ಆನ್‌ಲೈನ್ ವಂಚನೆ ಪ್ರಕರಣ: ಖಾತೆದಾರರ ಜೊತೆ ಸಭೆ ನಡೆಸಲು ಡಾ. ಪ್ರಣಬ್‌ ಮೊಹಾಂತಿಗೆ ಹೈಕೋರ್ಟ್‌ ನಿರ್ದೇಶನ

ಆನ್ ಲೈನ್ ವಂಚನೆ ಆರೋಪದ ಮೇಲೆ‌ ಸ್ಥಗಿತಗೊಳಿಸಲಾಗಿರುವ ತಮ್ಮ ಬ್ಯಾಂಕ್ ಖಾತೆಯನ್ನು ಮರು (ಡೀಫ್ರೀಜ್) ಚಾಲನೆ ನೀಡಲು ಪೊಲೀಸರು ಹಾಗೂ ಬ್ಯಾಂಕ್‌ಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿದೆ.
Digital fraud, Cyber Investigation
Digital fraud, Cyber Investigation
Published on

ಆನ್‌ಲೈನ್ ವಂಚನೆ ಪ್ರಕರಣಗಳಲ್ಲಿ ಬ್ಯಾಂಕ್ ಖಾತೆಗಳ ಸ್ಥಗಿತದಿಂದ ಉಂಟಾಗಿರುವ ಸಮಸ್ಯೆ ಪರಿಹರಿಸಲು ‌ಜುಲೈ 16ರಂದು ಖಾತೆದಾರರೊಂದಿಗೆ ಸಭೆ ನಡೆಸುವಂತೆ ಪರಿಹಾರ ಕಲ್ಪಿಸುವಂತೆ ರಾಜ್ಯ ಕಮಾಂಡ್ ಸೆಂಟರ್ ಮುಖ್ಯಸ್ಥ ಡಾ. ಪ್ರಣಬ್ ಮೊಹಾಂತಿ ಅವರಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.

ಆನ್ ಲೈನ್ ವಂಚನೆ ಆರೋಪದ ಮೇಲೆ‌ ಸ್ಥಗಿತಗೊಳಿಸಲಾಗಿರುವ ತಮ್ಮ ಬ್ಯಾಂಕ್ ಖಾತೆಯನ್ನು ಮರು (ಡೀಫ್ರೀಜ್) ಚಾಲನೆ ನೀಡಲು ಪೊಲೀಸರು ಹಾಗೂ ಬ್ಯಾಂಕ್‌ಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಸುಧೀರ್ ಚಿಕ್ಕಳ್ಳಿ ಎಂಬಾತ ಸೇರಿದಂತೆ 31 ಜನ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರೇ ನಡೆಸಿತು.

ಇದಕ್ಕೂ ಮುನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದ ಸೈಬರ್ ಕಮಾಂಡ್ ಸೆಂಟರ್ ಮುಖ್ಯಸ್ಥ ಡಾ.ಪ್ರಣಬ್ ಮೊಹಂತಿ, ಆನ್‌ಲೈನ್ ವಂಚನೆ ಆರೋಪದ‌ ಮೇಲೆ ಬ್ಯಾಂಕ್ ಖಾತೆ ಸ್ಥಗಿತ ಸಂಬಂಧ ಹಲವು ಜನರ ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಅವರ ಪರಿಹರಿಸಲು ಯತ್ನಿಸುತ್ತಿದ್ದೇವೆ. ಬೇರೆ ರಾಜ್ಯದ ಠಾಣೆಗಳೊಂದಿಗೆ ಸಮನ್ವಯಕ್ಕೂ ಪ್ರಯತ್ನಿಸಲಾಗುತ್ತಿದೆ. ಇಂತಹ ಸಮಸ್ಯೆ ಬಗೆಹರಿಸಲು ಈಗಾಗಲೇ ನೋಡೆಲ್ ಅಧಿಕಾರಿಗಳನ್ನು ನೇಮಕ‌ ಮಾಡಲಾಗಿದೆ. ಈ‌ ತೊಂದರೆಗಳನ್ನು ಪರಿಹರಿಸಲು ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದು ಪೀಠಕ್ಕೆ ಮಾಹಿತಿ ನೀಡಿದರು.

ಅದನ್ನು‌ ಪರಿಗಣಿಸಿದ ಪೀಠವು ಜುಲೈ 16ರಂದು ಬೆಳಗ್ಗೆ 11ರಿಂದ ಸಂಜೆ 6.30ರವರೆಗೆ ಸಿಐಡಿ ಕಚೇರಿಯಲ್ಲಿ ಅರ್ಜಿದಾರರೊಂದಿಗೆ ಸಭೆ ನಡೆಸಿ ಚರ್ಚಿಸಬೇಕು. ಅವರ ಅಹವಾಲು ಆಲಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿ ಈ ಅರ್ಜಿ ಇತ್ಯರ್ಥಪಡಿಸಿದೆ.

ಆನ್‌ಲೈನ್ ವಂಚನೆ ಮಾಡಿದ ವ್ಯಕ್ತಿಯು ನಮ್ಮ  ಬ್ಯಾಂಕ್ ಖಾತೆಗೆ ಹಣ ಹಾಕಿದ್ದಾರೆ. ಹಣ ಕಳೆದುಕೊಂಡವರು ಪೊಲೀಸರಿಗೆ ದೂರು ನೀಡಿದ್ದಾರೆ. ಆ ದೂರು ಆಧರಿಸಿ ಪೊಲೀಸರು ಬ್ಯಾಂಕ್ ಗಳಿಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕಿನವರು ನಮ್ಮ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ.‌ ವಾಸ್ತವವಾಗಿ ನಾವು ಆನ್ ಲೈನ್ ವಂಚನೆ ಮಾಡಿಲ್ಲ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಬ್ಯಾಂಕ್ ಖಾತೆ ಸ್ಥಗಿತ ಮಾಡಿರುವುದರಿಂದ ತಾವು ಬ್ಯಾಂಕಿಂಗ್ ಚಟುವಟಿಕೆ ಮಾಡಲಾಗುತ್ತಿಲ್ಲ. ಹಣ ಡ್ರಾ ಮಾಡಲು ಸಾಧ್ಯವಾಗದೆ  ತೊಂದರೆ ಉಂಟಾಗಿದೆ. ಹೀಗಾಗಿ, ಬ್ಯಾಂಕ್ ಖಾತೆಯನ್ನು ಡಿಫ್ರೀಜ್ ಮಾಡಲು ಪೊಲೀಸರು ಹಾಗೂ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.

Kannada Bar & Bench
kannada.barandbench.com