ವಕ್ಫ್‌ ತಿದ್ದುಪಡಿ ಕಾಯಿದೆ: ಪ್ರತಿಭಟನೆಗೆ ಅನುಮತಿಸುವುದಿಲ್ಲ ಎಂದು ಹೈಕೋರ್ಟ್‌ಗೆ ಸರ್ಕಾರದ ವಾಗ್ದಾನ

“ಎಷ್ಟು ಹೇಳಿದರೂ ನೀವು ಕೇಳುವುದಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಪರಿಗಣಿಸಲ್ಪಟ್ಟಿಲ್ಲವೇ? ನೀವೇಕೆ ಅನುಮತಿ ನೀಡಿದಿರಿ?" ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ.
ವಕ್ಫ್‌ ತಿದ್ದುಪಡಿ ಕಾಯಿದೆ: ಪ್ರತಿಭಟನೆಗೆ ಅನುಮತಿಸುವುದಿಲ್ಲ ಎಂದು ಹೈಕೋರ್ಟ್‌ಗೆ ಸರ್ಕಾರದ ವಾಗ್ದಾನ
Published on

ವಿವಾದಿತ ವಕ್ಫ್‌ ತಿದ್ದುಪಡಿ ಕಾಯಿದೆ ವಿರೋಧಿಸಿ ಪ್ರತಿಭಟಿಸಲು ಮುಂದೆ ಅನುಮತಿಸುವುದಿಲ್ಲ ಎಂದು ಮಂಗಳವಾರ ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ವಾಗ್ದಾನ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಫಿರಂಗಿಪೇಟೆಯ ಎ ರಾಜೇಶ್‌ ಅವರು ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 72ರಲ್ಲಿ ಬರುವ ಪಡೀಲ್‌ನಿಂದ ಬಿ ಸಿ ರೋಡ್‌ ರಸ್ತೆಯನ್ನು ಏಪ್ರಿಲ್‌ 18ರಂದು ಮಧ್ಯಾಹ್ನ 12ರಿಂದ ರಾತ್ರಿ 9ರವರೆಗೆ ನಿರ್ಬಂಧಿಸಿ ಪೊಲೀಸ್‌ ಆಯುಕ್ತರು ಹೊರಡಿಸಿರುವ ಸುತ್ತೋಲೆ ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು “ನ್ಯಾಯಾಲಯದ ಆದೇಶವನ್ನು ಪೊಲೀಸರು ಪಾಲಿಸಿಲ್ಲ. ಎನ್‌ಎಚ್‌ 72 ಅನ್ನು ನಿರ್ಬಂಧಿಸಿರಲಿಲ್ಲ. ಇದಕ್ಕೆ ಪೂರಕವಾಗಿ ವಿಡಿಯೋ, ಫೋಟೊಗ್ರಾಫ್‌ ಇದೆ” ಎಂದರು.

ಆಗ ಪೀಠವು “ಪ್ರತಿಭಟನೆ ನಡೆದಿರುವುದರಿಂದ ಅರ್ಜಿ ಅನೂರ್ಜಿತವಾಗಿದೆ” ಎಂದಿತು.

ರಾಜ್ಯ ಸರ್ಕಾರದ ಪರ ವಕೀಲರು “ಪೊಲೀಸರು ಸ್ಥಳದಲ್ಲಿ ಇದ್ದರು, ಎಲ್ಲವೂ ಸುಗಮವಾಗಿ ನಡೆದಿದೆ. ನಾವು ಮುಂದೆ ಯಾವುದೇ ಅನುಮತಿ ನೀಡುವುದಿಲ್ಲ” ಎಂದರು. ಈ ಹೇಳಿಕೆಯನ್ನು ಆದೇಶದಲ್ಲಿ ದಾಖಲಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು.

Also Read
'ವಕ್ಫ್‌ ತಿದ್ದುಪಡಿ ಕಾಯಿದೆ ಪ್ರಕರಣ ಸುಪ್ರೀಂ ಪರಿಗಣನೆಯಲ್ಲಿರುವಾಗ ಯಾವ ಪ್ರತಿಭಟನೆಗೆ ಅನುಮತಿಸಿದ್ದೀರಿ?' ಹೈಕೋರ್ಟ್‌

ಇದರಿಂದ ಕುಪಿತಗೊಂಡ ಪೀಠವು “ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಪರಿಗಣನೆಯಲ್ಲಿರುವಾಗ ನೀವು ಅನುಮತಿ ನೀಡುವುದನ್ನು ನಿಲ್ಲಿಸಬೇಕು. ಎಷ್ಟು ಹೇಳಿದರೂ ನೀವು ಕೇಳುವುದಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಪರಿಗಣಿಸಲ್ಪಟ್ಟಿಲ್ಲವೇ? ನೀವೇಕೆ ಅನುಮತಿ ನೀಡಿದಿರಿ?” ಎಂದು ಏರುಧ್ವನಿಯಲ್ಲ ಸರ್ಕಾರದ ವಕೀಲರನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.

ಅಲ್ಲದೇ, ಪ್ರಕರಣವು ಸುಪ್ರೀಂ ಕೋರ್ಟ್‌ ಪರಿಗಣನೆಯಲ್ಲಿರುವುದರಿಂದ ಯಾವುದೇ ಪ್ರತಿಭಟನೆಗೆ ಮುಂದೆ ಅನುಮತಿ ನೀಡುವುದಿಲ್ಲ ಎಂದು ಸರ್ಕಾರ ತಿಳಿಸಿದೆ ಎಂದು ಆದೇಶದಲ್ಲಿ ನ್ಯಾಯಾಲಯ ದಾಖಲಿಸಿತು. ಅಲ್ಲದೇ, “ಪ್ರತಿಭಟನೆಗೆ ಅವಕಾಶ ನೀಡಬಾರದು” ಎಂದು ಮೌಖಿಕವಾಗಿ ಹೇಳಿತು.

Kannada Bar & Bench
kannada.barandbench.com