆಂಕಟೇಶ್ ಸೂಚಿಸಿದರು. ಆದೇಶವನ್ನು ಎಚ್ಚರಿಕೆಯಿಂದ ಓದಿದರೆ ವಿದ್ಯಾರ್ಥಿ ಶಾಲೆಗೆ ದಾಖಲಾಗಿದ್ದರೆ ಸಾಕು ಎಂಬ ವಿಚಾರ ತಿಳಿದುಬರುತ್ತದೆ. ಅರ್ಜಿದಾರರ ಮಗ ಸಂಬಂಧಪಟ್ಟ ಶಾಲೆಯಲ್ಲಿಓದುತ್ತಿದ್ದಾನೆ ಎಂದು ತೋರಿಸುವ ಸಾಕಷ್ಟು ಅಂಶಗಳಿವೆ ಎಂದು ಪೀಠ ಅಭಿಪ್ರಾಯಪಟ್ಟಿತು.

ಹಾಜರಾತಿ ಅಗತ್ಯ ಪೂರೈಸಿದರೆ ಮಾತ್ರ ವಿದ್ಯಾರ್ಥಿಗೆ ಪ್ರಯೋಜನ ದೊರೆಯುತ್ತದೆ ಎಂದು ಸರ್ಕಾರಿ ಆದೇಶ ಎಲ್ಲಿಯೂ ಷರತ್ತು ವಿಧಿಸಿಲ್ಲ. ಎರಡನೇ ಪ್ರತಿವಾದಿ ಅಂತಹ ಅಗತ್ಯವನ್ನು ಸರ್ಕಾರಿ ಆದೇಶದಲ್ಲಿ ಎಲ್ಲಿಂದ ಸ್ವೀಕರಿಸಿದರು ಎಂದು ತಿಳಿದಿಲ್ಲ ಎಂದರು. ಅರ್ಜಿದಾರರ ಪರ ವಕೀಲ ಎಂ ಜೆರಿನ್ ಮ್ಯಾಥ್ಯೂ ಹಾಜರಾದರು. ಪ್ರತಿವಾದಿಗಳ ಪರ ವಿಶೇಷ ಸರ್ಕಾರಿ ಪ್ಲೀಡರ್ ಜೆ ಗುಣಶೀಲನ್ ಮುತ್ತಯ್ಯ ಮತ್ತು ಸರ್ಕಾರಿ ವಕೀಲ ಎಂ. ಲಿಂಗದೊರೈ ಹಾಜರಿದ್ದರು.

Kannada Bar & Bench
kannada.barandbench.com