ಕಲ್ಲಡ್ಕ ಪ್ರಭಾಕರ್ ಭಟ್ ಜಾಮೀನಿಗೆ ವಿರೋಧ: ಶ್ರೀರಂಗಪಟ್ಟಣ ನ್ಯಾಯಾಲಯಕ್ಕೆ ನಜ್ಮಾ ನಜೀರ್ ಅರ್ಜಿ ಸಲ್ಲಿಕೆ
ಮುಸ್ಲಿಮ್ ಮಹಿಳೆಯರ ಅವಹೇಳನ ಮತ್ತು ಧಾರ್ಮಿಕ ದ್ವೇಷ ಬಿತ್ತುವ ಭಾಷಣ ಮಾಡಿದ ಆರೋಪ ಎದುರಿಸುತ್ತಿರುವ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಜಾಮೀನು ಅರ್ಜಿಗೆ ವಿರೋಧಿಸಲು ತನ್ನ ಇಚ್ಛೆಯ ವಕೀಲರನ್ನು ನೇಮಸಿಕೊಳ್ಳಲು ಅನುಮತಿಸುವಂತೆ ಕೋರಿ ದೂರುದಾರೆ ನಜ್ಮಾ ನಜೀರ್ ಅವರು ಶ್ರೀರಂಗಪಟ್ಟಣ ನ್ಯಾಯಾಲಯಕ್ಕೆ ಬುಧವಾರ ಅರ್ಜಿ ಸಲ್ಲಿಸಿದ್ದಾರೆ.
ನಜ್ಮಾ ನಜೀರ್ ಅವರ ಪರವಾಗಿ ವಕೀಲ ಎಸ್ ಬಾಲಕೃಷ್ಣನ್ ಅವರು ಸಿಆರ್‌ಪಿಸಿ ಸೆಕ್ಷನ್ 301 ಮತ್ತು 302 ಅಡಿ ಅರ್ಜಿ ಸಲ್ಲಿಸಿದ್ದು, ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ತಮ್ಮ ವಾದವನ್ನು ಆಲಿಸಬೇಕು ಎಂದು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗೋಪಾಲ ಕೃಷ್ಣ ರೈ ಟಿ ಅವರನ್ನು ಕೋರಿದರು. ಈ ಸಂಬಂಧದ ವಿಚಾರಣೆಯು ಜನವರಿ 5ಕ್ಕೆ ಮುಂದೂಡಲ್ಪಟ್ಟಿದೆ.
ಈ ಹಿಂದೆಯೂ ಆರೋಪಿ ಪ್ರಭಾಕರ್ ಭಟ್ ಅವರು ಇಂಥದ್ದೇ ವರ್ತನೆ ತೋರಿದ್ದಾರೆ. ದೊಂಬಿ ಸೃಷ್ಟಿಸುವುದು, ಮಹಿಳೆಯರನ್ನು ಅವಮಾನಿಸುವುದು, ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಕೆಲಸ ಮಾಡಿದ್ದಾರೆ. ಈ ಆರೋಪಗಳ ಮೇಲೆ ಪ್ರಕರಣಗಳು ದಾಖಲಾಗಿವೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಪ್ರಭಾಕರ್ ಭಟ್ ಜಾಮೀನು ಅರ್ಜಿಗೆ ಸರ್ಕಾರಿ ಅಭಿಯೋಜಕರ ಜೊತೆ ತಾವೂ ಅದನ್ನು ವಿರೋಧಿಸಲು ಅನುಮತಿಸಬೇಕು ಎಂದು ನ್ಯಾಯಾಲಯಕ್ಕೆ ಮೊರೆ ಇಡಲಾಗಿದೆ.
ಪ್ರಭಾಕರ್ ಭಟ್ ಗಂಭೀರ ಹೃದ್ರೋಗ ಸಮಸ್ಯೆಯಿಂದ ಬಳಲುತಿದ್ದಾರೆ ಎಂದು ಡಿಸೆಂಬರ್ 28ರಂದು ಶ್ರೀರಂಗಪಟ್ಟಣ ನ್ಯಾಯಾಲಯವು ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಹಿನ್ನೆಲೆ: ಹನುಮ ಜಯಂತ್ಯುತ್ಸವ ಅಂಗವಾಗಿ ಡಿಸೆಂಬರ್ 24ರಂದು ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆಯು ಆಯೋಜಿಸಿದ್ದ ಸಂಕೀರ್ತನಾ ಯಾತ್ರೆಯಲ್ಲಿ ಪ್ರಭಾಕರ್ ಭಟ್ ಮುಸ್ಲಿಮರ ವಿರುದ್ಧ ಧಾರ್ಮಿಕ ದ್ವೇಷಕಾರಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಜೀರ್ ನೀಡಿದ್ದ ದೂರಿನ ಅನ್ವಯ ಶ್ರೀರಂಗಪಟ್ಟಣ ಟೌನ್ ಠಾಣೆಯ ಪೊಲೀಸರು ಪ್ರಭಾಕರ್ ಭಟ್ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 294 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಮಾತುಗಳನ್ನು ಆಡುವುದು), 509 (ಮಹಿಳೆಯ ಖಾಸಗಿತನಕ್ಕೆ ಸಂಬಂಧಿಸಿದ ಮಾತುಗಳನ್ನಾಡುವುದು), 153ಎ (ಧರ್ಮದ ಆಧಾರದಲ್ಲಿ ಸಮುದಾಯಗಳ ನಡುವೆ ದ್ವೇಷ ಹರಡುವುದು) ಮತ್ತು 298 (ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು) ಅಡಿ ಪ್ರಕರಣ ದಾಖಲಿಸಿದ್ದಾರೆ.