ಹಿಂದೂ ವಿವಾಹ ಕಾಯಿದೆಯಡಿ ಹಿಂದೂಗಳು ಮಾತ್ರ ಮದುವೆಯಾಗಬಹುದಾಗಿದ್ದು ಅಂತರ್ ಧರ್ಮೀಯ ಜೋಡಿ ನಡುವಿನ ವಿವಾಹ ಅನೂರ್ಜಿತವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ [ಅಜಯ್ ಪಿ ಮ್ಯಾಥ್ಯೂ ಮತ್ತು. ತೆಲಂಗಾಣ ರಾಜ್ಯ ಇನ್ನಿತರರ ನಡುವಣ ಪ್ರಕರಣ].
ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಫೆಬ್ರವರಿಯಲ್ಲಿ ಪ್ರಕರಣದ ಅಂತಿಮ ವಿಚಾರಣೆ ನಡೆಸಲಿದೆ.
ಮಹಿಳೆಯ ಮಾದಕ ವ್ಯಸನ ಹಾಗೂ ಮದ್ಯಪಾನ ಚಟ ತಿಳಿದು ತಾನು ಆಕೆಯನ್ನು ಮದುವೆಯಾಗಲು ನಿರಾಕರಿಸಿದ ನಂತರ ಆಕೆ ಸುಮ್ಮನೆ ತನ್ನನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಭಾರತೀಯ-ಅಮೆರಿಕನ್ ಕ್ರೈಸ್ತ ವ್ಯಕ್ತಿ ವಾದಿಸಿದ್ದರು.
ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯ ವಿಧಿ ವಿಧಾನ ಪೂರ್ಣಗೊಳಿಸಿದ್ದರೂ ಆ ವ್ಯಕ್ತಿ ಅಮೆರಿಕದಲ್ಲಿ ಇನ್ನೊಬ್ಬ ಭಾರತೀಯ ಮಹಿಳೆಯನ್ನು ಮದುವೆಯಾಗಿದ್ದಾನೆ ಎಂದು ಮಹಿಳೆ ದೂರಿದ್ದರು.
ವಿಚಾರಣೆ ವೇಳೆ ನ್ಯಾ. ಜೋಸೆಫ್ ಅವರು "ಮದುವೆ ಅನೂರ್ಜಿತವಾಗಿದೆ” ಎಂದರು. ಇದಕ್ಕೆ ದನಿಗೂಡಿಸಿದ ನ್ಯಾ ನಾಗರತ್ನ ಅವರು” ಹಿಂದೂ [ವಿವಾಹ] ಕಾಯಿದೆಯಡಿ ಹಿಂದೂಗಳು ಮಾತ್ರ ಮದುವೆಯಾಗಬಹುದು" ಎಂದರು.
ಐಪಿಸಿ ಸೆಕ್ಷನ್ 494ರ ಅಡಿಯಲ್ಲಿ ಅರ್ಜಿದಾರರ ವಿರುದ್ಧ ಹೈದರಾಬಾದ್ ನ್ಯಾಯಾಲಯವೊಂದರಲ್ಲಿ ಹೂಡಲಾಗಿದ್ದ ಪ್ರಕರಣ ರದ್ದುಗೊಳಿಸಲು ತೆಲಂಗಾಣ ಹೈಕೋರ್ಟ್ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸೆಕ್ಷನ್ 494ರ ಪ್ರಕಾರ ಮೊದಲ ಸಂಗಾತಿಯೊಂದಿಗೆ ಮದುವೆ ಊರ್ಜಿತವಾಗಿದ್ದಾಗಲೇ ಇನ್ನೊಬ್ಬರೊಂದಿಗೆ ಎರಡನೇ ವಿವಾಹವಾದರೆ ಏಳು ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
ಅರ್ಜಿಯಲ್ಲಿ ʼಮತಾಂತರವಿಲ್ಲದೆ ಹಿಂದೂ ವಿಧಿ- ವಿಧಾನಗಳ ಪ್ರಕಾರ ನಡೆದ ಅಂತರ್ ಧರ್ಮೀಯ ವ್ಯಕ್ತಿಗಳ ನಡುವಿನ ವಿವಾಹವು ಕಾನೂನಿನ ದೃಷ್ಟಿಯಲ್ಲಿ ಮಾನ್ಯವೇ?ʼ ಹಾಗೂ ʼವಿಶೇಷ ವಿವಾಹ ಕಾಯಿದೆಯಡಿ ವಿವಾಹ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ವಿವಾಹ ಮಾಡಿಕೊಳ್ಳಬಹುದೇ?ʼ ಎಂದು ಪ್ರಶ್ನಿಸಲಾಗಿತ್ತು.