ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಸರ್ಕಾರ ರಚಿಸಲು ಕೋಲಾರದ ಜೆಡಿಎಸ್ ಶಾಸಕ ಕೆ ಶ್ರೀನಿವಾಸಗೌಡ ಅವರಿಗೆ ರೂ. 30 ಕೋಟಿ ಲಂಚದ ಆಮಿಷವೊಡ್ಡಿದ ಆರೋಪ ಸಂಬಂಧ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ್ ನಾರಾಯಣ, ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎಸ್ ಆರ್ ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಮತ್ತು ಶ್ರೀನಿವಾಸ ಗೌಡ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾರಿಗೊಳಿಸಿದ್ದ ಸಮನ್ಸ್ ಅನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್ ರದ್ದು ಕೋರಿ ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಮೂವರು ಶಾಸಕರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
“ಸಮನ್ಸ್ ಜಾರಿಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಮಾತ್ರ ರದ್ದುಪಡಿಸಲಾಗುತ್ತಿದ್ದು, ಆರೋಪಿತರ ವಿರುದ್ಧದ ಖಾಸಗಿ ದೂರನ್ನು ರದ್ದುಪಡಿಸಿಲ್ಲ. ದೂರುದಾರರು ಪೂರ್ವಾನುಮತಿ ಪಡೆದ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕಾರ ಅಗತ್ಯ ಆದೇಶ ಹೊರಡಿಸಬಹುದು” ಎಂದು ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
“ನಿಯಮಗಳ ಪ್ರಕಾರ ಪೂರ್ವಾನುಮತಿ ಪಡೆಯದೇ ದಾಖಲಿಸಿದ ದೂರನ್ನು ಸಂಜ್ಞಾನಕ್ಕೆ ತೆಗೆದುಕೊಂಡು, ದೂರುದಾರರ ಪ್ರಮಾಣೀಕೃತ ಹೇಳಿಕೆ ದಾಖಲಿಸಿಕೊಂಡು ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಆದರೆ, ಪ್ರಕರಣವನ್ನು ಸಂಜ್ಞಾನಕ್ಕೆ (ಕಾಗ್ನಿಸೆನ್ಸ್) ತೆಗೆದುಕೊಂಡು ಸಮನ್ಸ್ ಜಾರಿ ಮಾಡುವ ಮುನ್ನ ಅಥವಾ ದೂರನ್ನು ರದ್ದುಪಡಿಸಬೇಕಿಲ್ಲ ಎಂಬುದಾಗಿ ಮನವರಿಕೆಯಾದ ವೇಳೆ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವಂತೆ ದೂರುದಾರರಿಗೆ ವಿಶೇಷ ನ್ಯಾಯಲಯ ನಿರ್ದೇಶನ ನೀಡಬೇಕಿತ್ತು. ಈ ನಿಯಮ ಪಾಲಿಸದೆ ಸಮನ್ಸ್ ಜಾರಿ ಮಾಡಿರುವುದು ಕಾನೂನು ಬಾಹಿರ ಕ್ರಮ” ಎಂದಿರುವ ಹೈಕೋರ್ಟ್ ಅರ್ಜಿದಾರರ ವಿರುದ್ಧದ ಸಮನ್ಸ್ ರದ್ದುಪಡಿಸಿದೆ.
“ಪೂರ್ವಾನುಮತಿ ಪಡೆದುಕೊಂಡು ಬರುವಂತೆ ದೂರುದಾರರಿಗೆ ನಿರ್ದೇಶನ ನೀಡಬಹುದು. ಪೂರ್ವಾನುಮತಿ ಪಡೆದ ನಂತರ ಸೂಕ್ತ ಆದೇಶ ಹೊರಡಿಸಬಹುದು” ಎಂದು ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ ಕುಂದಿಸಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚಿಸುವುದಕ್ಕಾಗಿ ಪಕ್ಷಾಂತರ ಮಾಡಲು ಕೋಲಾರ ಶಾಸಕ ಶ್ರೀನಿವಾಸ್ ಗೌಡ ಅವರಿಗೆ ಬಿಜೆಪಿ ನಾಯಕರಾದ ಡಾ. ಸಿ ಎನ್ ಅಶ್ವತ್ಥನಾರಾಯಣ, ಎಸ್ ಆರ್ ವಿಶ್ವನಾಥ್ ಮತ್ತು ಸಿ ಪಿ ಯೋಗೇಶ್ವರ್ ಅವರು 30 ಕೋಟಿ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿದ್ದರು. ಮುಂಗಡವಾಗಿ ಐದು ಕೋಟಿ ರೂಪಾಯಿ ಪಾವತಿಸಿದ್ದರು ಎಂದು ಆರೋಪಿಸಲಾಗಿತ್ತು. ಈ ಕುರಿತು ಖಾಸಗಿ ದೂರು ದಾಖಲಿಸಲು ಪೂರ್ವಾನುಮತಿ ನೀಡುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಅಂದಿನ ವಿಧಾನಸಭೆ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು.
ಆದರೆ, ಪೂರ್ವಾನುಮತಿ ನೀಡಲು ತಮಗೆ ಅಧಿಕಾರವಿಲ್ಲ ಎಂದು ತಿಳಿಸಿದ್ದ ಸ್ಪೀಕರ್ ಹಿಂಬರಹ ನೀಡಿದ್ದರು. ಇದರಿಂದ ಪೂರ್ವಾನಮತಿ ಕೋರಿ ರಾಜ್ಯಪಾಲರಿಗೆ ದೂರುದಾರರು ಮನವಿ ಸಲ್ಲಿಸಿದ್ದರು. ಹಲವು ತಿಂಗಳು ಕಳೆದರೂ ಮನವಿ ಆಧರಿಸಿ ರಾಜ್ಯಪಾಲರು ಯಾವುದೇ ತೀರ್ಮಾನ ಕೈಗೊಳ್ಳದ ಕಾರಣಕ್ಕೆ ದೂರುದಾರರು ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಪೂರ್ವಾನುಮತಿಗಾಗಿ ಸಲ್ಲಿಸಿದ ಮನವಿ ಪರಿಗಣಿಸದ ಹಿನ್ನೆಲೆಯಲ್ಲಿ ಡೀಮ್ಡ್ ಪೂರ್ವಾನಮತಿ ದೊರೆತಿದೆ ಎಂಬುದಾಗಿ ಪರಿಗಣಿಸಿದ್ದ ವಿಶೇಷ ನ್ಯಾಯಾಲಯವು ದೂರಿನ ಸಂಬಂಧ ಸಂಜ್ಞಾನ ತೆಗೆದುಕೊಂಡಿತ್ತು. ಹಾಗೆಯೇ, ಆರೋಪಿತ ಶಾಸಕರು ಹಾಗೂ ಸಚಿವರ ವಿರುದ್ಧ ಸಮನ್ಸ್ ಜಾರಿ ಮಾಡಿತ್ತು.