ಸಿಜೆಐ ನಿವಾಸದಲ್ಲಿ ಪ್ರಧಾನಿ ಮೋದಿ ಗಣೇಶ ಪೂಜೆ: ನ್ಯಾಯಾಂಗಕ್ಕೆ ಧಕ್ಕೆ ಎಂದ ಹಿರಿಯ ವಕೀಲ ಸಿಬಲ್

ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಯಾರೇ ಆದರೂ ಸಂಸ್ಥೆಯ ಬಗ್ಗೆ ಆಡಿಕೊಳ್ಳುವಂತಹ ಇಲ್ಲವೇ ಊಹಾಪೋಹಕ್ಕೆ ಎಡೆಯಾಗುವಂತಹ ಸ್ಥಿತಿಗೆ ತಮ್ಮನ್ನು ಒಡ್ಡಿಕೊಳ್ಳಬಾರದು ಎಂದು ಸಿಬಲ್ ಕುಟುಕಿದ್ದಾರೆ.
Kapil Sibal
Kapil Sibal
Published on

ಗಣಪತಿ ಪೂಜೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು  ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರ ನಿವಾಸಕ್ಕೆ ಭೇಟಿ ನೀಡಿದ್ದು ನ್ಯಾಯಾಂಗದ ಬಗ್ಗೆ ಜನರಲ್ಲಿ ಊಹಾಪೋಹ ಏಳುವಂತೆ ಮಾಡಿದೆ ಎಂದು ಸುಪ್ರೀಂ ಕೋರ್ಟ್‌ ವಕೀಲರ ಸಂಘದ (ಎಸ್‌ಸಿಬಿಎ) ಅಧ್ಯಕ್ಷರೂ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಇದು ಪ್ರಚಾರ ಪಡೆಯಬಾರದ ಖಾಸಗಿ ವಿಚಾರವಾಗಿತ್ತು ಎಂದು ಅವರು ಹೇಳಿದ್ದಾರೆ.

ಹಿಂದೆಯೂ ಮಹಾರಾಷ್ಟ್ರದಿಂದ ಸುಪ್ರೀಂ ಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿಗಳಾದವರಿದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹ ಚಮತ್ಕಾರಗಳನ್ನು ಮಾಡದಂತೆ ದೇಶದ ಪ್ರಧಾನ ಮಂತ್ರಿಯನ್ನು ವಿನಂತಿಸುವೆ. ಖಾಸಗಿ ಸಮಾರಂಭವನ್ನು ಸಾರ್ವಜನಿಕಗೊಳಿಸಲು ಪ್ರಧಾನಿ ಅವರಿಗೆ ಇದು ಸೂಕ್ತ ಸಮಯವಾಗಿರಲಿಲ್ಲ ಎಂದು ರಾಜ್ಯಸಭಾ ಸದಸ್ಯರೂ ಆಗಿರುವ ಸಿಬಲ್‌ ಟೀಕಿಸಿದ್ದಾರೆ.

ಸಿಬಲ್‌ ಮಾತಿನ ಪ್ರಮುಖಾಂಶಗಳು

  • ಸಮಾರಂಭದ ವೀಡಿಯೊವನ್ನು ಪ್ರಚುರಗೊಳಿಸಲಾಗುತ್ತದೆ ಎಂದು ಸಿಜೆಐ ಚಂದ್ರಚೂಡ್‌ ಅವರಿಗೆ ತಿಳಿದಿರಲಿಲ್ಲ.

  • ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಯಾರೇ ಆದರೂ ಸಂಸ್ಥೆಯ ಬಗ್ಗೆ ಆಡಿಕೊಳ್ಳುವಂತಹ ಇಲ್ಲವೇ ಊಹಾಪೋಹಕ್ಕೆ ಎಡೆಯಾಗುವಂತಹ ಸ್ಥಿತಿಗೆ ತಮ್ಮನ್ನು ತಂದುಕೊಳ್ಳಬಾರದು.

  • ನನಗೂ ದಿಗ್ಭ್ರಮೆಯಾಯಿತು. ಕಳೆದ 50 ವರ್ಷಗಳಿಂದ ನ್ಯಾಯಾಂಗದಲ್ಲಿದ್ದೇನೆ. ಈಗಲೂ ಹಾಗೆಯೇ ಹಿಂದೆಯೂ ಅನೇಕ ಶ್ರೇಷ್ಠ ನ್ಯಾಯಮೂರ್ತಿಗಳನ್ನು ಕಂಡಿದ್ದೇನೆ. ಸಂಸ್ಥೆಯ ಬಗ್ಗೆ ಅನುರಕ್ತಿ ಇದ್ದರೂ ಅಲ್ಲಿನ ವ್ಯಕ್ತಿಗಳ ಬಗ್ಗೆ ಆ ಭಾವವಿಲ್ಲ.

  • ಪ್ರಸ್ತುತ ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ಅಪಾರ ಗೌರವ ಇದೆ. ಅವರು ಉತ್ತಮ ವ್ಯಕ್ತಿತ್ವ ಕಾಪಾಡಿಕೊಂಡವರು ಎಂದು ಯಾವುದೇ ಹಿಂಜರಿಕೆ ಇಲ್ಲದೇ ಹೇಳಬಲ್ಲೆ.

  •  ಎಲ್ಲೆ ಮೀರಿ ಮಾಧ್ಯಮಗಳು ಈ ಘಟನೆಗೆ ಪ್ರಚಾರ ನೀಡಬಾರದು. ವೈಯಕ್ತಿಕ ಉದ್ದೇಶದ ಕಾರ್ಯಕ್ರಮಗಳ ಬಗ್ಗೆ ಊಹಾಪೋಹ ಹರಡಬಾರದು.

  •  ರಾಷ್ಟ್ರಪತಿ, ಪ್ರಧಾನಿ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಂತಹ ಸಾರ್ವಜನಿಕ ಹುದ್ದೆಯಲ್ಲಿರುವವರು ಯಾರೇ ಆದರೂ ಖಾಸಗಿ ಕಾರ್ಯಕ್ರಮವನ್ನು ಪ್ರಚಾರ ಮಾಡಬಾರದು. ಸಿಜೆಐ ಅವರಿಗೆ ಇದನ್ನು ಪ್ರಚಾರ ಮಾಡಲಾಗುತ್ತದೆ ಎಂದು ತಿಳಿದಿಲ್ಲದೆ ಇರಬಹುದು.

  • ತಪ್ಪು ಸಂದೇಶವನ್ನು ನೀಡುವುದರಿಂದ ಅಂತಹ ಖಾಸಗಿ ಕಾರ್ಯಕ್ರಮಕ್ಕೆ ಹೋಗಲು ಭಾರತದ ಪ್ರಧಾನಿ ಎಂದಿಗೂ ಆಸಕ್ತಿ ತೋರಿಸಬಾರದಿತ್ತು.   

  • ಇದು ವೈಯಕ್ತಿಕ ವಿಚಾರವಾಗಿರದೆ  ಅಂತಹ ವೀಡಿಯೊ ಜನರ ಮನಸ್ಸಿನ ಮೇಲೆ  ಬೀರುವ ಪರಿಣಾಮವನ್ನು ಗ್ರಹಿಸಬೇಕು.

  • ಇಂತಹ ಘಟನೆಗಳ ಹಿಂದೆ ಯಾವುದೇ ಪ್ರೇರಣೆ ಇಲ್ಲದಿರಬಹುದಾದರೂ ನಂತರ ಏಳುವ ಊಹಾಪೋಹಗಳು ನ್ಯಾಯಾಂಗಕ್ಕೆ ಒಳ್ಳೆಯದಲ್ಲ.

  • ಇದು ದೇಶದೆಲ್ಲೆಡೆಯ ನ್ಯಾಯಾಲಯಗಳಿಗೆ ತಪ್ಪು ಸಂದೇಶ ನೀಡುತ್ತದೆ. ಹಾಗಾಗಿ ಇಂತಹ ಕಾರ್ಯಕ್ರಮವನ್ನು ಸಾಧ್ಯವಾದಷ್ಟೂ ತಪ್ಪಿಸಬೇಕಿತ್ತು.

Kannada Bar & Bench
kannada.barandbench.com