ವಕೀಲರ ಪರಿಷತ್‌ನ ಅಭಿನಂದನಾ ಕಾರ್ಯಕ್ರಮದಲ್ಲಿ ಸಿಜೆಐ ರಮಣ ಪ್ರಸ್ತಾಪಿಸಿದ ಏಳು ಪ್ರಮುಖ ಅಂಶಗಳು

ತನ್ನನ್ನು ಸನ್ಮಾನಿಸಲು ಆಯೋಜಿಸಿರುವ ಈ ಕಾರ್ಯಕ್ರಮವು ತನ್ನನ್ನು ಮತ್ತಷ್ಟು ವಿಮರ್ಶಾತ್ಮಕವಾಗಿರುವಂತೆ ಎಚ್ಚರಿಸಿದ್ದು, ತನಗೆ ನೀಡಿರುವ ಜವಾಬ್ದಾರಿಯನ್ನು ಎತ್ತಿಹಿಡಿಯಲು ಕಟಿಬದ್ಧವಾಗಿರುವಂತೆ ಮಾಡಿದೆ ಎಂದು ಸಿಜೆಐ ರಮಣ ಹೇಳಿದ್ದಾರೆ.
7 things CJI NV Ramana said at BCI felicitation event
7 things CJI NV Ramana said at BCI felicitation event

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು, ಕೇಂದ್ರ ಕಾನೂನು ಸಚಿವ ಕಿರೆಣ್‌ ರಿಜುಜು ಮತ್ತು ಅತ್ಯುನ್ನತ ಕಾನೂನು ಅಧಿಕಾರಿಗಳ ಸಮ್ಮುಖದಲ್ಲಿ ಶನಿವಾರ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಸಿಜೆಐ ರಮಣ ಅವರು ನ್ಯಾಯಾಲಯಗಳಲ್ಲಿನ ಮೂಲಸೌಲಭ್ಯ ಕೊರತೆಗಳ ಬಗ್ಗೆ ಮಾತನಾಡಿದ್ದಲ್ಲದೇ ವಕೀಲರ ಪರಿಷತ್‌ನ ಯುವ ವಕೀಲರು ಹಿರಿಯರು ಮತ್ತು ಮಹಿಳಾ ಸಹೋದ್ಯೋಗಿಗಳನ್ನು ಗೌರವಿಸಬೇಕು ಎಂದು ಬುದ್ದಿವಾದ ಹೇಳಿದರು.

ಕಾರ್ಯಕ್ರಮದಲ್ಲಿ ಸಿಜೆಐ ರಮಣ ಅವರು ಪ್ರಸ್ತಾಪಿಸಿದ ಪ್ರಮುಖ ಏಳು ವಿಚಾರಗಳು ಇಂತಿವೆ:

  • ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳಾಗಿದ್ದು, ಎಲ್ಲಾ ವಲಯಗಳಲ್ಲೂ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಸಿಗಬೇಕು ಎಂದು ಬಯಸಲಾಗುತ್ತದೆ. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ನಾವು ಶೇ. 11ರಷ್ಟು ಮೀಸಲಾತಿ ಮಾತ್ರ ಸಾಧಿಸಿದ್ದೇವೆ.

  • ಕಾನೂನು ವೃತ್ತಿಯ ಕಾರ್ಪೊರೇಟೀಕರಣ – ಹಲವು ಪ್ರತಿಭಾವಂತ ವಕೀಲರು ಕಾನೂನು ಸಂಸ್ಥೆಗಳಿಗೆ ಸೇರ್ಪಡೆಯಾಗುತ್ತಿದ್ದಾರೆ. ಇದರಿಂದ ಸಾಂಪ್ರದಾಯಿಕ ಪ್ರಾಕ್ಟೀಸ್‌ನಲ್ಲಿ ಕೊರತೆ ಉಂಟಾಗುತ್ತಿದೆ. ಸಾಮಾನ್ಯ ಜನರು ಈ ಕಾನೂನು ಸಂಸ್ಥೆಗಳಿಗೆ ಹಣ ಪಾವತಿಸುವಷ್ಟು ಸಮರ್ಥರಾಗಿಲ್ಲ. ಹೀಗಾಗಿ, ಲಕ್ಷಾಂತರ ಜನರು ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಲಾಗುತ್ತಿಲ್ಲ.

  • ನ್ಯಾಯಾಂಗ ವ್ಯವಸ್ಥೆಯು ಮೂಲಸೌಲಭ್ಯ ಹಾಗೂ ನ್ಯಾಯಾಧೀಶರ ಕೊರತೆಯನ್ನು ಮತ್ತು ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಇದು ಕಟು ಸತ್ಯ. ಭಾರತಕ್ಕೆ ರಾಷ್ಟ್ರೀಯ ನ್ಯಾಯಾಂಗ ಮೂಲಸೌಕರ್ಯ ಆಯೋಗ ಬೇಕಿದೆ. ಮಹಿಳೆಯರಿಗೆ ಶೌಚಾಲಯಗಳಿಲ್ಲದಿರುವುದನ್ನು ನನ್ನ ಹೈಕೋರ್ಟ್‌ ದಿನಗಳಲ್ಲಿ ಕಣ್ಣಾರೆ ಕಂಡಿದ್ದೇನೆ.

  • ವಕೀಲರು ಆಲ್‌ರೌಂಡರ್‌ ರೀತಿ ಬಹುಮುಖ ಪ್ರತಿಭೆ ಹೊಂದಿರಬೇಕು. ಅರ್ಥಶಾಸ್ತ್ರ, ಕಾನೂನು, ಸಾಹಿತ್ಯ ಇತ್ಯಾದಿ ಕ್ಷೇತ್ರಗಳ ಜ್ಞಾನ ಹೊಂದಿರಬೇಕು. ಅಗತ್ಯವಿರುವವರು, ಬಡವರು ಮತ್ತ ಅಶಕ್ತರಿಗೆ ಸಹಾಯ ಮಾಡುವಂತೆ ನಾನು ನಿಮ್ಮನ್ನು ಕೋರುತ್ತೇನೆ. ದಯವಿಟ್ಟು ಅಸಹಾಯಕರಿಗೆ ಕಾನೂನು ಸೇವೆ ಒದಗಿಸಿ.

  • ಹಿರಿತನಕ್ಕೆ ಅಪಾರವಾದ ತೂಕವಿದೆ. ಹಿರಿಯರನ್ನು ಗೌರವಿಸಿ… ಮಹಿಳಾ ಸಹೋದ್ಯೋಗಿಗಳಿಗೆ ಗೌರವ ನೀಡಿ, ಅವರನ್ನು ಘನತೆಯಿಂದ ನೋಡಿ ಎಂದು ಪರಿಷತ್‌ನ ಯುವ ವಕೀಲರಿಗೆ ಕರೆ ನೀಡಿದ ಸಿಜೆಐ. ನ್ಯಾಯಾಂಗ ಕ್ಷೇತ್ರದ ಮುಂಚೂಣಿ ಸಾಲಿನಲ್ಲಿ ಇರುವವರು ನೀವು (ಯುವಕರು). ಕುತಂತ್ರ ಮತ್ತು ದುರುದ್ದೇಶಪೂರಿತ ದಾಳಿಗಳಿಂದ ನ್ಯಾಯಾಂಗವನ್ನು ನೀವು ರಕ್ಷಿಸಬೇಕು ಎಂದರು.

  • ಸಂಪರ್ಕದ್ದು ದೊಡ್ಡ ಸಮಸ್ಯೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇಂಟರ್‌ನೆಟ್‌ ಸಂಪರ್ಕವನ್ನು ಹೆಚ್ಚಿಸಬೇಕು ಎಂದು ಕಾನೂನು ಸಚಿವರಿಗೆ ತಿಳಿಸಿದ್ದೇವೆ. ಗ್ರಾಮೀಣ ಪ್ರದೇಶದ ತಾಲ್ಲೂಕು ಕೇಂದ್ರಗಳಲ್ಲಿ ಐಎಸ್‌ಪಿ ಕಲ್ಪಿಸಿದರೆ ವಕೀಲರು ಕಲಾಪದಲ್ಲಿ ಭಾಗವಹಿಸಬಹುದು. ಹೀಗಾಗಿ ಈ ಸೇವೆ ಕಲ್ಪಿಸುವಂತೆ ನಾನು ಕಾನೂನು ಸಚಿವರನ್ನು ಕೋರುತ್ತೇನೆ. ಜಿಲ್ಲಾ ವಕೀಲರುಗಳು ಗ್ರಾಮೀಣ ನ್ಯಾಯಾಲಯಗಳಲ್ಲಿ ವಾದಿಸುತ್ತಾರೆ.

  • ವಕೀಲ ವರ್ಗ ಮತ್ತು ನ್ಯಾಯಪೀಠ ಆಗಾಗ್ಗೆ ಸಮಾಲೋಚನೆ ನಡೆಸಬೇಕು. ನಾವು ದಂತಗೋಪುರದಲ್ಲಿ ಇಲ್ಲ ಎಂದು ನಾನು ಭಾವಿಸಿದ್ದೇನೆ ಎಂದ ಸಿಜೆಐ.

Related Stories

No stories found.
Kannada Bar & Bench
kannada.barandbench.com