ಪೋಷಕರಿಗೆ ಮಾತ್ರ ಆಸ್ತಿ ವರ್ಗಾವಣೆ ಹಕ್ಕು ರದ್ದತಿ ಕೋರಿಕೆ ಅಧಿಕಾರ: ಹೈಕೋರ್ಟ್‌

ಅರ್ಜಿದಾರರು ತಮ್ಮ ಸ್ಥಿರಾಸ್ತಿ ವ್ಯಾಜ್ಯಕ್ಕೆ ಸಿವಿಲ್‌ ನ್ಯಾಯಾಲಯದಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದ ಹೈಕೋರ್ಟ್‌.
Karnataka High Court
Karnataka High Court
Published on

ಪೋಷಕರ ನಿರ್ವಹಣೆ, ಕಲ್ಯಾಣ ಹಾಗೂ ಹಿರಿಯ ನಾಗರಿಕರ ಕಾಯಿದೆ–2007ರ ಸೆಕ್ಷನ್‌ 16ರ ಅಡಿ ಆಸ್ತಿ ವರ್ಗಾವಣೆ ಹಕ್ಕು ರದ್ದುಪಡಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸುವ ಅಧಿಕಾರ ಪೋಷಕರಿಗೆ ಮಾತ್ರ ಇದೆಯೇ ಹೊರತು ಮಕ್ಕಳಿಗಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಸ್ಪಷ್ಟಪಡಿಸಿದೆ.

ಬೆಂಗಳೂರಿನ ಪಿ ಕೃಷ್ಣ ಮತ್ತು ಅವರ ಮಕ್ಕಳು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ನೇತೃತ್ವದ ವಿಭಾಗೀಯ ಪೀಠವು “ಅರ್ಜಿದಾರರು ಬೇಕಿದ್ದರೆ ತಮ್ಮ ಸ್ಥಿರಾಸ್ತಿ ವ್ಯಾಜ್ಯಕ್ಕೆ ಸಿವಿಲ್‌ ನ್ಯಾಯಾಲಯದಲ್ಲಿ ಪರಿಹಾರ ಕಂಡುಕೊಳ್ಳಬಹುದು” ಎಂದು ನಿರ್ದೇಶಿಸಿದೆ.

“ಹಿರಿಯ ನಾಗರಿಕರ ಕಾಯಿದೆಯ ಸೆಕ್ಷನ್‌ 23ರ ಪ್ರಕಾರ ಹಿರಿಯ ನಾಗರಿಕರು ಅಥವಾ ಪೋಷಕರು ತಮ್ಮ ಆಸ್ತಿಯನ್ನು ವರ್ಗಾವಣೆ ಮಾಡಿದ್ದರೆ, ಆಗ ಮಕ್ಕಳು ತಮ್ಮ ದೈಹಿಕ ಅಗತ್ಯ ಮತ್ತು ಮೂಲಸೌಕರ್ಯ ಒದಗಿಸಬೇಕೆಂಬ ಷರತ್ತುಗಳನ್ನು ವಿಧಿಸಬಹುದು. ಒಂದು ವೇಳೆ ಅವರು ಆ ಷರತ್ತುಗಳನ್ನು ಪೂರೈಸದೆ ಹೋದಲ್ಲಿ ಉಪ ವಿಭಾಗಾಧಿಕಾರಿ ಮುಂದೆ ದಾನ ಪತ್ರ (ಗಿಫ್ಟ್‌ ಡೀಡ್‌) ರದ್ದು ಕೋರಿ ಅರ್ಜಿ ಸಲ್ಲಿಸಬಹುದು. ಇದರ ಅನ್ವಯ ಉಪವಿಭಾಗಾಧಿಕಾರಿ ಅಥವಾ ಜಿಲ್ಲಾಧಿಕಾರಿ ಸೆಕ್ಷನ್‌ 16ರ ಅಡಿ ಅವರ ಅರ್ಜಿಗಳನ್ನು ಪರಿಗಣಿಸಿ ಸೂಕ್ತ ಆದೇಶ ಹೊರಡಿಸಬಹುದು” ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಕೃಷ್ಣ 2019ರ ಫೆಬ್ರುವರಿ 27ರಂದು ಆಡುಗೋಡಿಯಲ್ಲಿರುವ ತಮ್ಮ ಸ್ಥಿರಾಸ್ತಿಯಲ್ಲಿ 1,500 ಚದರ ಅಡಿ ಜಾಗವನ್ನು ಹಿರಿಯ ಪುತ್ರ ಅಯ್ಯಪ್ಪ ಅವರ ಹೆಸರಿಗೆ ದಾನ ಮಾಡಿದ್ದರು. ಕೆಲವು ವರ್ಷಗಳ ಬಳಿಕ ಅವರು, ‘ನನ್ನಿಂದ ಅಕ್ರಮವಾಗಿ ದಾನ ಮಾಡಿಸಿಕೊಳ್ಳಲಾಗಿದೆ. ನನ್ನ ಹಿರಿಯ ಪುತ್ರ ನನಗೆ ಯಾವುದೇ ಸೌಕರ್ಯ ಒದಗಿಸುತ್ತಿಲ್ಲ. ಹೀಗಾಗಿ ದಾನ ಪತ್ರ ರದ್ದು ಮಾಡಬೇಕು ಎಂದು ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಇದನ್ನು ಮಾನ್ಯ ಮಾಡಿದ್ದ ಉಪ ವಿಭಾಗಾಧಿಕಾರಿ 2023ರ ಫೆಬ್ರುವರಿ 27ರಂದು ದಾನ ಪತ್ರ ರದ್ದು ಮಾಡಿದ್ದರು.

ಇದನ್ನು ಪ್ರಶ್ನಿಸಿ ಅಯ್ಯಪ್ಪ ಅವರು ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಮಧ್ಯೆ, 2023ರ ಜುಲೈ 14ರಂದು ಕೃಷ್ಣ ಆಸ್ತಿಯನ್ನು ತಮ್ಮ ಎರಡನೇ ಪುತ್ರ ಕೆ ಲೋಕೇಶ್‌ ಹೆಸರಿಗೆ ದಾನ ಮಾಡಿಕೊಟ್ಟಿದ್ದರು. ಮೊದಲನೇ ಪುತ್ರ ಸಲ್ಲಿಸಿದ್ದ ಮೇಲ್ಮನವಿ ಬಾಕಿ ಇದ್ದಾಗಲೇ ಕೃಷ್ಣ ಸಾವನ್ನಪ್ಪಿದ್ದರು. ಅವರ ಜಾಗದಲ್ಲಿ ಲೋಕೇಶ್‌ ಮತ್ತ ಅವರ ಸಹೋದರಿ ಆಸ್ತಿಗೆ ಉತ್ತರಾಧಿಕಾರಿಗಳಾದರು.

ಈ ಮಧ್ಯೆ, ಜಿಲ್ಲಾಧಿಕಾರಿ 2023ರ ಆಗಸ್ಟ್ 14ರಂದು ಅಯ್ಯಪ್ಪ ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿದ್ದರು. ಈ ಆದೇಶವನ್ನು ಲೋಕೇಶ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು ಜಿಲ್ಲಾಧಿಕಾರಿ ಆದೇಶವನ್ನು ರದ್ದುಪಡಿಸಿ, ಹೊಸದಾಗಿ ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ನಿರ್ದೇಶಿಸಿತು.

Kannada Bar & Bench
kannada.barandbench.com