ಆನ್‌ಲೈನ್‌-ಆಫ್‌ಲೈನ್‌ ಬೆಟ್ಟಿಂಗ್‌: ಶಾಸಕ ವೀರೇಂದ್ರಗೆ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ

ವಿಚಾರಣೆಗಾಗಿ ವೀರೇಂದ್ರ ಅವರನ್ನು ಈಗಾಗಲೇ 15 ದಿನಗಳ ಕಾಲ ಜಾರಿ ನಿರ್ದೇಶನಾಲಯವು ಕಸ್ಟಡಿಗೆ ಪಡೆದಿತ್ತು.
KC Veerendra
KC Veerendra
Published on

ಅಕ್ರಮ ಆನ್‌ಲೈನ್‌ ಮತ್ತು ಆಫ್‌ಲೈನ್ ಬೆಟ್ಟಿಂಗ್ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ ಸಿ ವೀರೇಂದ್ರ ಅಲಿಯಾಸ್‌ ವೀರೇಂದ್ರ ಪಪ್ಪಿ ಅವರನ್ನು ಸೆಪ್ಟೆಂಬರ್ 22ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜನಪ್ರತಿ‌ನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ಆದೇಶಿಸಿದೆ.

ವೀರೇಂದ್ರ ಪಪ್ಪಿ ಅವರ ಹದಿನೈದು ದಿನಗಳ ಜಾರಿ ನಿರ್ದೇಶನಾಲಯದ (ಇ ಡಿ) ಕಸ್ಟಡಿ ಅವಧಿ ಸೋಮವಾರಕ್ಕೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರೆದುರು ಹಾಜರುಪಡಿಸಲಾಯಿತು.

ವಿಚಾರಣೆಗಾಗಿ ವೀರೇಂದ್ರ ಅವರನ್ನು ಈಗಾಗಲೇ ಹದಿನೈದು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದ ಇಡಿ ಅಧಿಕಾರಿಗಳು ಮತ್ತೆ ಅವರನ್ನು ಕಸ್ಟಡಿಗೆ ಕೇಳಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು, ವೀರೇಂದ್ರ ಅವರನ್ನು ಹದಿನಾಲ್ಕು ದಿನಗಳ‌ ಕಾಲ (ಸೆಪ್ಟೆಂಬರ್ 22ರವರೆಗೆ) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಪ್ರಕರಣದ ಹಿನ್ನೆಲೆ:

ಇಡಿ ಅಧಿಕಾರಿಗಳು ಆಗಸ್ಟ್ 22ರಂದು ಶಾಸಕ ಕೆ ಸಿ ವೀರೇಂದ್ರ, ಅವರ ಸಹೋದರರು ಹಾಗೂ ಪಾಲುದಾರರ ಮನೆಗಳು ಹಾಗೂ ಕಚೇರಿಗಳು ಸೇರಿ ಚಿತ್ರದುರ್ಗ, ಬೆಂಗಳೂರು ಸಹಿತ ರಾಜ್ಯ ಹಾಗೂ ಹೊರರಾಜ್ಯಗಳ 31 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದರು. ಆಗಸ್ಟ್ 23ರಂದು ಸಿಕ್ಕಿಂನ ಗ್ಯಾಂಗ್ಟಾಕ್‌ನಲ್ಲಿ ಕೆ ಸಿ ವೀರೇಂದ್ರ ಅವರನ್ನು ಬಂಧಿಸಲಾಗಿತ್ತು.

ಶೋಧ ಕಾರ್ಯ ವೇಳೆ ಅಂದಾಜು 12 ಕೋಟಿ ರೂ. ನಗದು, 6 ಕೋಟಿ ರೂ. ಮೌಲ್ಯದ ಚಿನ್ನಾಭರಣ, 10 ಕೆ.ಜಿ. ಬೆಳ್ಳಿವಸ್ತುಗಳು, 1 ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿ, ನಾಲ್ಕು ವಾಹನಗಳನ್ನು ಜಪ್ತಿ ಮಾಡಿದ್ದರು. ವೀರೇಂದ್ರ ಅವರ ಸಹೋದರ ಕೆ ಸಿ ನಾಗರಾಜ್ ಮತ್ತವರ ಮಗ ಪೃಥ್ವಿ ಎನ್‌ ರಾಜ್‌ ಅವರ ಬಳಿ ಕೋಟ್ಯಂತರ ಮೌಲ್ಯದ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.

ಇದಲ್ಲದೆ, ವೀರೇಂದ್ರ ಅವರಿಗೆ ಸೇರಿದ 17 ಬ್ಯಾಂಕ್‌ ಖಾತೆಗಳು ಮತ್ತು 2 ಬ್ಯಾಂಕ್ ಲಾಕರ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸೆಪ್ಟೆಂಬರ್ 2ರಂದು ವೀರೇಂದ್ರ ಹಾಗೂ ಇತರರಿಗೆ ಸೇರಿದ ಬೆಂಗಳೂರು ಮತ್ತು ಚಳ್ಳಕೆರೆಯ ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ, ಶೋಧಿಸಿದ್ದರು. ಈ ವೇಳೆ ವೀರೇಂದ್ರ ಅವರ 9 ಬ್ಯಾಂಕ್‌ ಖಾತೆಗಳಲ್ಲಿನ ಅಂದಾಜು 40.69 ಕೋಟಿ ರೂ. ಹಾಗೂ 262 ನಕಲಿ ಖಾತೆಗಳಲ್ಲಿನ 14.46 ಕೋಟಿ ರೂ. ಸೇರಿ ಒಟ್ಟು 55 ಕೋಟಿ ರೂ. ಪತ್ತೆಯಾಗಿತ್ತು. ಇದಲ್ಲದೆ, ಲಾಕರ್‌ಗಳಿಂದ 24 ಕೆ.ಜಿ. ಚಿನ್ನ ಹಾಗೂ 17 ವಜ್ರದ ಉಂಗುರುಗಳು, 9 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿರುವುದಾಗಿ ವರದಿಯಾಗಿತ್ತು.

Kannada Bar & Bench
kannada.barandbench.com