ನ್ಯಾಯಾಂಗದ ಕಾರ್ಯವೈಖರಿ ಕುರಿತಂತೆ ಇಂದಿರಾ ಜೈಸಿಂಗ್ ಹಾಗೂ ನ್ಯಾ. ಸಿಖ್ರಿ ಹೇಳಿದ್ದೇನು?

ಆರ್‌ಟಿಐ ಕೇಂದ್ರ ಮತ್ತು ಮನಿಲೈಫ್ ಪ್ರತಿಷ್ಠಾನ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್‌ ಮತ್ತು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ ಕೆ ಸಿಖ್ರಿ ನ್ಯಾಯಾಂಗ ವ್ಯವಸ್ಥೆ ಕುರಿತು ಮಾತನಾಡಿದರು.
Supreme Court
Supreme Court

“ಬಾಬರಿ ಮಸೀದಿ ಪ್ರಕರಣದಿಂದ ಹಿಡಿದು ನೆನೆಗುದಿಗೆ ಬಿದ್ದಿರುವ ಸಿಎಎ, ಚುನಾವಣಾ ಬಾಂಡ್‌ ಹಾಗೂ ಸಂವಿಧಾನದ 370ನೇ ವಿಧಿ ರದ್ದತಿ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ತನಕ ಮತ್ತು ಕೆಲ ಪತ್ರಕರ್ತರಿಗೆ ತ್ವರಿತವಾಗಿ ಜಾಮೀನು ನೀಡಿ ಉಳಿದವರನ್ನು ನಿರ್ಲಕ್ಷಿಸುತ್ತಿರುವುದನ್ನು ಕಂಡರೆ ನಮಗೆ ಭಾರೀ ಸ್ವ- ಜಾಗರೂಕ ನ್ಯಾಯಾಲಯವೊಂದರ ಬಗ್ಗೆ ಸಾಕ್ಷ್ಯ ದೊರೆಯುತ್ತದೆ” ಎಂದು ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್‌ ಟೀಕಿಸಿದರು.

ಆರ್‌ಟಿಐ ಕೇಂದ್ರ ಮತ್ತು ಮನಿಲೈಫ್‌ ಪ್ರತಿಷ್ಠಾನ ಶನಿವಾರ ಆಯೋಜಿಸಿದ್ದ ʼಬದಲಾಗುತ್ತಿರುವ ಕಾಲಘಟ್ಟದಲ್ಲಿ ನಮ್ಮ ನ್ಯಾಯಾಂಗ ಕಾವಲುಗಾರನ ಜಾಗೃತ ಪಾತ್ರ ವಹಿಸುತ್ತಿದೆಯೇ?” ಕುರಿತಾದ ತೃತೀಯ ವಾರ್ಷಿಕ ವಿಡಿಯೊ ಉಪನ್ಯಾಸ ಕಾರ್ಯಕ್ರಮದಲ್ಲಿ ಸಹ ಭಾಷಣಕಾರರಾಗಿ ಅವರು ಮಾತನಾಡಿದರು.

“ಇತ್ತೀಚಿನ ದಿನಗಳಲ್ಲಿ ಸುಪ್ರೀಂಕೋರ್ಟ್‌ ಬಾಕಿ ಉಳಿದ ಪ್ರಕರಣಗಳಿಗಿಂತಲೂ ಕೆಲ ಪ್ರಕರಣಗಳಿಗೆ ಆದ್ಯತೆ ನೀಡುತ್ತಿರುವುದನ್ನು ಗಮನಿಸಿದರೆ ನ್ಯಾಯಾಂಗದ ಹೆಕ್ಕಿ ಆಯುವ ನೀತಿ ಗಮನಕ್ಕೆ ಬರುತ್ತದೆ” ಎಂದ ಅವರು “ಬಹುಶಃ ಮಾಸ್ಟರ್‌ ಆಫ್‌ ರೋಸ್ಟರ್‌ ಕೈಯಲ್ಲಿ ಅಧಿಕಾರವಿರುವ ಕಾರಣಕ್ಕೆ ಹೆಕ್ಕಿ- ಆಯುವ ನೀತಿಯನ್ನು ಕಾಣುತ್ತಿದ್ದೇವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

Also Read
ಸಾಂವಿಧಾನಿಕತೆ ಇಲ್ಲದ ಪ್ರಜಾಪ್ರಭುತ್ವ ಕೇವಲ ತೊಗಟೆಯಾಗಿ ಉಳಿಯುತ್ತದೆ: ನ್ಯಾ. ಎಂ ಎನ್ ವೆಂಕಟಾಚಲಯ್ಯ

ಅಲ್ಲದೆ “ಭಾರತದ ನ್ಯಾಯಾಂಗ ನೇಮಕಾತಿಯಲ್ಲಿ ಪಾರದರ್ಶಕತೆಯ ಕೊರತೆ ಇದ್ದು ನ್ಯಾಯಾಧೀಶರ ನೇಮಕಾತಿ ವಿಧಾನದಲ್ಲಿ ಬದಲಾವಣೆಯಾಗಬೇಕು. ಅಮೆರಿಕದಲ್ಲಿ ನ್ಯಾಯಾಧೀಶರ ನೇಮಕಾತಿಗೆ ಮುಂಚಿತವಾಗಿ, ಪ್ರತಿ ನ್ಯಾಯಾಧೀಶರಿಗೆ ಗರ್ಭಪಾತ, ಧರ್ಮ ಮತ್ತು ರಾಜ್ಯ, ಪ್ರತ್ಯೇಕತೆ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಹಕ್ಕುಗಳ ರೀತಿಯ ಸಮಕಾಲೀನ ಸಂಗತಿಗಳ ಬಗ್ಗೆ ಹಾಗೂ ಅವರ ವರ್ತನೆಯ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ” ಎಂದರು.

Senior Advocate Indira Jaisingh
Senior Advocate Indira Jaisingh

"ನೇಮಕಾತಿಗಳನ್ನು ಮಾಡುವಾಗ ನಾವು ನೇಮಕ ಮಾಡುತ್ತಿರುವ ವ್ಯಕ್ತಿಯ ಸಿದ್ಧಾಂತ ಏನು ಎಂಬುದರ ಬಗ್ಗೆ ಜಾಗೃತರಾಗಿರಬೇಕು. ನಾನಿದನ್ನು 'ಸೈದ್ಧಾಂತಿಕ ನ್ಯಾಯಾಲಯ' ಎಂದು ಕರೆಯುತ್ತಿದ್ದು ಕೆಲವರು ಕಾರ್ಯನಿರ್ವಾಹಕ ನ್ಯಾಯಾಲಯ ಎಂದು ಕರೆದಿದ್ದಾರೆ” ಎಂದು ಹೇಳಿದರು.

ಇದೇ ವೇಳೆ ಮಾಜಿ ಸಿಜೆಐ ವೆಂಕಟಾಚಲಯ್ಯ ಅವರ ಅಧಿಕಾರಾವಧಿಯಲ್ಲಿ ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದಂತೆ ಕೆಲ ವಸ್ತುನಿಷ್ಠತೆ ಸಾಧಿಸಲು ಮಾಡಲಾದ ಪ್ರಯತ್ನಗಳಿಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್‌ ವಿರುದ್ಧದ ಟೀಕೆಗಳಿಗೆ ಅದರ ಮೇಲಿನ ಅತೀವ ನಿರೀಕ್ಷೆ ಕೂಡ ಕಾರಣ: ನ್ಯಾ. ಸಿಖ್ರಿ

ಕಾರ್ಯಕ್ರಮದಲ್ಲಿ ಮಾತನಾಡಿದ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ ಕೆ ಸಿಖ್ರಿ ಅವರು “ಇತ್ತೀಚಿನ ದಿನಗಳಲ್ಲಿ ಸುಪ್ರೀಂಕೋರ್ಟ್‌ ಎದುರಿಸುತ್ತಿರುವ ಟೀಕೆಗಳಿಗೆ ಅದರ ಕುರಿತಾದ ಅತೀವ ನಿರೀಕ್ಷೆ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು ಅಥವಾ ವೈಪರೀತ್ಯದ ಕ್ರಿಯಾಶೀಲತೆ ಕಾರಣವಿರಬಹುದು” ಎಂದು ಅಭಿಪ್ರಾಯಪಟ್ಟರು.

“ಸಂಪ್ರದಾಯವಾದಿ ನ್ಯಾಯಾಲಯದಿಂದ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ಮೂಲಕ ಕ್ರಿಯಾಶೀಲ ನ್ಯಾಯಾಂಗವಾಗಿ ಪರಿವರ್ತನೆಯಾಗುತ್ತಿರುವುದು ಕೂಡ ಅದರ ವಿರುದ್ಧದ ಟೀಕೆಗೆ ಕಾರಣವಾಗಿರಬಹುದು… ದೇಶದ ಜನರ ಕಲ್ಯಾಣಕ್ಕಾಗಿ ಇದು (ಸುಪ್ರೀಂ ಕೋರ್ಟ್‌) ಅದ್ಭುತ ಕೆಲಸಗಳನ್ನು ಮಾಡಿದೆ. ಆದರೆ ಪಿಐಎಲ್‌ ವ್ಯಾಪ್ತಿ ಹಾಗೂ ಲೋಕಸ್‌ ಸ್ಟ್ಯಾಂಡಿ ನಿಯಮವನ್ನು ವಿಸ್ತರಿಸುವುದರ ಮೂಲಕ ಪ್ರತಿಯೊಂದು ರೀತಿಯ ರಾಜಕೀಯ ವಿಷಯ ಅಥವಾ ನೀತಿಗಳಲ್ಲಿ ಮಧ್ಯಪ್ರವೇಶಿಸುವ ಪ್ರಕ್ರಿಯೆಯಲ್ಲಿ ಅತೀವ ಕ್ರಿಯಾಶೀಲವಾಗಿದೆ. ಇದರಿಂದ ಸಮಾಜದ ನಿರೀಕ್ಷೆಯೂ ಹೆಚ್ಚಿದೆ” ಎಂದು ಅವರು ಹೇಳಿದರು.

J. AK Sikri
J. AK Sikri

“ನ್ಯಾಯಾಂಗ ಸಮಾಜದ ಪರಿವರ್ತನೆಗೆ ರೇಚಕವಾಗಿ ಕೆಲಸ ಮಾಡುವುದು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟ ಅವರು “ಅಂತಿಮವಾಗಿ ಸಮಾಜದಲ್ಲಿ ಬದಲಾವಣೆ ಎಂಬುದು ಇತರೆ ಮೂಲಗಳಿಂದ ಬರಬೇಕಿದೆ. ಇದು ನ್ಯಾಯಾಂಗದ ಪಾತ್ರ ಎಂಬಂತೆ ಬರಬಾರದು. ನ್ಯಾಯಾಂಗ ಯಾವ ರೀತಿಯ ಪಾತ್ರವಹಿಸಬೇಕು ಎಂಬ ಪ್ರಶ್ನೆ ಇದೆ" ಎಂದರು.

“ಒಟ್ಟಾರೆಯಾಗಿ ನ್ಯಾಯಾಂಗ ಜಾಗೃತ ಕಾವಲುಗಾರನಾಗಿ ಕಾಲಾನಂತರದಲ್ಲಿ ತನ್ನ ಪಾತ್ರ ನಿರ್ವಹಿಸಲು ಸಮರ್ಥವಾಗಿದೆ. ಆದರೆ ಮುನ್ನುಗ್ಗುವುದು ಹೇಗೆ ಎಂಬ ಕುರಿತು ಆತ್ಮಾವಲೋಕನದ ಅಗತ್ಯವಿದೆ” ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ ಎನ್‌ ವೆಂಕಟಾಚಲಯ್ಯ ಪ್ರಧಾನ ಉಪನ್ಯಾಸ ನೀಡಿದರು.

Related Stories

No stories found.
Kannada Bar & Bench
kannada.barandbench.com