ಜನಪ್ರತಿಧಿಗಳ ವಿರುದ್ಧದ ತ್ವರಿತ ವಿಚಾರಣೆಯ ಆದೇಶ ಹೈಕೋರ್ಟ್‌ನ ಕ್ರಿಮಿನಲ್ ಮೇಲ್ಮನವಿಗಳಿಗೆ ಅನ್ವಯಿಸದು: ಸುಪ್ರೀಂ

ಸಿಬಿಐ ವಿಶೇಷ ನ್ಯಾಯಾಲಯಗಳಲ್ಲಿ ಪ್ರಕರಣಗಳ ಹೆಚ್ಚಳ ತಪ್ಪಿಸಲು 100 ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇರುವ ರಾಜ್ಯದ ವಿವಿಧ ಭಾಗಗಳಲ್ಲಿ ವಿಶೇಷ/ಸಿಬಿಐ ನ್ಯಾಯಾಲಯಗಳನ್ನು ಸ್ಥಾಪಿಸಬೇಕಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ.
ಜನಪ್ರತಿಧಿಗಳ ವಿರುದ್ಧದ ತ್ವರಿತ ವಿಚಾರಣೆಯ ಆದೇಶ ಹೈಕೋರ್ಟ್‌ನ ಕ್ರಿಮಿನಲ್ ಮೇಲ್ಮನವಿಗಳಿಗೆ ಅನ್ವಯಿಸದು: ಸುಪ್ರೀಂ

ಶಾಸಕರ ವಿರುದ್ಧದ ಪ್ರಕರಣಗಳ ತ್ವರಿತ ವಿಚಾರಣೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 2020ರಲ್ಲಿ ನೀಡಲಾಗಿದ್ದ ಆದೇಶ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಅವರ ವಿರುದ್ಧದ ಕ್ರಿಮಿನಲ್ ಮೇಲ್ಮನವಿಗಳಿಗೆ ಅನ್ವಯಿಸದು ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ (ಅಶ್ವಿನಿ ಕುಮಾರ್ ಉಪಾಧ್ಯಾಯ ಮತ್ತು ಕೇಂದ್ರ ಸರ್ಕಾರನ ನಡುವಣ ಪ್ರಕರಣ).

ಶಾಸಕರ ವಿರುದ್ಧದ ಕ್ರಿಮಿನಲ್ ಮೇಲ್ಮನವಿಗಳನ್ನು ಅವುಗಳ ಸರದಿ ಪ್ರಕಾರ ತೆಗೆದುಕೊಳ್ಳಲಾಗುವುದೇ ಹೊರತು, ಸರದಿಯ ಹೊರತಾಗಿ ಅಲ್ಲ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ , ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಸೂರ್ಯ ಕಾಂತ್ ಅವರಿದ್ದ ಪೀಠ ಹೇಳಿದೆ.

ಈ ನ್ಯಾಯಾಲಯ 16 ಸೆಪ್ಟೆಂಬರ್ 2020ರಂದು ನೀಡಿದ್ದ ಆದೇಶ ತ್ವರಿತಗತಿಯ ವಿಚಾರಣೆಗೆ ಸಂಬಂಧಿಸಿದ್ದು ಇದು ಮಾಜಿ ಅಥವಾ ಹಾಲಿ ಸಂಸದರು ಹಾಗೂ ಶಾಸಕರ ವಿರುದ್ಧ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಕ್ರಿಮಿನಲ್ ಮೇಲ್ಮನವಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಾವು 16 ಸೆಪ್ಟೆಂಬರ್ 2020ರಂದು ನೀಡಿದ್ದ ಆದೇಶವನ್ನು ತಪ್ಪಾಗಿ ಅರ್ಥಮಾಡಿಕೊಳ್ಳದೆ ಅಂತಹ ಕ್ರಿಮಿನಲ್ ಮೇಲ್ಮನವಿಗಳನ್ನು ಸರದಿ ಪ್ರಕಾರ ತೆಗೆದುಕೊಳ್ಳಲಾಗುವುದೇ ಹೊರತು ಸರದಿಯ ಹೊರತಾಗಿ ಅಲ್ಲ” ಎಂದು ಆಗಸ್ಟ್ 25 ರಂದು ನೀಡಿದ್ದ ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.

ಆದಾಗ್ಯೂ, ಶಿಕ್ಷೆಗೊಳಗಾದ ಆರೋಪಿಗಳು ತಮ್ಮ ಶಿಕ್ಷೆಯನ್ನು ಅಮಾನತುಗೊಳಿಸಲು ಮತ್ತು ನಿಯಮಿತ ಜಾಮೀನಿನ ಮೇಲೆ ಬಿಡುಗಡೆಯಾಗಲು ಸ್ವಾತಂತ್ರ್ಯ ಹೊಂದಿರುತ್ತಾರೆ ಮತ್ತು ಅಂತಹ ಯಾವುದೇ ಅರ್ಜಿ ಸಲ್ಲಿಸಿದರೆ, ಕಾನೂನಿನ ಪ್ರಕಾರ, ಅರ್ಹತೆಯಂತೆಯೇ ಅದನ್ನು ನಿರ್ಧರಿಸತಕ್ಕದ್ದು ಎಂದು ನ್ಯಾಯಾಲಯ ಹೇಳಿದೆ.

ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಮೂಲಕ ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ತ್ವರಿತ ವಿಚಾರಣೆ ಕೋರಿ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಶಾಸಕರ ವಿರುದ್ಧದ ವಿಚಾರಣೆಯ ಸ್ಥಿತಿಗತಿಗಳ ವಿವರಗಳನ್ನು ಒಳಗೊಂಡ ವರದಿಯನ್ನು ಅಮಿಕಸ್ ಕ್ಯೂರಿ ವಿಜಯ್ ಹನ್ಸಾರಿಯಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇಂತಹ ವಿಚಾರಣೆಗಳನ್ನು ತ್ವರಿತವಾಗಿ ಮುಗಿಸಲು ಅವರು ವಿವಿಧ ಸಲಹೆಗಳನ್ನು ನೀಡಿದ್ದರು.

ವಕೀಲೆ ಸ್ನೇಹಾ ಕಲಿತಾ ಅವರ ಮೂಲಕ ಸಲ್ಲಿಸಲಾದ ವರದಿಯನ್ನು ಪರಿಶೀಲಿಸಿದ ನ್ಯಾಯಾಲಯ, ಮಾಜಿ ಸಂಸದರು ಹಾಗೂ ಶಾಸಕರನ್ನು ಒಳಗೊಂಡ 121 ಪ್ರಕರಣಗಳು ಹಾಗೂ ಹಾಲಿ ಸಂಸದರು ಮತ್ತು ಶಾಸಕರನ್ನು ಒಳಗೊಂಡ 112 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಎಂದು ಗಮನಿಸಿತು. ಆದುದರಿಂದ, ಆರೋಪಿಗಳನ್ನು ಹಾಜರುಪಡಿಸಲು ಮತ್ತು ವಿಚಾರಣೆ ಮುಕ್ತಾಯಗೊಳಿಸುವ ಸಂಬಂಧ ಸಿಬಿಐ ನ್ಯಾಯಾಲಯಗಳಿಗೆ ಅಗತ್ಯ ಸಹಾಯವನ್ನು ಒದಗಿಸುವುದಕ್ಕೆ ಸಿಬಿಐ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿತು. ಅಲ್ಲದೆ ಪ್ರತಿಯೊಂದು ಹೈಕೋರ್ಟ್‌ ತಮ್ಮಲ್ಲಿ ಬಾಕಿ ಇರುವ ವಿಚಾರಣೆಗಳನ್ನು ತ್ವರಿತಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಹಿಂದಿನ ಆದೇಶಗಳಲ್ಲಿ ಈಗಾಗಲೇ ನಿಗದಿಪಡಿಸಿದ ಕಾಲಮಿತಿಯೊಳಗೆ ಮುಕ್ತಾಯಗೊಳಿಸಬೇಕು" ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ರಾಜ್ಯದ ಒಂದೆರಡು ನ್ಯಾಯಾಲಯಗಳು ಎಲ್ಲಾ ವಿಚಾರಣೆಗಳನ್ನು ತ್ವರಿತಗೊಳಿಸಲು ಅಥವಾ ಒಂದೇ ದಿನದಲ್ಲಿ ಅದನ್ನು ತೆಗೆದುಕೊಳ್ಳಲು ಸಾಧ್ಯವಾಗದಿರಬಹುದು. ಈ ಹಿನ್ನೆಲೆಯಲ್ಲಿ ವಿಶೇಷ/ ಸಿಬಿಐ ನ್ಯಾಯಾಲಯಗಳ ಸ್ಥಾಪನೆಗೆ ಮುಂದಾಗುವ ತುರ್ತು ಅವಶ್ಯಕತೆ ಇದೆ ಎಂದು ಕೂಡ ನಾಯಾಲಯ ಇದೇ ಸಂದರ್ಭದಲ್ಲಿ ತಿಳಿಸಿದೆ. ಸಾಕ್ಷಿಗಳ ಸುಲಭ ಲಭ್ಯತೆ ಮತ್ತು ಸಿಬಿಐ/ವಿಶೇಷ ನ್ಯಾಯಾಲಯಗಳಲ್ಲಿ ಪ್ರಕರಣಗಳ ಹೆಚ್ಚಳ ತಪ್ಪಿಸಲು 100 ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇರುವ ರಾಜ್ಯದ ವಿವಿಧ ಭಾಗಗಳಲ್ಲಿ ವಿಶೇಷ/ಸಿಬಿಐ ನ್ಯಾಯಾಲಯಗಳನ್ನು ಸ್ಥಾಪಿಸಬೇಕಾಗಿದೆ ಎಂದು ನ್ಯಾಯಾಲಯ ಹೇಳಿದೆ.

Related Stories

No stories found.
Kannada Bar & Bench
kannada.barandbench.com