ವಕಾಲತ್ತು, ತೀರ್ಪುಗಳನ್ನು ಕನ್ನಡದಲ್ಲಿ ನೀಡಲು ನಿರ್ದೇಶಿಸಿ: ಮುಖ್ಯ ನ್ಯಾಯಮೂರ್ತಿಗಳಿಗೆ ಕನ್ನಡ ಪ್ರಾಧಿಕಾರದ ಮನವಿ

ಕಕ್ಷಿದಾರನಿಗೆ ತನಗೆ ಅರ್ಥವಾಗುವ ಭಾಷೆಯಲ್ಲಿ ತೀರ್ಪು ನೀಡಿದಾಗ ತನ್ನ ತಪ್ಪಿನ ಅರಿವಾಗುತ್ತದೆ. ನ್ಯಾಯಾಲಯದ ತೀರ್ಪಿನ ಬಗ್ಗೆ ಗೌರವ ಹೆಚ್ಚಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್‌ ನಾಗಾಭರಣ ಮನವಿ ಮಾಡಿದ್ದಾರೆ.
High Court of Karnataka
High Court of Karnataka
Published on

“ರಾಜ್ಯದ ಎಲ್ಲಾ ಅಧೀನ ನ್ಯಾಯಾಲಯಗಳಲ್ಲಿ ವಕಾಲತ್ತು ಮತ್ತು ತೀರ್ಪುಗಳನ್ನು ಕನ್ನಡದಲ್ಲಿ ನೀಡಲು ನಿರ್ದೇಶನ ನೀಡಬೇಕು” ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್‌ ನಾಗಾಭರಣ ಅವರು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರಿಗೆ ಮನವಿ ಮಾಡಿದ್ದಾರೆ.

ಅಧೀನ ನ್ಯಾಯಾಲಯಗಳಲ್ಲಿ ಕನ್ನಡ ಅನುಷ್ಠಾನ ಮಾಡುವಂತೆ ಹಕ್ಕೊತ್ತಾಯ ಮನವಿ ಪತ್ರವನ್ನು ಸಿಜೆ ಅಭಯ್ ಶ್ರೀನಿವಾಸ್‌ ಓಕಾ ಹಾಗೂ ರಿಜಿಸ್ಟ್ರಾರ್ ಜನರಲ್ ಅವರಿಗೆ ಶುಕ್ರವಾರ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

“ರಾಜ್ಯದ ಎಲ್ಲಾ ಅಧೀನ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ತಮ್ಮ ದೈನಂದಿನ ವ್ಯವಹಾರಗಳಲ್ಲಿ ವಿಶೇಷವಾಗಿ ತೀರ್ಪುಗಳು, ಆದೇಶಗಳು, ಜ್ಞಾಪನಾ ಪತ್ರಗಳು, ರಾಜ್ಯ ವ್ಯಾಪ್ತಿಯೊಳಗಿನ ಪತ್ರ ವ್ಯವಹಾರಗಳಲ್ಲಿ ಕನ್ನಡ ಬಳಸುವಂತೆ ಹೈಕೋರ್ಟ್‌ 2003ರ ಮಾರ್ಚ್‌ನಲ್ಲಿ ಪತ್ರ ಬರೆದು ಗಮನಸೆಳೆದಿದ್ದರೂ ಸಂಪೂರ್ಣವಾಗಿ ಕನ್ನಡ ಅನುಷ್ಠಾನವಾಗಿಲ್ಲ. ಡಿಜಿಟಲ್ ತಂತ್ರಜ್ಞಾನ ಬಂದ ಮೇಲೆ ಸಾಕಷ್ಟು ನಮೂನೆಗಳು ಇಂಗ್ಲಿಷ್‌ನಲ್ಲಿ ಬರುವುದರಿಂದ ಅದನ್ನು ಕನ್ನಡಕ್ಕೆ ಭಾಷಾಂತರಿಸುವ ಕೆಲಸವನ್ನು ಒಂದು ವಿಭಾಗ ಮಾಡುತ್ತಿದ್ದು, ಅದನ್ನು ತುರ್ತಾಗಿ ಮುಗಿಸುವುದಾಗಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರು ತಿಳಿಸಿದ್ದಾರೆ” ಎಂದು ಮಾಹಿತಿ ನೀಡಿದರು.

“ಅಧೀನ ನ್ಯಾಯಲಯಗಳಲ್ಲಿ ಸಾಕ್ಷಿಗಳನ್ನು ಕನ್ನಡದಲ್ಲಿ ಪಡೆದರೂ ತೀರ್ಪುಗಳು ಮತ್ತು ವಕಾಲತ್ತು ಇನ್ನೂ ಕನ್ನಡದಲ್ಲಿ ಬರಬೇಕಿದೆ. ಅಧೀನ ನ್ಯಾಯಾಲಯಗಳಲ್ಲಿ ರಾಜ್ಯ ಸರ್ಕಾರವು ಜಾರಿಗೆ ತಂದ ಕನ್ನಡದಲ್ಲಿರುವ ಸಮನ್ಸ್, ವಾರೆಂಟ್ ಹಾಗೂ ಇತರೆ 184 ನಮೂನೆಗಳಲ್ಲಿ ಕನ್ನಡ ಭಾಷೆಯಲ್ಲಿ ಇದ್ದಾಗ್ಯೂ ಆಂಗ್ಲಭಾಷೆಯಲ್ಲಿ ಬರೆಯುತ್ತಿರುವುದು ವಿಷಾದನೀಯ. ಬಹಳಷ್ಟು ನ್ಯಾಯಾಧೀಶರು, ರಾಜ್ಯದಲ್ಲಿ ಕನ್ನಡ ಭಾಷೆಯಲ್ಲಿ ತೀರ್ಪುಗಳನ್ನು ನೀಡುತ್ತಿದ್ದಾರೆ. ಕೆಲವು ನ್ಯಾಯಮೂರ್ತಿಗಳು ಕನ್ನಡ ಅನುಷ್ಠಾನಗೊಳಿಸಲು ವಿಮುಖ ನೀತಿ ಅನುಸರಿಸುತ್ತಿದ್ದಾರೆ. ಕಕ್ಷಿದಾರನಿಗೆ ತನಗೆ ಅರ್ಥವಾಗುವ ಭಾಷೆಯಲ್ಲಿ ತೀರ್ಪು ನೀಡಿದಾಗ ತನ್ನ ತಪ್ಪಿನ ಅರಿವಾಗುತ್ತದೆ ಮತ್ತು ನ್ಯಾಯಾಲಯದ ತೀರ್ಪಿನ ಬಗ್ಗೆ ಗೌರವ ಹೆಚ್ಚಾಗುತ್ತದೆ” ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

Also Read
ಎಲ್ಲರಿಗೂ ಹಿಂದಿ ಅಥವಾ ಇಂಗ್ಲಿಷ್‌ ತಿಳಿದಿರಬೇಕೆಂದು ಕೇಂದ್ರ ನಿರೀಕ್ಷಿಸುವಂತಿಲ್ಲ: ಮದ್ರಾಸ್‌ ಹೈಕೋರ್ಟ್‌

ಮುಖ್ಯ ನ್ಯಾಯಮೂರ್ತಿ ಹಾಗೂ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಮನವಿ ಸಲ್ಲಿಸುವಾಗ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸ ಬಾಬು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳೀಧರ, ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರುಗಳು, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು, ಮಹಾನಗರ ಪಾಲಿಕೆ ಜಾಗೃತಿ ಸಮಿತಿ ಸದಸ್ಯರು, ಬೆಂಗಳೂರು ಮತಕ್ಷೇತ್ರ ಕನ್ನಡ ಜಾಗೃತಿ ಸಮಿತಿ ಸದಸ್ಯರು ಹಾಗೂ ಕಾಯಕ ಪಡೆ ಸದಸ್ಯರುಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಆನಂತರ ನ್ಯಾಯಾಲಯಗಳಲ್ಲೂ ಕನ್ನಡ ಅನುಷ್ಠಾನಗೊಳಿಸುವ ಕುರಿತಾದ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ವಿವಿಧೆಡೆ ಅಭಿಯಾನ: ಕರ್ನಾಟಕ ಹೈಕೋರ್ಟ್‌, ಸಿವಿಲ್ ನ್ಯಾಯಾಲಯ, ಕ್ರಿಮಿನಲ್ ನ್ಯಾಯಾಲಯ, ಮೆಯೋಹಾಲ್ ನ್ಯಾಯಾಲಯ, ಕೌಟುಂಬಿಕ ನ್ಯಾಯಾಲಯ, ಜಿಲ್ಲಾ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಕನ್ನಡ ಅನುಷ್ಠಾನ ಕುರಿತಾಗಿ ಜಾಗೃತಿ ಅಭಿಯಾನ ನಡೆಸಲಾಯಿತು. ಜಿಲ್ಲೆಗಳಲ್ಲಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರುಗಳು, ಕನ್ನಡ ಜಾಗೃತಿ ಸಮಿತಿ ಸದಸ್ಯರುಗಳ ನೇತೃತ್ವದಲ್ಲಿ ಅಭಿಯಾನ ನಡೆಸಲಾಯಿತು.

Kannada Bar & Bench
kannada.barandbench.com