ಕಳೆದ ಆರು ವರ್ಷಗಳಲ್ಲಿ ನೇಮಕಗೊಂಡ ಹೈಕೋರ್ಟ್ ನ್ಯಾಯಮೂರ್ತಿಗಳಲ್ಲಿ ಶೇ 3ರಷ್ಟು ಮಂದಿ ಮಾತ್ರ ಪರಿಶಿಷ್ಟ ಜಾತಿ (ಎಸ್‌ಸಿ) ವರ್ಗಕ್ಕೆ ಸೇರಿದವರಿದ್ದು ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯದ ಪ್ರಾತಿನಿಧ್ಯ ಕೇವಲ ಶೇ 1.5ರಷ್ಟಿದೆ ಎಂದು ಸಂಸದೀಯ ಸಮಿತಿ ವರದಿ ಬಹಿರಂಗಪಡಿಸಿದೆ.
ವರದಿಯ ಪ್ರಕಾರ, 2018 ರಿಂದ ವಿವಿಧ ಹೈಕೋರ್ಟ್‌ಗಳಿಗೆ ಒಟ್ಟು 601 ನ್ಯಾಯಮೂರ್ತಿಗಳನ್ನು ನೇಮಿಸಲಾಗಿದೆ. ಇವರಲ್ಲಿ 457 (76%) ಸಾಮಾನ್ಯ ವರ್ಗಕ್ಕೆ ಸೇರಿದವರು, 18 ಎಸ್‌ಸಿ ಮತ್ತು 9 ಮಂದಿ ಎಸ್‌ಟಿ ಸಮುದಾಯದವರು.
ಇತರೆ ಹಿಂದುಳಿದ ವರ್ಗಗಳ (ಒಬಿಸಿ) ನ್ಯಾಯಮೂರ್ತಿಗಳ ಸಂಖ್ಯೆ 72 (11.9%) ಮತ್ತು ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ 91 (15.1%). ಕೇವಲ 32 (5.3%) ನ್ಯಾಯಮೂರ್ತಿಗಳು ಅಲ್ಪಸಂಖ್ಯಾತ ಸಮುದಾಯಗಳಿಂದ ಬಂದವರು. 13 ನ್ಯಾಯಮೂರ್ತಿಗಳ ಸಾಮಾಜಿಕ ಸ್ಥಾನಮಾನದ ಮಾಹಿತಿ ಲಭ್ಯವಾಗಿಲ್ಲ.
ರಾಜ್ಯಸಭಾ ಸದಸ್ಯ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ನೇತೃತ್ವದ ಸಮಿತಿ ಸಂಸತ್ತಿನ ಉಭಯ ಸದನಗಳಲ್ಲಿ 'ನ್ಯಾಯಾಂಗ ಪ್ರಕ್ರಿಯೆಗಳು ಮತ್ತು ಅವುಗಳ ಸುಧಾರಣೆ' ಕುರಿತ ತನ್ನ 133ನೇ ವರದಿಯನ್ನು ಆಗಸ್ಟ್ 7, 2023ರಂದು ಮಂಡಿಸಿದ ವೇಳೆ ಈ ವಿಚಾರ ತಿಳಿಸಿದೆ.
ಉನ್ನತ ನ್ಯಾಯಾಂಗದಲ್ಲಿ ಸಮಾಜದ ಅಂಚಿನಲ್ಲಿರುವ ವರ್ಗಗಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಪ್ರಾತಿನಿಧ್ಯ ತೀರಾ ಕೆಳಮಟ್ಟದಲ್ಲಿದೆ ಎಂದು ಸಂಸತ್ತಿನ ಉಭಯ ಸದನಗಳ 31 ಸದಸ್ಯರನ್ನು ಒಳಗೊಂಡ ಸಮಿತಿ ವಿವರಿಸಿದೆ.
ವರದಿಯ ಪ್ರಮುಖಾಂಶಗಳು
ನ್ಯಾಯಮೂರ್ತಿಗಳನ್ನು ನೇಮಿಸುವುದು ಕೊಲಿಜಿಯಂ ಆದ್ದರಿಂದ ಸಮಾಜದ ಆ ವರ್ಗಗಳಿಗೆ ಸಾಕಷ್ಟು ಪ್ರಾತಿನಿಧ್ಯ ಒದಗಿಸುವ ಜವಾಬ್ದಾರಿ ಅದರ ಮೇಲಿದೆ.
ಉನ್ನತ ನ್ಯಾಯಾಂಗದಲ್ಲಿ ಎಸ್‌ಸಿ/ಎಸ್‌ಟಿ/ಒಬಿಸಿಗಳ ಪ್ರಾತಿನಿಧ್ಯ ಒದಗಿಸುವುದಕ್ಕಾಗಿ ಸಾಂವಿಧಾನಿಕ ತಿದ್ದುಪಡಿ ಮಾಡುವ ಅಗತ್ಯವಿದೆ.
ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ʼವಿವಿಧತೆಯ ಕೊರತೆʼ ಇದೆ.
ಎಸ್‌ಸಿ, ಎಸ್‌ಟಿ, ಒಬಿಸಿ, ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಪ್ರಾತಿನಿಧ್ಯವು ಅಪೇಕ್ಷಿತ ಮಟ್ಟಕ್ಕಿಂತ ತೀರಾ ಕೆಳಗಿದ್ದು ದೇಶದ ಸಾಮಾಜಿಕ ವೈವಿಧ್ಯವನ್ನು ಬಿಂಬಿಸುವುದಿಲ್ಲ.
ಸಮಾಜದಂಚಿನ ಎಲ್ಲಾ ವರ್ಗಗಳಿಗೆ ಪ್ರಾತಿನಿಧ್ಯ ನೀಡುವುದು ಈಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿದೆ.
ನ್ಯಾಯಮೂರ್ತಿಗಳ ಹುದ್ದೆಗೆ ಸಾಕಷ್ಟು ಸಂಖ್ಯೆಯ ಮಹಿಳೆಯರು ಮತ್ತು ಸಮಾಜದ ಅಂಚಿನಲ್ಲಿರುವ ಅಭ್ಯರ್ಥಿಗಳ ಹೆಸರನ್ನು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಕೊಲಿಜಿಯಂಗಳು ಶಿಫಾರಸು ಮಾಡಬೇಕು.
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಿಗೆ 2018 ಕ್ಕಿಂತ ಮೊದಲು ನೇಮಕಗೊಂಡ ನ್ಯಾಯಮೂರ್ತಿಗಳ ಸಾಮಾಜಿಕ ಸ್ಥಾನಮಾನದ ಬಗ್ಗೆ ನ್ಯಾಯಾಂಗ ಇಲಾಖೆ ಮಾಹಿತಿ ಸಂಗ್ರಹಿಸಬೇಕು.