ಜೂಜಿನ ಕುರಿತಾದ ಕಾನೂನು ಆಯೋಗದ ವರದಿಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಮದ್ರಾಸ್‌ ಹೈಕೋರ್ಟ್‌

“ವಸ್ತುನಿಷ್ಠವಾಗಿರಬೇಕಾದ ಆಯೋಗದ ವರದಿಯೊಂದು ಮಹಾಕಾವ್ಯವೊಂದನ್ನು ಹಾಗೂ ಅದರಲ್ಲಿನ ಘಟನೆಯೊಂದನ್ನು ಉಲ್ಲೇಖಿಸುತ್ತಿದೆ. ಇದು ನೈತಿಕತೆಯ ಕುರಿತಾದ ಲೇಖಕರ ವೈಯಕ್ತಿಕ ಧೋರಣೆಯಾಗಿದೆ,” ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ.
Law Commission of India, Madras HC
Law Commission of India, Madras HC

ಭಾರತದಲ್ಲಿ ಜೂಜು ಮತ್ತು ಕ್ರೀಡಾ ಬೆಟ್ಟಿಂಗ್‌ಗಳ ಕುರಿತಾದ ಕಾನೂನು ಚೌಕಟ್ಟಿನ ಬಗೆಗಿನ ಭಾರತೀಯ ಕಾನೂನು ಅಯೋಗದ ವರದಿಯೊಂದರ ಕುರಿತಾಗಿ ಮದ್ರಾಸ್‌ ಹೈಕೋರ್ಟ್‌ ತನ್ನದೇ ಆದ ಕೆಲ ಗಂಭೀರ ಸಂದೇಹಗಳನ್ನು ಶುಕ್ರವಾರ ವ್ಯಕ್ತಪಡಿಸಿದೆ. ವರದಿಯು ಲೇಖಕರ ನೈತಿಕ ಧೋರಣೆಯಿಂದ ಮಾರ್ಗದರ್ಶಿತವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು, ವರದಿಯಲ್ಲಿ ಮಹಾಕಾವ್ಯಗಳಲ್ಲಿ ಚಿತ್ರಿತವಾಗಿರುವ ಘಟನಾವಳಿಗಳ ಉಲ್ಲೇಖವಿರುವ ಬಗ್ಗೆಯೂ ವಿಶೇಷವಾಗಿ ಗಮನಿಸಿತು.

ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಅವರು, “ವರದಿಯು ಆಘಾತಕಾರಿಯಾಗಿದೆ. ವಸ್ತುನಿಷ್ಠವಾಗಿರಬೇಕಾದ ಕಾನೂನು ಆಯೋಗದ ವರದಿಯೊಂದು ಮಹಾಕಾವ್ಯವೊಂದನ್ನು ಹಾಗೂ ಅದರಲ್ಲಿನ ಘಟನೆಯೊಂದನ್ನು ಉಲ್ಲೇಖಿಸುತ್ತಿದೆ. ಇದು ನೈತಿಕತೆಯ ಕುರಿತಾದ ಲೇಖಕರ ವೈಯಕ್ತಿಕ ಧೋರಣೆಯಾಗಿದೆ” ಎಂದು ಅಭಿಪ್ರಾಯಪಟ್ಟರು.

ಡಾ. ಬಿ ಎಸ್ ಚೌಹಾಣ್‌ ಅವರು ಆಯೋಗದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಉಲ್ಲೇಖಿತ ವರದಿಯು ಪ್ರಕಟಣೆಗೊಂಡಿತ್ತು. ಅಂದಹಾಗೆ, ವರದಿಯ ಬಗ್ಗೆ ನ್ಯಾಯಾಲಯದಲ್ಲಿ ಪ್ರಸ್ತಾಪವಾಗಲು ತಮಿಳುನಾಡು ಸರ್ಕಾರವು ಆನ್‌ಲೈನ್‌ ಕ್ರೀಡೆಗಳನ್ನು, ನಿರ್ದಿಷ್ಟವಾಗಿ ಆನ್‌ಲೈನ್‌ ರಮ್ಮಿ ಮತ್ತು ಆನ್‌ಲೈನ್‌ ಪೋಕರ್‌ಗಳನ್ನು ನಿಷೇಧಿಸಿರುವ ಕ್ರಮದ ಬಗ್ಗೆ ತಕರಾರು ಎತ್ತಿರುವ ಅರ್ಜಿಗಳ ವಿಚಾರಣೆ ಕಾರಣವಾಯಿತು.

ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು, ಆನ್‌ಲೈನ್‌ ಜೂಜನ್ನು ನಿಷೇಧಿಸಲು ಸರ್ಕಾರದ ಬಳಿ ಸೂಕ್ತ ದತ್ತಾಂಶದ ಸಂಗ್ರಹವಿದೆಯೇ ಎಂದು ಪ್ರಶ್ನಿಸಿತು. ಅಲ್ಲದೆ, ಈ ಕುರಿತಾಗಿ ತಂದಿರುವ ಕಾನೂನಿನ ಪ್ರಸಕ್ತ ರಚನಾ ಸ್ವರೂಪವು ಕಳಪೆಯಾಗಿರುವ ಬಗ್ಗೆಯೂ ಆಕ್ಷೇಪಿಸಿತು. ಕಳೆದ ನವೆಂಬರ್‌ನಲ್ಲಿ ಸುಗ್ರೀವಾಜ್ಞೆಯ ಮೂಲಕ ಆನ್‌ಲೈನ್‌ ಜೂಜು ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದ್ದು ನಂತರ ಈ ಸಂಬಂಧ ಸರ್ಕಾರವು ಶಾಸನ ಸಭೆಯಲ್ಲಿ ಮಸೂದೆಯನ್ನು ಮಂಡಿಸುವ ಮೂಲಕ ಕಾಯಿದೆಯನ್ನು ಜಾರಿಗೆ ತಂದಿತ್ತು. ತಮಿಳುನಾಡಿನಲ್ಲಿ ಆನ್‌ಲೈನ್‌ ಜೂಜಿನಿಂದಾಗಿ ಆತ್ಯಹತ್ಯೆಯ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಜಾರಿಗೆ ಬಂದಿತ್ತು.

ವಿಚಾರಣೆಯ ವೇಳೆ ನ್ಯಾಯಾಲಯವು ಸರ್ಕಾರದ ನಡೆಯ ಬಗ್ಗೆ ವ್ಯಕ್ತಪಡಿಸಿದ ಪ್ರಮುಖ ಸಂದೇಹಗಳು ಹೀಗಿವೆ:

  • ಆನ್‌ಲೈನ್‌ ಜೂಜನ್ನು ನಿಷೇಧಿಸಿರುವ ಕ್ರಮದ ಹಿಂದೆ ಯಾವುದೇ ದತ್ತಾಂಶ ಅಥವಾ ಅಧ್ಯಯನಗಳಿದ್ದಂತೆ ತೋರುತ್ತಿಲ್ಲ; ನಿಮ್ಮ ನೈತಿಕ ಧೋರಣೆ ಮಾತ್ರವೇ ಕಾಣುತ್ತಿದೆ.

  • ನಿಮಗೆ (ಸರ್ಕಾರಕ್ಕೆ) ಅಧಿಕಾರವಿದೆ, ಶಾಸನಬದ್ಧ ಅರ್ಹತೆ ಇದೆ. ಆದರೆ, ಹಾಗೆಂದ ಮಾತ್ರಕ್ಕೆ ನೀವು ಈ ಮಟ್ಟಿಗೆ ಚಾಟಿ ಬೀಸಬೇಕೆಂದಿಲ್ಲ.

  • ಕಾಲಾಂತರದಲ್ಲಿ ನ್ಯಾಯಶಾಸ್ತ್ರವು ವಿಕಸಿತಗೊಂಡಿದ್ದು, ಕೌಶಲ ಆಧಾರಿತ ಕ್ರೀಡೆಯ ಮೇಲೆ ಜೂಜು ನಡೆಯುವುದಾದರೆ ಅದನ್ನು ಆಚರಿಸುವ ಹಕ್ಕಿದೆ ಎನ್ನುತ್ತದೆ. ತಮ್ಮ ಕೌಶಲವನ್ನು ತೋರಿಸಲು ಹಾಗೂ ಸಾಧನೆಯಲ್ಲಿ ಮುಂದುವರೆಯಲು ಅಂತಹವರಿಗೆ ಹಕ್ಕಿದೆ.

  • ಒಮ್ಮೆ ಕೌಶಲದ ಪ್ರಶ್ನೆ ಉದ್ಭವಿಸಿದಾಗ ನೀವು ಅದನ್ನು ನಿಯಂತ್ರಿಸಬಹುದೇ ಹೊರತು ನಿಷೇಧಿಸಲಾಗದು. ಆದರೆ, ಒಮ್ಮೆ ನೀವದನ್ನು ನಿಷೇಧಿಸಿದರೆ ಆಗ ಅದು ಅಪಾಯಕಾರಿಯಾಗಲಿದೆ.

  • ಪ್ರಸ್ತುತ ಜೂಜಿನ ಬಗ್ಗೆ ಇರುವ ಕಾನೂನು ನೂರು ವರ್ಷಗಳ ಹಳೆಯ ಕಾನೂನಿಗೆ ತಂದಿರುವ ತಿದ್ದುಪಡಿಯಾಗಿದೆ. ಅದನ್ನು ಈಗ ತಂದಿರುವ ರೀತಿಗಿಂತ ಭಿನ್ನವಾಗಿ ಸರ್ಕಾರವು ಅದನ್ನು ತರಬಹುದಿತ್ತು. ನೀವು ಅದನ್ನು 1930ರ ಕಾನೂನಿನ ಮೂಲಕ ಕಡು ಕಳಪೆಯಾಗಿ ಪರಿಚಯಿಸಿದ್ದೀರಿ. ಬದಲಿಗೆ ಹೊಸ ಕಾಯಿದೆಯನ್ನೇ ಜಾರಿಗೆ ತರಬಹುದಿತ್ತು.

  • ಕೆಲವೊಂದು ಕೌಶಲದಲ್ಲಿ ಉತ್ತಮ ಸಾಧನೆ ಮಾಡಿರುವವರು ಅದನ್ನು ಬಳಸದೆ ಇರದಂತೆ ಮಾಡಲು ಸರ್ಕಾರವು ಸ್ವೇಚ್ಛೆಯಿಂದ ಕ್ರಮ ಕೈಗೊಳ್ಳುತ್ತಿದೆಯೇ ಎನ್ನುವ ಬಗ್ಗೆ ನ್ಯಾಯಾಲಯವು ಪರಿಶೀಲಿಸಬೇಕಿದೆ.

Kannada Bar & Bench
kannada.barandbench.com