ವಕೀಲರ ರಕ್ಷಣಾ ವಿಧೇಯಕ ಜಾರಿಗೆ ಸದನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ

ವಿಧೇಯಕವನ್ನು ಮಂಡಿಸುವಂತೆ ವಕೀಲರ ಉಗ್ರ ಪ್ರತಿಭಟನೆಯ ನಡುವೆಯೇ ಕರ್ನಾಟಕ ವಕೀಲರ ಮೇಲಿನ ಹಲ್ಲೆ ನಿಷೇಧ ವಿಧೇಯಕ 2021 ಅನ್ನು ಪರಿಶೀಲನೆಗೆ ತೆಗೆದುಕೊಂಡಿಲ್ಲ ಎನ್ನುವ ಉತ್ತರವನ್ನು ಕಾನೂನು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ನೀಡಿದ್ದಾರೆ.
Lawyers
Lawyers

“ವಕೀಲರನ್ನು ದೌರ್ಜನ್ಯದಿಂದ ರಕ್ಷಣೆ ಮಾಡಬೇಕಿದೆ. ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಕ್ಷಿದಾರರ ಪರವಾಗಿ ವಕೀಲರು ವಾದಿಸುತ್ತಾರೆ. ಹೀಗಾಗಿ, ಅವರಿಗೆ ರಕ್ಷಣೆ ಒದಗಿಸಬೇಕು. ವಕೀಲರು ಸಿದ್ಧಪಡಿಸಿಕೊಟ್ಟಿರುವ ವಿಧೇಯಕವನ್ನು ಪರಿಶೀಲಿಸಿ, ಕಾನೂನು ಇಲಾಖೆಯು ಕಾಯಿದೆ ಮಾಡಿಕೊಡಬೇಕು” ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಬುಧವಾರ ಮಾತನಾಡಿದ ಸಿದ್ದರಾಮಯ್ಯ ಅವರು “ರಾಜ್ಯದ ವಕೀಲರ ಸಮುದಾಯದ ಮೇಲಿನ ದೌರ್ಜನ್ಯ ಮತ್ತು ಹಲ್ಲೆಯಿಂದ ರಕ್ಷಣೆಗಾಗಿ ಬೆಂಗಳೂರು ವಕೀಲರ ಸಂಘದ ಹಿರಿಯ ವಕೀಲರು ಕರಡು ಮಸೂದೆಯನ್ನು ಸಿದ್ಧಪಡಿಸಿದ್ದಾರೆ. ಇದಕ್ಕೂ ಮುನ್ನ, ಮುಖ್ಯಮಂತ್ರಿ ಮತ್ತು ಕಾನೂನು ಸಚಿವರಿಗೆ ಮನವಿ ನೀಡಿದ್ದಾರೆ” ಎಂದು ವಿವರಿಸಿದರು.

“ವಕೀಲರ ಸಮುದಾಯವು ಮಂಗಳವಾರ ಬೆಳಗಾವಿಯ ಸುವರ್ಣ ಸೌಧದ ಎದುರು ಪ್ರತಿಭಟನೆ ನಡೆಸಿದೆ. ಹಿರಿಯ ವಕೀಲರಾದ ಉದಯ್‌ ಹೊಳ್ಳ, ಸಿ ಎಚ್‌ ಹನುಮಂತರಾಯ, ಎ ಎಸ್‌ ಪೊನ್ನಣ್ಣ ಒಳಗೊಂಡು ಹಲವರು ಸೇರಿಕೊಂಡು ಕರಡು ವಿಧೇಯಕವನ್ನು ಸಿದ್ಧಪಡಿಸಿದ್ದಾರೆ” ಎಂದು ವಿವರಿಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿರುವ ವಿಚಾರಗಳನ್ನು ಕಾನೂನು ಸಚಿವರ ಗಮನಕ್ಕೆ ತರಲಾಗುವುದು. ಬಳಿಕ ಅವರಿಂದ ಉತ್ತರ ಕೊಡಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಶಾಸಕ ಮಹೇಶ್‌ ಪ್ರಶ್ನೆಗೆ ಕಾನೂನು ಸಚಿವರ ಉತ್ತರ

ವಕೀಲರ ರಕ್ಷಣೆಗಾಗಿ ಕ್ರಮವಹಿಸುವ ನಿಟ್ಟಿನಲ್ಲಿ ರಾಜ್ಯ ವಕೀಲರ ಪರಿಷತ್‌ ಕರ್ನಾಟಕ ವಕೀಲರ ಸಂರಕ್ಷಣಾ ಕಾಯಿದೆಯ ಕರಡನ್ನು ಸಲ್ಲಿಸಿ, ಕಾಯಿದೆ ರೂಪಿಸಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದನ್ನು ಪರಿಶೀಲಿಸಿ, ಸಂಸದೀಯ ವ್ಯವಹಾರಗಳ ಇಲಾಖೆಯ ಪರಿಶೀಲನೆಯ ಬಳಿಕ ಕರ್ನಾಟಕ ವಕೀಲರ ಮೇಲಿನ ಹಲ್ಲೆ ನಿಷೇಧ ವಿಧೇಯಕ 2021 ಅನ್ನು ಪರಿಶೀಲನಾ ಸಮಿತಿ ಮುಂದೆ ಮಂಡಿಸಿ ಅನುಮೋದನೆ ಪಡೆಯಲಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಅವರು ಶಾಸಕ ಸಾ ರಾ ಮಹೇಶ್‌ ಅವರು ನಿಯಮ 73ರ ಅಡಿ ಈಚೆಗೆ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಮುಂದುವರಿದು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರು ಹೊಸದಾದ ವಿಧೇಯಕವನ್ನು ಸಲ್ಲಿಸಿ, ಅದನ್ನು ಪರಿಶೀಲಿಸಿ ತುರ್ತಾಗಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಬೇಕು ಎಂದು ಪತ್ರ ಸಲ್ಲಿಸಿದ್ದಾರೆ. ಸದರಿ ಕರ್ನಾಟಕ ವಕೀಲರ ಮೇಲಿನ ಹಲ್ಲೆ ನಿಷೇಧ ವಿಧೇಯಕ 2021 ಅನ್ನು ಪರಿಶೀಲನೆಗೆ ತೆಗೆದುಕೊಂಡಿಲ್ಲ ಎಂದು ಉತ್ತರಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com