ನಂದಿಬೆಟ್ಟಕ್ಕೆ ರೋಪ್‌ ವೇ ಸೌಲಭ್ಯಕ್ಕೆ ವಿರೋಧ: ರಾಜ್ಯ ಸರ್ಕಾರದ ಪ್ರತಿಕ್ರಿಯೆ ಬಯಸಿದ ಹೈಕೋರ್ಟ್

ನಂದಿ ಬೆಟ್ಟದ ಅನನ್ಯ ಸೂಕ್ಷ್ಮ ಪರಿಸರವನ್ನು ರಕ್ಷಿಸುವ ದಿಸೆಯಲ್ಲಿ ಈ ಪ್ರದೇಶವನ್ನು, ವಿಶ್ವ ಪರಿಸರಾತ್ಮಕ ಕಾನೂನುಗಳ ಆಧಾರದಡಿ ಪಾರಂಪರಿಕ ತಾಣ ಎಂದು ಘೋಷಿಸಲು ಸರ್ಕಾರ ಶಿಫಾರಸು ಮಾಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
High Court of Karnataka
High Court of Karnataka
Published on

ಪ್ರಸಿದ್ಧ ನಂದಿಬೆಟ್ಟಕ್ಕೆ ರೋಪ್‌ ವೇ ಸೌಲಭ್ಯ ಕಲ್ಪಿಸಲು ಮುಂದಾಗಿರುವ ನಿರ್ಧಾರವನ್ನು ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಲು ಕರ್ನಾಟಕ ಹೈಕೋರ್ಟ್‌ ಗುರುವಾರ ಆದೇಶಿಸಿದೆ.

ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸಿ ಡಿ ಕಿರಣ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೆಲಕಾಲ ವಾದ ಆಲಿಸಿದ ನ್ಯಾಯಾಲಯವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಏಪ್ರಿಲ್‌ 8ಕ್ಕೆ ಮುಂದೂಡಿತು. ಪ್ರಕರಣದಲ್ಲಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಸೇರಿದಂತೆ ಒಟ್ಟು 11 ಜನರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ರೋಪ್‌ ವೇ ನಿರ್ಮಾಣಕ್ಕಾಗಿ ನಂದಿ ಬೆಟ್ಟದ ಸರ್ವೇ ನಂಬರ್ 3ರ ಹಾಗೂ ಅರ್ಕಾವತಿ ನದಿಯ ಬಫರ್‌ ಝೋನ್‌ನಲ್ಲಿರುವ ಎರಡು ಎಕರೆ ಜಮೀನನ್ನು ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಖಾಸಗಿ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಇದು ಕರ್ನಾಟಕ ಉದ್ಯಾನಗಳ ಸಂರಕ್ಷಣಾ ಕಾಯಿದೆ–1975ಕ್ಕೆ ವಿರುದ್ಧವಾಗಿದೆ. ಜೀವವೈವಿಧ್ಯ, ಪರಿಸರ ವ್ಯವಸ್ಥೆಗೆ ಮಾರಕವಾಗಿರುವ ಈ ಏಕಪಕ್ಷೀಯ ಮತ್ತು ಕಾನೂನಿನ ನಿಯಮಗಳನ್ನು ಉಲ್ಲಂಘಿಸಿದ ಅಧಿಸೂಚನೆಯನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. 

ರೋಪ್‌ ವೇ ನಿರ್ಮಾಣದಿಂದ ಸ್ಥಳೀಯ ಪರಿಸರದ ಮೇಲೆ ಉಂಟಾಗುವ ಪ್ರಭಾವ ಏನೆಂಬುದನ್ನು ಅರಿಯಲು ತಜ್ಞರ ಸಮಿತಿ ರಚಿಸಿ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು. ನಂದಿ ಬೆಟ್ಟದ ಅನನ್ಯ ಸೂಕ್ಷ್ಮ ಪರಿಸರವನ್ನು ರಕ್ಷಿಸುವ ದಿಸೆಯಲ್ಲಿ ಈ ಪ್ರದೇಶವನ್ನು, ವಿಶ್ವ ಪರಿಸರಾತ್ಮಕ ಕಾನೂನುಗಳ ಆಧಾರದಡಿ ಪಾರಂಪರಿಕ ತಾಣ ಎಂದು ಘೋಷಿಸಲು ಸರ್ಕಾರ ಶಿಫಾರಸು ಮಾಡಬೇಕು ಎಂದು ಮನವಿ ಮಾಡಲಾಗಿದೆ.

ನದಿಗಳ ಶಾಶ್ವತ ರಕ್ಷಣೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಮತ್ತು ಪರಿಣಾಮಕಾರಿಯಾದ ಮಾಲಿನ್ಯ ನಿವಾರಣೆ ದೃಷ್ಟಿಯಿಂದ ಅರ್ಕಾವತಿ ಮತ್ತು ಕುಮುದ್ವತಿ ನದಿಗಳ ಸಂರಕ್ಷಣೆ ಮಾಡಬೇಕಿದೆ. ಇದಕ್ಕಾಗಿ ಈ ನದಿಗಳ ಪುನಶ್ಚೇತಗೊಳಿಸಲು ಜಲಾನಯನ ಪ್ರಾಧಿಕಾರ ರಚಿಸಲು ನಿರ್ದೇಶಿಸಬೇಕು ಎಂದೂ ಅರ್ಜಿದಾರರು ಕೋರಿದ್ದಾರೆ.

Kannada Bar & Bench
kannada.barandbench.com