
ಸಂತಾನವಿಲ್ಲದ ಹಿರಿಯ ನಾಗರಿಕರನ್ನು ಪಾಲಿಸುವ ಜವಾಬ್ದಾರಿ ಕಾನೂನುಬದ್ಧ ಉತ್ತರಾಧಿಕಾರಿಗಳದ್ದೇ ಆಗಿರುತ್ತದೆ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ.
ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ- 2007ರ (ಕಾಯಿದೆ) ಸೆಕ್ಷನ್ 2(ಜಿ) ಅಡಿಯಲ್ಲಿ ಹೆಂಡತಿಗೆ ಸಂಬಂಧಿ ಎನ್ನುವ ಅರ್ಹತೆ ಇಲ್ಲದ ಕಾರಣ ಆಕೆ ತನ್ನ ಪತಿಯ ಚಿಕ್ಕಮ್ಮನ ಪೋಷಣೆ ಮಾಡುವಂತೆ ನಿರ್ದೇಶಿಸಲಾಗದು ಎಂದು ನ್ಯಾಯಾಲಯ ಹೇಳಿದೆ.
ವೈಯಕ್ತಿಕ ಕಾನೂನಿನ ಅಡಿಯಲ್ಲಿ ವ್ಯಕ್ತಿ ಕಾನೂನುಬದ್ಧ ಉತ್ತರಾಧಿಕಾರಿಯಾಗಿರದೆ, ವೃದ್ಧರ ಆಸ್ತಿ ಹೊಂದಿದ್ದ ಮಾತ್ರಕ್ಕೆ ಆತ ಆ ವೃದ್ಧರ ಪಾಲನೆಗೆ ಜವಾಬ್ದಾರನಾಗುವುದಿಲ್ಲ ಎಂದು ನ್ಯಾಯಮೂರ್ತಿ ಸತೀಶ್ ನಿನನ್ ಮತ್ತು ನ್ಯಾಯಮೂರ್ತಿ ಪಿ ಕೃಷ್ಣ ಕುಮಾರ್ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.
“… ಹಿರಿಯ ನಾಗರಿಕರ ಕಾನೂನುಬದ್ಧ ಉತ್ತರಾಧಿಕಾರಿ ಅಲ್ಲದ ವ್ಯಕ್ತಿ ಹಿರಿಯ ನಾಗರಿಕರ ಆಸ್ತಿ ಹೊಂದಿದ್ದಾರೆ ಅಥವಾ ಅವರ ಆಸ್ತಿಯ ಉತ್ತರಾಧಿಕಾರಿಯಾಗಲಿದ್ದಾರೆ ಎಂಬ ಕಾರಣಕ್ಕೆ ಕಾಯಿದೆಯಡಿ ಸಂಬಂಧಿ ಆಗುವುದಿಲ್ಲ. ಮಕ್ಕಳಿಲ್ಲದ ಹಿರಿಯ ನಾಗರಿಕರ ಆಸ್ತಿಯನ್ನು ಹೊಂದಿರುವ ಅಥವಾ ಆನುವಂಶಿಕವಾಗಿ ಪಡೆಯುವ ವ್ಯಕ್ತಿಯನ್ನು ಅವರ ಸಂಬಂಧಿ ಎಂದು ಅರ್ಥೈಸಿಕೊಳ್ಳಬೇಕು ಎಂದು ನೀಡಲಾಗಿರುವ ತೀರ್ಪನ್ನು ಒಪ್ಪಲಾಗದು. ಹಾಗೆ ಮಾಡುವುದು ಸರಳ ಭಾಷೆಯಲ್ಲಿ ಹೇಳಲಾಗಿರುವ ಸೆಕ್ಷನ್‌ಗೆ ಮಾಡುವ ಅನ್ಯಾಯವಾಗುತ್ತದೆ” ಎಂದು ನ್ಯಾಯಾಲಯ ವಿವರಿಸಿದೆ.
ಮಕ್ಕಳಿಲ್ಲದ ಹಿರಿಯ ನಾಗರಿಕರೊಬ್ಬರು 1992ರಲ್ಲಿ ತನ್ನ ಆಸ್ತಿಯನ್ನು ತನ್ನ ಸೋದರಳಿಯನಿಗೆ ದಾನ ಮಾಡಿದ್ದರು. 2008ರಲ್ಲಿ ಸೋದರಳಿಯ ನಿಧನರಾದ ನಂತರ, ಆಸ್ತಿ ಅವರ ಪತ್ನಿಗೆ, ಅಂದರೆ ಮೇಲ್ಮನವಿದಾರರಿಗೆ ಹಸ್ತಾಂತರವಾಗಿತ್ತು. ಆದರೆ ಕಾಯಿದೆಯ ಸೆಕ್ಷನ್ 4(4)ರ ಅಡಿಯಲ್ಲಿ ಮಕ್ಕಳಿಲ್ಲದ ಹಿರಿಯ ನಾಗರಿಕರ ಆಸ್ತಿ ಹೊಂದಿರುವವರೇ ಅವರನ್ನು ಪಾಲಿಸಬೇಕು ಎಂದು ವಾದಿಸಿ ಹಿರಿಯ ನಾಗರಿಕರು ಮೇಲ್ಮನವಿದಾರರಿಂದ ಜೀವನಾಂಶ ಕೋರಿದ್ದರು.
ಚಿಕ್ಕಮ್ಮನನ್ನು ಪಾಲಿಸುವ ಜವಾಬ್ದಾರಿ ಮೇಲ್ಮನವಿದಾರರದ್ದು ಎಂದು ಪಾಲನಾ ನ್ಯಾಯಮಂಡಳಿ ತೀರ್ಪು ನೀಡಿತ್ತು. ಇದನ್ನು ಮೇಲ್ಮನವಿ ಪ್ರಾಧಿಕಾರ ಬಳಿಕ ಕೇರಳ ಹೈಕೋರ್ಟ್ ಏಕಸದಸ್ಯ ಪೀಠ ಎತ್ತಿ ಹಿಡಿದಿತ್ತು.
ಮಕ್ಕಳಿಲ್ಲದ ಹಿರಿಯ ನಾಗರಿಕರ ಆಸ್ತಿಯನ್ನು ಹೊಂದಿರುವ ಅಥವಾ ಆನುವಂಶಿಕವಾಗಿ ಪಡೆಯುವ ಸಾಧ್ಯತೆ ಇರುವ ಯಾರೇ ಆದರೂ 'ಸಂಬಂಧಿ' ಎಂದು ಅರ್ಹತೆ ಪಡೆಯುತ್ತಾರೆ. ಆದ್ದರಿಂದ, ಹಿರಿಯ ನಾಗರಿಕರನ್ನು ಪಾಲನೆ ಮಾಡಬೇಕು ಎಂದು ಏಕ-ಸದಸ್ಯ ಪೀಠ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ವಾದ ಆಲಿಸಿದ ನ್ಯಾಯಾಲಯ ಮೇಲ್ಮನವಿದಾರರು 'ಸಂಬಂಧಿ' ಎಂಬ ಶಾಸನಬದ್ಧ ವ್ಯಾಖ್ಯಾನದಿಂದ ಹೊರತಾಗಿದ್ದು ಕಾಯಿದೆಯ ಸೆಕ್ಷನ್ 4(4) ಅಡಿಯಲ್ಲಿ ಜೀವನಾಂಶ ಒದಗಿಸುವಂತೆ ಅವರನ್ನು ಒತ್ತಾಯಿಸಲಾಗದು ಎಂದು ನ್ಯಾಯಾಲಯ ತೀರ್ಪು ನೀಡಿತು. ಆದ್ದರಿಂದ ಮೇಲ್ಮನವಿ ಪುರಸ್ಕರಿಸಿದ ಅದು ಏಕಸದಸ್ಯ ಪೀಠದ ತೀರ್ಪನ್ನು ರದ್ದುಗೊಳಿಸಿತು.
ಆದರೆ ದಾನಪತ್ರದ ನಿಯಮಾವಳಿ ಉಲ್ಲಂಘನೆಗೆ ಸಂಬಂಧಿಸಿದಂತೆ ಕಾನೂನಿನಡಿ ಲಭ್ಯ ಇರುವ ಉಳಿದ ಪರಿಹಾರ ಪಡೆಯುವ ಹಕ್ಕನ್ನು ಅದು ಚಿಕ್ಕಮ್ಮನಿಗೆ ಮುಕ್ತವಾಗಿ ಇರಿಸಿತು.